ಸಹೋದರರಲ್ಲಿ ಗಿನಿಪಿಗ್ ತಂದ ಹಿಗ್ಗು ಮಲೆನಾಡಿನಲ್ಲಿ ವೃದ್ಧಿಯಾಗುತ್ತಿದೆ ವಿದೇಶಿ ಜೀವಿಗಳ ಸಂತತಿ

ಸಹೋದರರಲ್ಲಿ ಗಿನಿಪಿಗ್ ತಂದ ಹಿಗ್ಗು ಮಲೆನಾಡಿನಲ್ಲಿ ವೃದ್ಧಿಯಾಗುತ್ತಿದೆ ವಿದೇಶಿ ಜೀವಿಗಳ ಸಂತತಿ

ಯೋಗೇಶ್, ಸಕಲೇಶಪುರ
ಸಕಲೇಶಪುರ:
ಗಿನಿಪಿಗ್ ಈ ಹೆಸರು ಹಲವು ಮಂದಿಗೆ ಅಪರಿಚಿತ. ಆದರೆ ಇದೂ ಒಂದು ಜೀವಿ ಎಂಬುದು ಹಳೆಯ ಸಂಗತಿ. ಕನ್ನಡದಲ್ಲಿ ಇದನ್ನು ಗಿನಿಯಿಲಿ ಎಂದು ಕರೆಯುತ್ತಾರೆ. ಮುಖ್ಯವಾಗಿ ವೈದ್ಯಕೀಯ ಸಂಶೋಧನೆಗೆ ಇವುಗಳನ್ನು ಬಳಸಲಾಗುತ್ತದೆ. ವಿಶೇಷ ವೆಂದರೆ ತಾಲೂಕಿನ ನಡಹಳ್ಳಿ ಗ್ರಾಮದ ಸಹೋದರರು ಬಹು ಬೇಡಿಕೆ ಇರುವ ಗಿನಿಪಿಗ್‍ಗಳನ್ನು ಕಳೆದ 3 ವರ್ಷಗಳಿಂದ ಸಾಕಾಣಿಕೆ ಮಾಡುತ್ತಿದ್ದು, ಅಪರೂಪದ ಜೀವಿಗಳನ್ನು ಪಾಲನೆ, ಪೋಷಣೆ ಮಾಡುವುದರ ಜೊತೆಗೆ ಹೆಚ್ಚು ಹೆಚ್ಚು ಪರಿಚಯ ಮಾಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಮಲೆನಾಡಲ್ಲಿ ಹೊಸ ಪ್ರಯತ್ನ: ಮೂಲತಃ ದಕ್ಷಿಣ ಅಮೆರಿಕ ಮೂಲದ ಪ್ರಾಣಿಯಾದ ಗಿನಿಪಿಗ್ ಮೂಲ ಹೆಸರು ಕೆವಿಯಪೂರ್ಸಿಯಲೆಸ್. ವಿದೇಶಿ ಮೂಲದ ಪ್ರಾಣಿಗೂ ಮಲೆನಾಡಿಗೂ ಏನು ನಂಟು ಎಂಬ ಪ್ರಶ್ನೆಗೆ ನಡಹಳ್ಳಿಯ ಶ್ರೀಧರ ಹಾಗೂ ಶಶಿಧರ ಉತ್ತರವಾಗಿದ್ದಾರೆ. ನೋಡಿದಾಕ್ಷಣ ಮೊಲದಂತೆ ಗೋಚರಿಸುವ ಇದು ಮೂಷಕವಾಹನ(ಇಲಿ)ದಂತೆಯೂ ಭಾಸವಾಗುತ್ತದೆ. ಗಿನಿಪಿಗ್‍ಗಳನ್ನು ನೂರಾರು ಸಂಖ್ಯೆಯಲ್ಲಿ ಸಾಕಿರುವ ಸಹೋದರರು, ಇದರಿಂದ ಉತ್ತಮ ಆದಾಯ ಗಳಿಸುತಿದ್ದಾರೆ.
ವೈದ್ಯಕೀಯ-ಸಂಶೋಧನಾ ಕ್ಷೇತ್ರದಲ್ಲಿ ಬೇಡಿಕೆ: ವೈದ್ಯಕೀಯ ಸಂಶೋಧನೆಗಾಗಿ ಗಿನಿಪಿಗ್‍ಗಳನ್ನು ಹೆಚ್ಚಾಗಿ ಬಳಸುತಿದ್ದು,
ಇವುಗಳಿಗೆ ಲ್ಯಾಬೊರೇಟರಿಯಲ್ಲಿ ಬಾರಿ ಬೇಡಿಕೆ ಇದೆ ಎನ್ನಲಾಗಿದೆ. ಇದನ್ನು ಮನಗಂಡ ಸಹೋದರರು, ಕಳೆದ 3 ವರ್ಷಗಳ ಹಿಂದೆ 50 ಗಿನಿಪಿಗ್ ತಂದು ಸಾಕಣೆ ಮಾಡಲು ಆರಂಭಿಸಿದರು.
ಇಂದು ಸಹೋದರರ ಬಳಿ ಸುಮಾರು 500ಕ್ಕೂ ಹೆಚ್ಚಿನ ಗಿನಿಪಿಗ್‍ಗಳಿವೆ. ಹುಟ್ಟಿದ ವೇಳೆ ಕೇವಲ 50 ರಿಂದ 100 ಗ್ರಾಂ ತೂಕ ಹೊಂದಿರುವ ಮರಿಗಳು, 3 ರಿಂದ ನಾಲ್ಕು ತಿಂಗಳಿಗೆ 300 ರಿಂದ 400 ಗ್ರಾಂನಷ್ಟು ತೂಗುತ್ತವೆ. 3 ತಿಂಗಳ ಹೆಣ್ಣು ಗಿನಿಪಿಗ್ ಎರಡು ತಿಂಗಳಿಗೊಮ್ಮೆ ಒಂದರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತದೆ. ಹೊರ ರಾಜ್ಯದಿಂದ ಬೇಡಿಕೆ:
ಈ ಪ್ರಾಣಿಗಳಿಗೆ ಪುಣೆ, ಬೆಂಗಳೂರು, ಹೈದ್ರಾಬಾದ್ ಮೊದಲಾದ ಕಡೆಗಳಲ್ಲಿ ಬಲು ಬೇಡಿಕೆ ಇದೆ. ಇಲ್ಲಿಗೆ ಬಂದು 200 ಗ್ರಾಂ ತೂಗುವ ಗಿನಿಪಿಗ್ ಮರಿಯನ್ನು 500 ರೂ ಗಳಿಗೆ ಖರೀದಿಸುತ್ತಾರೆ. ಸಮಾನ್ಯವಾಗಿ 4 ರಿಂದ 8 ವರ್ಷಗಳ ವರಗೆ ಬದುಕುವ ಒಂದು ಗಿನಿಪಿಗ್, ತನ್ನ ಜೀವಿತಾವಧಿಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಆದಾಯಗಳಿಸಿಕೊಡುತ್ತದೆ ಎಂಬುದು ಸಾಕಾಣಿಕೆದಾರರ ಮಾತಾಗಿದೆ. ಯಾವುದೇ ವಾಸನೆ ಇಲ್ಲದಿರುವುದು ಒಂದೆಡೆಯಾದರೆ, ಇದನ್ನು ಸಾಕಲು ಹೆಚ್ಚಿನ ಶ್ರಮ ಬೇಕಿಲ್ಲ. ಗಿನಿಪಿಗ್‍ಗಳಿಗೆ ಗರಿಕೆಹುಲ್ಲು, ಕಾಡಿನ ಎಲೆಗಳೇ ಪ್ರಮುಖ ಆಹಾರ. ರೋಗ ನಿರೋಧಕ ಶಕ್ತಿ ಹೆಚ್ಚಿರುವುದರಿಂದ ಇವುಗಳಿಗೆ ಸಾಮಾನ್ಯವಾಗಿ ಯಾವುದೇ ಕಾಯಿಲೆಗಳು ಬಾಧಿಸುವುದಿಲ್ಲ ಎನ್ನಲಾಗಿದೆ. ಹೀಗಾಗಿಯೇ
ಮಲೆನಾಡಿನ ಜನರು ಅವಲಂಬಿಸಿರುವ ಕಾಫಿ, ಏಲಕ್ಕಿ, ಕರಿಮೆಣಸು ಹಾಗೂ ಭತ್ತ, ಹಸಿರು ಮೆಣಸಿನಕಾಯಿ ಬೆಳೆ, ಜಾನುವಾರು, ಹಂದಿ ಸಾಕಣೆ, ತರಕಾರಿ ಬೆಳೆಯಂತಹ ಉಪಕಸುಬುಗಳಿಗೆ ಹೋಲಿಸಿದರೆ ಗಿನಿಪಿಗ್ ಸಾಕಾಣಿಕೆ ಸುಲಭ ಎನ್ನುತ್ತಾರೆ ಸಹೋದರರು.
ಮಾಂಸಕ್ಕಾಗಿಯೂ ಬಳಕೆ: ಮೂಲತಃ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ಪ್ರಾಣಿಯನ್ನು ಸಾಕುಪ್ರಾಣಿಗಳಾಗಿ ಸಾಕುವ ಪ್ರವೃತ್ತಿ ಇದ್ದರೆ, ಅಮೆರಿಕ, ಆಫ್ರಿಕಾ ಖಂಡಗಳಲ್ಲಿ ಇವುಗಳನ್ನು ಮಾಂಸಕ್ಕಾಗಿ ಬಳಸುತ್ತಾರೆ. ಗಿನಿಪಿಗ್ ಮಾಂಸ ಅಸ್ತಮಾ ರೋಗಕ್ಕೆ ರಾಮಬಾಣ ಜೊತೆಗೆ ಗರ್ಭೀಣಿಯರಿಗೆ ಇದರ ಮಾಂಸ ಬಲುಪೌಷ್ಟಿಕ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲೂ ಸಹಕಾರಿ ಎಂದು ತಿಳಿದು ಬಂದಿದೆ.
ಪ್ರತಿಕ್ರಿಯೆ1
ಮೊಲ ಸಾಕಾಣಿಕೆ ಮಾಡುತ್ತಿದ್ದ ವೇಳೆ ನನಗೆ ಪರಿಚಿತ ವೈದ್ಯಕೀಯ ಸಂಶೋಧಕರೊಬ್ಬರು ಗಿನಿಪಿಗ್ ಉಪಯೋಗದ ಬಗ್ಗೆ ಹೇಳಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಅರಿವಿಲ್ಲದಿದ್ದರೂ, ಹುಲಿಯೂರು ದುರ್ಗದಿಂದ ಮೊದಲು ಗಿನಿಪಿಗ್ ಮರಿಗಳನ್ನು ತಂದು ಸಾಕಾಣಿಕೆ ಮಾಡಲು ಆರಂಭಿಸಿದೆ. 1 ಯುನಿಟ್ ಅಂದರೆ 20 ಹೆಣ್ಣು ಹತ್ತು 10 ಗಂಡು ಗಿನಿಪಿಗ್‍ಗಳಿಗೆ 50 ಸಾವಿರ ದರ ನಿಗದಿಪಡಿಸುತ್ತಿದ್ದು,ಹುಟ್ಟಿದ ಒಂದು ತಿಂಗಳಿಗೆ ಮರಿಗಳನ್ನು ಮಾರಾಟ ಮಾಡಬಹುದಾಗಿದ್ದು ಉತ್ತಮ ಆದಾಯ ಗಳಿಸಬಹುದಾಗಿದೆ.
– ಶಶಿಧರ್ ಮತ್ತು ಶ್ರೀಧರ್, ಗಿನಿಪಿಗ್ ಸಾಕಣೆದಾರರು

ತಾಜಾ ಸುದ್ದಿಗಳು