ಒಂದೂ ಶತಕವಿಲ್ಲ.. ಆದರೂ ವಿಶ್ವ ದಾಖಲೆ ಬರೆದ ಭಾರತ-ಇಂಗ್ಲೆಂಡ್ ಪಂದ್ಯ

ಒಂದೂ ಶತಕವಿಲ್ಲ.. ಆದರೂ ವಿಶ್ವ ದಾಖಲೆ ಬರೆದ ಭಾರತ-ಇಂಗ್ಲೆಂಡ್ ಪಂದ್ಯ

ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಏಕದಿನ ಪಂದ್ಯ ಹಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿತ್ತು. ಅಂತೆಯೇ ಇದೀಗ ವಿಶ್ವ ದಾಖಲೆಯೊಂದು ಈ ಪಂದ್ಯದ ಮುಡಿಗೇರಿದೆ.

ಹೌದು.. ಸರಣಿ ಗೆಲುವಿನ ನಿಟ್ಟಿನಲ್ಲಿ ಉಭಯ ತಂಡಗಳಿಗೂ ಅತ್ಯಂತ ಪ್ರಮುಖವಾಗಿದ್ದ ಮೂರನೇ ಏಕದಿನ ಪಂದ್ಯ ಅಶ್ರರಶಃ ಪೈನಲ್ ಪಂದ್ಯವಾಗಿತ್ತು. ಉಭಯ ತಂಡಗಳು ಪೈಪೋಟಿಗೆ ಬಿದ್ದವರಂತೆ ಗೆಲುವಿಗಾಗಿ ಕಾದಾಟ ನಡೆಸಿದರು. ಅಂದರೆ ಅಂತಿಮವಾಗಿ ಅದೃಷ್ಟ ಎಂಬಂತೆ ವಿಜಯ ಲಕ್ಷ್ಮಿ ಭಾರತಕ್ಕೆ ಒಲಿದಿದೆ.

ಈ ಪಂದ್ಯದಲ್ಲಿ ಭಾರತ ನೀಡಿದ್ದ 330 ರನ್ ಗಳ ಬೃಹತ್ ಗುರಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ನಿಗಧಿತ 50 ಓವರ್ ಗಳಲ್ಲಿ 322 ರನ್ ಗಳಿಸಿ 7 ರನ್ ಗಳ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಭಾರತ ಪರ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ವಿಶ್ವ ದಾಖಲೆ ಬರೆದರೆ, ಇಂಗ್ಲೆಂಡ್ ಪರ ಸ್ಫೋಟಕ ಇನ್ನಿಂಗ್ಸ್ ಆಡಿದ ಸ್ಯಾಮ್ ಕರ್ರನ್ ದಾಖಲೆ ನಿರ್ಮಾಣ ಮಾಡಿದ್ದರು.

ಇದೀಗ ಇಡೀ ಪಂದ್ಯ ವಿಶ್ವ ದಾಖಲೆಯೊಂದನ್ನು ಬರೆದಿದೆ ಎಂಬುದು ಅಂಕಿಅಂಶಗಳಿಂದ ತಿಳಿದುಬಂದಿದೆ.

ಹೌದು.. ಪಂದ್ಯವೊಂದರಲ್ಲಿ ಯಾವುದೇ ತಂಡದ ಬ್ಯಾಟ್ಸ್ ಮನ್ ವೈಯುಕ್ತಿಕ ಶತಕ ದಾಖಲಿಸದೇ ಗರಿಷ್ಠ ರನ್ ಗಳು ದಾಖಲಾದ 2ನೇ ಪಂದ್ಯ ಎಂಬ ಕೀರ್ತಿಗೆ ಈ 3ನೇ ಏಕದಿನ ಪಂದ್ಯ ಭಾಜನವಾಗಿದೆ. ಯಾವುದೇ ಬ್ಯಾಟ್ಸ್ ಮನ್ ಶತಕ ದಾಖಲಿಸದೇ ಗರಿಷ್ಠ ರನ್ ಸಿಡಿಸಿದ ಪಂದ್ಯಗಳ ಪಟ್ಟಿಯಲ್ಲಿ ನಿನ್ನೆಯ ಪಂದ್ಯ 2ನೇ ಸ್ಥಾನ ಪಡೆದಿದೆ.

ಇದಕ್ಕೂ ಮೊದಲು 2002ರಲ್ಲಿ ಪೋರ್ಟ್ ಎಲಿಜೆಬೆತ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಚ್ರೇಲಿಯಾ ನಡುವಿನ ಪಂದ್ಯ ಅಗ್ರ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಬರೊಬ್ಬರಿ 656 ರನ್ ಗಳು ದಾಖಲಾಗಿತ್ತು. ದಕ್ಷಿಣ ಆಫ್ರಿಕಾ ನೀಡಿದ್ದ 327 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ 330 ರನ್ ಗಳಿಸಿ ಜಯಭೇರಿ ಭಾರಿಸಿತ್ತು. ಈ ಪಂದ್ಯ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. 2ನೇ ಸ್ಥಾನದಲ್ಲಿ ನಿನ್ನೆಯ ಪುಣೆ ಪಂದ್ಯವಿದೆ.

ತಾಜಾ ಸುದ್ದಿಗಳು