ಮದ್ಯದ ‘ಕಿಕ್’ ಇಳಿಸಿದ ಕೊರೊನಾ ಅಬಕಾರಿ ಆದಾಯ ಖೋತಾ: ಗುರಿ ಸಾಧನೆಗೆ ಹಿನ್ನಡೆ

ಮದ್ಯದ ‘ಕಿಕ್’ ಇಳಿಸಿದ ಕೊರೊನಾ ಅಬಕಾರಿ ಆದಾಯ ಖೋತಾ: ಗುರಿ ಸಾಧನೆಗೆ ಹಿನ್ನಡೆ

ಎಲ್.ಪಿ.ಪವನ್ ಕುಮಾರ್
ಹಾಸನ:
ಸರ್ಕಾರದ ಶ್ರೀಮಂತ ಇಲಾಖೆಗಳಲ್ಲಿ ಒಂದೆನಿಸಿರುವ ಅಬಕಾರಿ ಇಲಾಖೆಗೂ ಮಹಾಮಾರಿ ಕೊರೊನಾ ಬಿಸಿ ತಟ್ಟಿದೆ. 2019-20 ನೇ ಸಾಲಿನಲ್ಲಿ ಹಾಸನ ಜಿಲ್ಲೆಯ ಅಬಕಾರಿ ಇಲಾಖೆ ಉತ್ತಮ ಸಾಧನೆ ಮಾಡಿತ್ತಾದರೂ. 2020-21 ರ ಆರ್ಥಿಕ ವರ್ಷದಲ್ಲಿ ನಿರೀಕ್ಷಿತ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಷ್ಟದ ಪ್ರಮಾಣ: ಇಲಾಖೆಯ ಅಧಿಕೃತ ಮಾಹಿತಿಯನ್ವಯ ಜಿಲ್ಲಾ ವ್ಯಾಪ್ತಿಯಲ್ಲಿ ಜನವರಿ 2020 ರಿಂದ ಡಿಸೆಂಬರ್ 2020 ರ ವರೆಗೆ 23,34,515 ಬಾಕ್ಸ್ ಮದ್ಯ ಮಾರಾಟವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ ಡಿಸೆಂಬರ್ 2020 ರ ಅಂತ್ಯಕ್ಕೆ 39,955 ಬಾಕ್ಸ್ ನಷ್ಟವುಂಟಾಗಿದೆ. ಇದಕ್ಕೆ ಕೊರೊನಾ ಲಾಕ್‍ಡೌನ್ ಎಫೆಕ್ಟ್ ಪ್ರಮುಖ ಕಾರಣವಾಗಿದ್ದು, ಈ ಮೂಲಕ ನಿರ್ದಿಷ್ಟ ರಾಜಸ್ವ ಸಂಗ್ರಹಕ್ಕೆ ಪೆಟ್ಟು ಬಿದ್ದಿದೆ.
ಅಂಕಿ-ಅಂಶ: 2019 ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೆ 23,74,470 ಬಾಕ್ಸ್ ಮದ್ಯ ಮಾರಾಟವಾಗಿದ್ದು, 2020 ರ ಜನವರಿಯಿಂದ ಡಿಸೆಂಬರ್ ವರೆಗೆ 23,34,515 ಬಾಕ್ಸ್ ಮಾತ್ರ ಮದ್ಯ ಮಾರಾಟವಾಗಿದೆ. ಲಾಕ್‍ಡೌನ್‍ನಿಂದ ಸುಮಾರು ಒಂದೂವರೆ ತಿಂಗಳು ಎಲ್ಲಾ ಮದ್ಯದಂಗಡಿ ಮುಚ್ಚಿದ್ದು ಮಾರಾಟ ಇಳಿಕೆಗೆ ಮೂಲ ಕಾರಣ.ಈ ಕಾರಣಕ್ಕೆ ನಿರೀಕ್ಷಿತ ಗುರಿ ತಲುಪಲಾಗಿಲ್ಲ ಎಂಬುದು ಅಧಿಕಾರಿಗಳ ಮಾತು.
ಬಾಕ್ಸ್
ಪಂಚಾಯ್ತಿ ಚುನಾವಣೆಯಲ್ಲಿ ಅಧಿಕ ಮಾರಾಟ:
ಕಳೆದ ಸೆಪ್ಟಂಬರ್ ನಂತರ ಮದ್ಯ ಮಾರಾಟದಲ್ಲಿ ಏರಿಕೆ ಕಂಡಿತು. ಡಿಸೆಂಬರ್‍ನಲ್ಲಿ ಘೋಷಣೆಯಾದ ಗ್ರಾ.ಪಂ ಚುನಾವಣೆ ಸಂದರ್ಭ ಜಿಲ್ಲೆಯಾದ್ಯಂತ ಹೆಚ್ಚಿನ ಮದ್ಯ ಮಾರಾಟವಾಗಿದೆ.
2020 ರ ಅಕ್ಟೋಬರ್‍ನಲ್ಲಿ ಕಳೆದ ವರ್ಷಕ್ಕಿಂತ 20,053 ಬಾಕ್ಸ್ ಹೆಚ್ಚು ಮಾರಾಟವಾಗಿದ್ದು, ಒಟ್ಟು 2,22,467 ಬಾಕ್ಸ್ ಮದ್ಯ ಸೇಲ್ ಆಗಿದೆ. ನವೆಂಬರ್‍ನಲ್ಲಿ 19,004 ಹೆಚ್ಚುವರಿ ಬಾಕ್ಸ್‍ಗಳೊಂದಿಗೆ 2,18,859 ಬಾಕ್ಸ್ ಮದ್ಯ ಮಾರಾಟವಾಗಿದೆ.
ಗ್ರಾ.ಪಂ. ಚುನಾವಣೆ ವೇಳೆ ಡಿಸೆಂಬರ್ ನಲ್ಲಿ ಕಳೆದ ವರ್ಷಕ್ಕಿಂತ 59,977 ಹೆಚ್ಚವರಿ ಬಾಕ್ಸ್ ಸೇರಿ ಬರೋಬ್ಬರಿ 2,68,358 ಬಾಕ್ಸ್ ಮದ್ಯ ಎಂಬ ಮಾಹಿತಿ ಲಭ್ಯವಾಗಿದೆ.
ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಮದ್ಯ ಹಂಚಿಕೆ ಮಾಡಿರುವುದು ಒಂದೆಡೆಯಾದರೆ, ಹೊಸ ವರ್ಷಾಚರಣೆ ಹೆಚ್ಚಿನ ಮದ್ಯ ಬಿಕರಿಯಾಗುವಂತೆ ಮಾಡಿದೆ.
15 ಎನ್‍ಡಿಪಿಎಸ್ ಪ್ರಕರಣ ದಾಖಲು: ಗಾಂಜಾ ಹಾಗೂ ಇತರೆ ನಾರ್ಕೋಟಿಕ್ಸ್ ಡ್ರಗ್ ಬಳಕೆ ರಾಜ್ಯಾದ್ಯಂತ ಹೆಚ್ಚುತ್ತಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ ಜುಲೈ 2020 ರಿಂದ ಡಿಸೆಂಬರ್ ವರೆಗೆ 15 ಎನ್‍ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ. 80.730 ಕೆ.ಜಿ. ಹಸಿ ಗಾಂಜಾ ಹಾಗೂ 2.788 ಕೆ.ಜಿ. ಒಣ ಗಾಂಜಾ ವಶಪಡಿಸಿ ಕೊಂಡು ಆರೋಪಿಗಳನ್ನು ಶಿಕ್ಷೆಗೆ ಗುರಿಪಡಿಸಲು ಇಲಾಖೆ ಪರಿಣಾಮಕಾರಿ ಕೆಲಸ ಮಾಡುತ್ತಿದೆ ಎಂದು ಅಧಿಕಾರಿಗಳ ಹೇಳಿಕೆಯಾಗಿದೆ.
406 ಲೀಟರ್ ಅಕ್ರಮ ಮದ್ಯ ವಶ: ಅಕ್ರಮ ಮದ್ಯ ಮಾರಾಟ ಸಂಬಂಧ
331 ಲಘು ಪ್ರಕರಣ ದಾಖಲಿಸಲಾಗಿದೆ. ಜೊತೆಗೆ 70 ಘೋರ (ಜಾಮೀನು ರಹಿತ) ಪ್ರಕರಣ ಸೇರಿ ಒಟ್ಟಾರೆ 406.175 ಲೀಟರ್ ಮದ್ಯ, 7.500 ಲೀಟರ್ ಬಿಯರ್, 76 ಲೀಟರ್ ಸೇಂದಿ ಒಳಗೊಂಡಂತೆ 19 ವಾಹನ ಜಪ್ತಿ ಮಾಡಿ ಆರೋಪಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.
ಆಕರ್ಷಣೆಗೆ ಒಳಗಾಗಬೇಡಿ: ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಮಾದಕ ವಸ್ತು ಹಂಚಿಕೆ ಜಾಲ ಪತ್ತೆಯಾಗಿದ್ದು, ಅಬಕಾರಿ ಇಲಾಖೆ ಕಟ್ಟೆಚ್ಚರ ವಹಿಸಿದೆ.
ಯುವಕರು ಡ್ರಗ್ಸ್, ಗಾಂಜಾ ಮುಂತಾದ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಿರ್ವಹಿಸಬೇಕು. ಇಲ್ಲವಾದರೆ ಶಿಕ್ಷೆ ಗ್ಯಾರಂಟಿ. ಈ ನಿಟ್ಟಿನಲ್ಲಿ ಕ್ಷಣದ ಅಮಲಿನ ಆಕರ್ಷಣೆಗೆ ಬಲಿಯಾಗಬೇಡಿ ಎಂಬುದು ಎಲ್ಲರ ಮನವಿಯಾಗಿದೆ.

ಪ್ರತಿಕ್ರಿಯೆ
ಜಿಲ್ಲಾ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ದಂಧೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ತೀವ್ರ ನಿಗಾ ಇರಿಸಿದೆ. ಕಳ್ಳಭಟ್ಟಿ ಕಚ್ಛಾ ವಸ್ತು ಹಾಗೂ ಕೊಳೆತ ಬೆಲ್ಲ ಮಾರಾಟ ಮಾಡುವವರ ಮೇಲೆ ಪ್ರಸಕ್ತ ಸಾಲಿನಲ್ಲಿ 28 ಜಾಮೀನು ರಹಿತ ಪ್ರಕರಣ ದಾಖಲಿಸಿ 14 ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ 8 ವಾಹನ, 137 ಲೀಟರ್ ಕಳ್ಳಭಟ್ಟಿ ಸಾರಾಯಿ ಮತ್ತು 515 ಲೀಟರ್ ಬೆಲ್ಲದ ಕೊಳೆ ವಶಪಡಿಸಿ ಕೊಂಡು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದಂತೆ ಹಾಗೂ ಡ್ರಗ್ಸ್ ಮೋಹಕ್ಕೆ ಒಳಗಾಗದಂತೆ ತಡೆಯಲು ಜಾಗೃತಿ ಮೂಡಿಸಲಾಗಿದೆ.
-ಗೋಪಾಲಕೃಷ್ಣ ಗೌಡ,
ಅಬಕಾರಿ ಉಪ ಆಯುಕ್ತ

ತಾಜಾ ಸುದ್ದಿಗಳು