ದಣಿವಾರಿಸಲು ನಗರಕ್ಕೆ ಲಗ್ಗೆಯಿಟ್ಟ ಮಡಿಕೆ; ಗ್ರಾಹಕರಿಂದ ಉತ್ತಮ ಸ್ಪಂದನೆ ಕುಂಬಾರಿಕೆಗೆ ಬೇಕಿದೆ ಸರ್ಕಾರದ ಪ್ರೋತ್ಸಾಹ

ದಣಿವಾರಿಸಲು ನಗರಕ್ಕೆ ಲಗ್ಗೆಯಿಟ್ಟ ಮಡಿಕೆ; ಗ್ರಾಹಕರಿಂದ ಉತ್ತಮ ಸ್ಪಂದನೆ ಕುಂಬಾರಿಕೆಗೆ ಬೇಕಿದೆ ಸರ್ಕಾರದ ಪ್ರೋತ್ಸಾಹ

ಎಲ್.ಪಿ.ಪವನ್ ಕುಮಾರ್

ಹಾಸನ: ಬಿಸಿಲಿನ ಧಗೆ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದೆ. ಅನೇಕ ಬಗೆಯ ತಂಪು ಪಾನೀಯಗಳ ಮಧ್ಯೆ ನಾನೂ ಕೂಡ ಯಾರಿಗೂ ಕಡಿಮೆ ಇಲ್ಲ ಎಂಬಂತೆ ಮಣ್ಣಿನ ಮಡಿಕೆಗಳು ನಗರಕ್ಕೆ ಬಂದಿವೆ. ಒಂದಾನೊಂದು ಕಾಲದಲ್ಲಿ ಮನಷ್ಯನ ಜೊತೆಗಿದ್ದ ಮಡಿಕೆಗಳು ಕಾಲಾನಂತರದಲ್ಲಿ ಮರೆಯಾಗುತ್ತ ಬಂದವು. ಇದೀಗ ಹೊಸ ರೂಪದೊಂದಿಗೆ ಕೆಲ ವರ್ಷಗಳಿಂದ ಮತ್ತೆ ಮಾರುಕಟ್ಟೆಯಲ್ಲಿ ನಗೆ ಬೀರುತ್ತಿದೆ.
ದಣಿವಾರಿಸುವ ಗಣಿ: ಸಾಧಾರಣವಾಗಿ ಬೇಸಿಗೆ ಸಂದರ್ಭ ಹಲವರು ಫ್ರಿಡ್ಜ್‍ಗಳಲ್ಲಿ ನೀರನ್ನಿಟ್ಟು ತಂಪಾದ ಬಳಿಕ ಕುಡಿಯುತ್ತಾರೆ. ಆದರೆ ಮಡಿಕೆಗಳು ನೈಸರ್ಗಿಕವಾಗಿಯೇ ನೀರನ್ನು ತಂಪಾಗಿಸುವ ಶಕ್ತಿ ಒಳಗೊಂಡಿರುತ್ತದೆ. ಅಲ್ಲದೆ ಬಹುಕಾಲದವರೆಗೂ ಆಹಾರವನ್ನು ಕೆಡದಂತೆ ಸುರಕ್ಷಿತವಾಗಿಡುವ ಶಕ್ತಿ ಮಡಿಕೆಗಿದೆ.
ನಗರದಲ್ಲಿ ಮಡಿಕೆ ರಂಗು: ಬಿರು ಬೇಸಿಗೆಯ ನಡುವೆ ನಗರದ ಕೆಲ ಪ್ರದೇಶಗಳಲ್ಲಿ ಕುಂಬಾರಿಕೆ ಮಾಡುವವರೇ ಮಡಿಕೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಸಾಲಗಾಮೆ ರಸ್ತೆಯ ಸರಸ್ವತಿ ದೇವಾಲಯ ಮತ್ತು ಆರ್.ಸಿ. ರಸ್ತೆಯ ಮಿಷನ್ ಆಸ್ಪತ್ರೆ ಬಳಿಯಲ್ಲಿ ತುಮಕೂರು ಜಿಲ್ಲೆಯಿಂದ ಆಗಮಿಸಿದ ಕುಂಬಾರರು 15 ದಿನಗಳಿಗೊಮ್ಮೆ ಆಗಮಿಸಿ ಮಡಿಕೆ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ.
ವಿವಿಧ ಗಾತ್ರ-ಆಕಾರದಲ್ಲಿ ಲಭ್ಯ: ಆಧುನಿಕತೆಗೆ ತಕ್ಕಂತೆ ಕುಂಬಾರಿಕೆಯೂ ಬದಲಾಗಿದೆ. ಫಿಲ್ಟರ್ ಮಾದರಿಯ ಅರಬಿಗಳಿಗೆ ಇಂದು ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದರೊಂದಿಗೆ ಅನ್ನ, ಸಾರು ಬೇಯಿಸುವ ಮಡಿಕೆ, ಊಟದ ತಟ್ಟೆ, ಲೋಟಗಳು, ಫಿಶ್ ಫ್ರೈಗೂ ಕೂಡ ಬಳಸಬಹುದಾದ ಬಗೆಬಗೆಯ ಆಕಾರ, ಗಾತ್ರದ ಮಡಿಕೆ ಮಾದರಿಗಳು ದಾರಿಹೋಕರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.
40 ರಿಂದ 250 ರೂ.ವರೆಗೂ ಮಾರಾಟ: ವಿವಿಧ ಆಕಾರದ ಮಡಿಕೆ ಮಾದರಿಗೆ ಅದರದ್ದೇ ಆದ ಕೈಗೆಟಕುವ ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಲ್ಲಿ ದಲ್ಲಾಳಿಗೆ ಯಾವುದೇ ಪಾಲು ಹೋಗದೇ ತಯಾರಕರೇ ನೇರವಾಗಿ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ವ್ಯಾಪಾರ ನಡೆಸುತ್ತಿದ್ದಾರೆ. ಫಿಲ್ಟರ್ ಮಾದರಿಯ ಅರಬಿಗೆ ಕನಿಷ್ಟ 150 ರಿಂದ 250 ರೂ. ಹಾಗೂ ಲೋಟ, ತಟ್ಟೆ, ಅನ್ನ ಬೇಯಿಸುವ ಮುಂತಾದವುಗಳಿಗೆ 40 ರೂ.ನಿಂದ ಬೆಲೆ ಆರಂಭವಾಗುತ್ತದೆ.
ಉತ್ತಮ ಸ್ಪಂದನೆ: ಈಗಾಗಲೇ ಬಿಸಿಲಿನ ಹೊಡೆತಕ್ಕೆ ಕಂಗೆಟ್ಟಿರುವ ನಗರ ವಾಸಿಗಳು ಅಂದಿನ ಮಡಿಕೆ ನೀರೇ ಇಂದಿಗೂ ಬೆಸ್ಟ್ ಎಂಬುದನ್ನರಿತು, ಇವುಗಳ ಖರೀದಿಗೆ ಮುಂದಾಗಿದ್ದಾರೆ, ಬೇಸಿಗೆಯಲ್ಲಿ ಮಾತ್ರವೇ ಮಣ್ಣಿನ ಮಡಿಕೆಗೆ ಹೆಚ್ಚು ಬೇಡಿಕೆ ಇದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೆ ಕೊಳ್ಳುತ್ತಿದ್ದಾರೆ ಎಂಬುದು ಮಾರಾಟಗಾರರ ಮಾತಾಗಿದೆ.
ಬೇಕಿದೆ ಸೂಕ್ತ ಮಾರುಕಟ್ಟೆ: ಕುಂಬಾರಿಕೆ ಅಭಿವೃದ್ಧಿಗೆ ಸರ್ಕಾರ ಈಗಲಾದರು ಮನಸು ಮಾಡಬೇಕಿದೆ. ಜಾತಿ, ಮತ, ಧರ್ಮಗಳಿಗೊಂದು ನಿಗಮ ಮಾಡುವ ಬದಲು ನಶಿಸಿ ಹೋಗುತ್ತಿರುವ ಕುಂಬಾರಿಕೆ ಎಂಬ ಕಲೆಯ ರಕ್ಷಣೆಗೆ ನಿಲ್ಲಬೇಕಿದೆ. ಕಾಲಿಗೆ ತೊಡುವ ಶೂಗಳನ್ನು ಶೋಂ ರೂಂನಲ್ಲಿ ಮಾರಾಟ ಮಾಡುತ್ತಾರೆ. ಆದರೆ ಕುಡಿಯುವ ನೀರಿಗಾಗಿ ಬಳಸುವ ಮಣ್ಣಿನ ಮಡಿಕೆಯನ್ನ ಸುಡುಬಿಸಿಲಿನಲ್ಲಿ ರಸ್ತೆಬದಿ ಮಾರುವಂತಾಗಿದೆ. ಆಳುವ ವರ್ಗ ಮಡಿಕೆ ಮಾರಾಟ ಮಾಡಲು ಪ್ರತಿ ಜಿಲ್ಲೆಯಲ್ಲಿಯೂ ಒಂದು ಸೂಕ್ತ ಮಾರುಕಟ್ಟೆ ಪ್ರಾಂಗಣ ಮಾಡಿಕೊಡಲಿ ಎಂಬುದೇ ನಮ್ಮ ಆಶಯ.

ಪ್ರತಿಕ್ರಿಯೆ 1
ಮಡಿಕೆಯ ನೀರು ಆರೋಗ್ಯಕ್ಕೂ ಒಳ್ಳೆಯದು. ಇದು ಜೀರ್ಣಕ್ರಿಯೆಗೂ ಉತ್ತಮ. ಮಡಿಕೆಯಲ್ಲಿ ಅನ್ನ ಇತ್ಯಾದಿ ಪದಾರ್ಥಗಳನ್ನು ಬೇಯಿಸುವುದರಿಂದ ವಿಟಮಿನ್ ಅಂಶ ಆಹಾರದಲ್ಲಿ ಉಳಿಯಲಿದೆ. ಮೂಳೆಗಳ ಬಲಿಷ್ಠತೆ ಹೆಚ್ಚಿಸುವ ಗುಣವೂ ಇದ್ದು ಪೃಥ್ವಿ ಅಂಶ ಇರುವುದರಿಂದ ಶರೀರದ ಬಲ ಹೆಚ್ಚಿಸುತ್ತದೆ.
ಡಾ.ರಾಮಚಂದ್ರ, ನಿವೃತ್ತ ಆಯುಷ್ ಅಧಿಕಾರಿ

ಪ್ರತಿಕ್ರಿಯೆ 2
ತಿಪಟೂರಿನ ಲಕ್ಷ್ಮೀಪುರದಿಂದ ಮಡಿಕೆ ತಯಾರಿಸಿ ಇಲ್ಲಿಗೆ ತಂದಿದ್ದೇವೆ. ಇಷ್ಟು ಮಡಿಕೆ ಆಕೃತಿಗಳನ್ನು ಮಾಡಲು ಒಂದು ತಿಂಗಳ ಕಾಲಾವಕಾಶ ಬೇಕು. ಸಂಪೂರ್ಣ ಜೇಡಿಮಣ್ಣಿನಿಂದ ಮಡಿಕೆ ಮಾಡಲಾಗುತ್ತದೆ. ಸರ್ಕಾರ ನಮ್ಮ ಬಗ್ಗೆಯೂ ಗಮನಹರಿಸಲಿ. ಪ್ರತಿ 15 ದಿನಕ್ಕೊಮ್ಮೆ ಹಾಸನ ನಗರಕ್ಕೆ ಆಗಮಿಸಿ ಮಡಿಕೆ ಮಾರುತ್ತೇವೆ.
ಪರಮೇಶ, ಮಡಿಕೆ ಮಾರಾಟಗಾರ
ಪ್ರತಿಕ್ರಿಯೆ 3
ಹಿರಿಯರು ಮಡಿಕೆ ನೀರು ಬಳಸುವುದು ಆರೋಗ್ಯಕ್ಕೆ ಉತ್ತಮ ಎನ್ನುತ್ತಿದ್ದಾರೆ. ಕೈಗೆಟಕುವ ದರದಲ್ಲಿ ಮಡಿಕೆ ಉತ್ಪನ್ನಗಳು ದೊರೆಯುತ್ತಿರುವುದು ಸಂತಸದ ವಿಷಯ. ಬೇಸಿಗೆ ಸಮಯದಲ್ಲಿ ಮಡಿಕೆ ನೀರೆ ಉತ್ತಮ.
ಅಯೂಬ್‍ಖಾನ್, ಗ್ರಾಹಕ

ತಾಜಾ ಸುದ್ದಿಗಳು