ಎಮ್ಮೆಗುಂಡಿಯ ಆ ಒಂದು ದಿನ…

ಎಮ್ಮೆಗುಂಡಿಯ ಆ ಒಂದು ದಿನ…

ದಟ್ಟ ಕಾಡು, ಕಾಡ ಸೆರಗಿನ ಊರು.. ಊರ ಜನರ ಹಾಡುಪಾಡನ್ನು ಬದುಕಿ ತೋರಿಸಿದ ನಾಟಕದ ಪಟಾಲಂ ; ಹರಿವ ನೀರಿಗೆ ಮೈಯೊಡ್ಡಿ ಭರಪೂರ ಹೊಸತನದಿಂದ ಕಳೆದ ಒಂದು ಬೆಳಗು ಮತ್ತು ಸಂಜೆ..! ಕೆಲ ಗುಂಗುಗಳಿಂದ ಆಚೆಗೆ ಬರಲಾಗುವುದಿಲ್ಲ.
**
ಮಲೆಸೀಮೆಯ ಸೌಂದರ್ಯದೊಳಗಿರುವ ಹೋರಾಟದ ಬದುಕನ್ನು ವ್ಯಾಖ್ಯಾನಿಸುವುದು ಕಷ್ಟಸಾಧ್ಯ. ಅದನ್ನು ಇದ್ದಹಾಗೆಯೇ ಬದುಕಿಕೊಂಡವರನ್ನು ಅರ್ಥೈಸಿಕೊಳ್ಳುವುದಕ್ಕೆ ಪಠ್ಯಕ್ರಮ ಅಲ್ಲ.. ಜೀವನಕ್ರಮವನ್ನ ನಿರೂಪಿಸಬೇಕಾಗುತ್ತದೆ. ಅದೇ ಭಾಷೆ, ಅದೇ ಜನ, ಅದೇ ಹೆಸರು ಮತ್ತು ಅದೇ ಅಪ್ಪಟ ತಳಮಳಗಳು – ಹಾಡ್ಲಹಳ್ಳಿ ನಾಗರಾಜ್‍ರವರು ನಿಲುವಂಗಿಯ ಕನಸನ್ನು ಕಟ್ಟಿಕೊಟ್ಟ ರೀತಿ ಅಲ್ಲಿನ ನಿಜದ ಬದುಕಿಗೆ ಸಮಾನಾಂತರವಾದದ್ದು. ರಕ್ಷಿದಿ ಪ್ರಸಾದ್‍ರವರು ಅಷ್ಟೇ ಅಪ್ಪಟವಾಗಿ ರಂಗರೂಪಕ್ಕೆ ತಂದದ್ದನ್ನು ಉಲಿವಾಲ ಮೋಹನ್ ನಿರ್ದೇಶನದ ರಂಗಹೃದಯ ತಂಡ ಹೃದಯಸ್ಪರ್ಶಿಯಾಗಿ ಪ್ರದರ್ಶಿಸಿತು. ಸ್ಟೇಜ್-ಲೈಟ್-ಸೌಂಡ್ ಅಷ್ಟು ಮುಖ್ಯ ಅಲ್ಲ ಅನ್ನಿಸಿದ್ದಕ್ಕೆ ಎಮ್ಮೆಗುಂಡಿಯ ಪರಿಸರಕ್ಕೆ ಅಭಿನಂದಿಸಬೇಕು. ಈ ಒಂದಿಡೀ ದಿನದ ಬಿಸಿಲಿಗೆ ಬಣ್ಣ ಕುಂದಿಸಿಕೊಂಡು ಬಂದ ನಮ್ಮಂತ ನಾಜೂಕಿನ ನಗರವಾಸಿಗಳಿಗೆ ಸಮಯ ಕಳೆಯುತ್ತಿದೆ ಅನ್ನುವುದರ ಅರಿವು ಅಲ್ಲಿದ್ದ ಅಷ್ಟೂ ಹೊತ್ತು ಗಮನಕ್ಕೆ ಬರದ ಹಾಗೆ ಅಲ್ಲೊಂದು ಆಹ್ಲಾದಕರವಾದ ವ್ಯವಸ್ಥೆ ಮಾಡಲಾಗಿತ್ತು..

ಅಚ್ಚ ಹೊಸ ಪ್ರಯತ್ನಗಳನ್ನು ಮಾಡುವಾಗ ಗೆರೆ ಮುಟ್ಟುವ ಕುರಿತಾಗಿ ಅನುಮಾನಗಳಲ್ಲದಿದ್ದರೂ ಸಣ್ಣ ಹಿಂಜರಿಕೆಗಳಿರುತ್ತವೆ.. ಸಾಮಾನ್ಯವಾಗಿ ಇದ್ದೇ ಇರುತ್ತವೆ. ಆದರೆ ಚಲಂ ಅನ್ನುವ ಭರ್ತಿ `ಕಾಡು’ಮನುಷ್ಯನಿಗೆ ಒಂದು ಸಣ್ಣ ಕಲ್ಪನೆಯನ್ನಿಟ್ಟುಕೊಂಡು ವಿಶಾಲತೆಯ ಕಡೆಗೆ ನುಗ್ಗುವುದು ಅಭ್ಯಾಸವಾಗಿ ಹೋಗಿದೆ, ಅಲ್ಲಿ ಹಿಂಜರಿಕೆಗಳಿಗೂ ಆಸ್ಪದವಿರುವುದಿಲ್ಲ. ‘ಎಮ್ಮೆಗುಂಡಿಯಲ್ಲೊಂದು ದಿನ’ ಇದನ್ನ ಸಾಬೀತು ಪಡಿಸಿತು. ನೂರಾರು ಕಿ.ಮೀ ದೂರದಿಂದ ಜನ ಬಂದಿದ್ದರು ಅನ್ನುವುದು ಇದಕ್ಕೆ ಸಾಕ್ಷಿಯಾಯಿತು ಅನ್ನುವುದಕ್ಕಿಂತ, ಗಾಳಿಗೆ ಹಂಚಿಹೋದ ಪಕಳೆಗಳಂತೆ ಅಲ್ಲೊಂದು ಇಲ್ಲೊಂದಿದ್ದ ಊರುಮನೆಯ ಹೆಣ್ಮಕ್ಕಳು ಒಟ್ಟೊಟ್ಟಿಗೆ ಮುಂದಿನ ಸಾಲಲ್ಲಿ ಕೂತು ನಿಲುವಂಗಿಯ ಕನಸಿನ ಪರಿಯನ್ನು ತಮಗೆ ಗೊತ್ತಿಲ್ಲದೆ ತಮಗೇ ಆಪಾದಿಸಿದ.. ಆಸ್ವಾದಿಸಿದ ರೀತಿ ಮುಖ್ಯವೆನಿಸಿತು.

ಪಾರ್ಕಿಂಗ್ ವ್ಯವಸ್ಥೆಯಿಂದ ತಿಂಡಿಗೆ, ಅಲ್ಲಿಂದ ನಾಟಕದ ಜಾಗಕ್ಕೆ.. ಮತ್ತೆ ಊಟ ಪ್ರತಿಯೊಂದು ಬೇರೆ ಬೇರೆ ದಿಕ್ಕುಗಳೇ. ಸಾಮಾಜಿಕ ನಾಟಕದ ಪ್ರದರ್ಶನದಲ್ಲಿ ಒಬ್ಬ ಆಯೋಜಕ ಪ್ರೇಕ್ಷಕನನ್ನು ಕೂಡಿಟ್ಟುಕೊಳ್ಳಲು ಮಾಡಬಹುದಾದ ಎಲ್ಲಾ ತಂತ್ರಗಳನ್ನು ಎಚ್ಚರಿಕೆಯಿಂದ ಬಳಸಲಾಗಿತ್ತು. ಹಾಗಾಗಿ ಸುಡುಬಿಸಿಲಿನ ತಾಪದಲ್ಲೂ ಎರಡೂವರೆ ಗಂಟೆಯ ನಾಟಕ ಪ್ರದರ್ಶನಕ್ಕೆ ನೋಡುಗರು ಹೆಚ್ಚಾಗುತ್ತಾ ಹೋದರೆ ವಿನಾ ಕಡಿಮೆಯಾಗಲಿಲ್ಲ. ಅಲ್ಲಿ ಸಾಹಿತ್ಯ-ಸಾಂಸ್ಕøತಿಕ ಆಸಕ್ತಿಯ ಬರಹಗಾರರು ದೂರದ ಊರುಗಳಿಂದ ಬಂದಿದ್ದರು ಮಾತ್ರವಲ್ಲದೇ ಅಕ್ಷರಸ್ಥ-ಅನಕ್ಷರಸ್ಥರೆನ್ನದೆ ಅಧಿಕಾರಿಗಳು, ವೈದ್ಯರು, ಉದ್ಯಮಿಗಳು ಹೀಗೇ ಭಿನ್ನ ಪ್ರೇಕ್ಷಕರ ದಂಡೇ ನೆರೆದಿತ್ತು. ಹೆಚ್ಚೆಂದರೆ ಆಪ್ತ ಬಳಗ ಸೇರಬಹುದು ಎಂದುಕೊಂಡು ಹೋಗಿದ್ದ ನಮ್ಮ ನಿರೀಕ್ಷೆಗೂ ಮೀರಿ ನಾಲ್ಕುನೂರಕ್ಕೂ ಹೆಚ್ಚು ಜನ ಕಂಡಾಗ ಆಶ್ಚರ್ಯವಾಗಿದ್ದಂತು ನಿಜ.

ಸಾಹಿತ್ಯ ಮತ್ತು ಸಂಸ್ಕøತಿಗೆ ಪ್ರಾದೇಶಿಕತೆಯ ಹಿನ್ನೆಲೆ ಇದ್ದೇ ಇರುತ್ತದೆ. ಮತ್ತು ಆ ಪ್ರದೇಶದ.. ಆ ಕಾಲಘಟ್ಟದ ಸಂವೇದನೆಗಳನ್ನು ದಾಟಿಸಲು ಅದೇ ಪ್ರಾದೇಶಿಕತೆಯನ್ನು ಬಳಸಿಕೊಂಡಾಗ ಅದರ ಪ್ರಭಾವ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಕಾಡಾನೆಗಳ ದಾಳಿಗೆ ಸಿಕ್ಕಿ ನಲುಗುತ್ತಿರುವ ಮಲೆನಾಡಿನ ಜನರ ಸಂಕಷ್ಟಗಳು ರಸ್ತೆಬದಿಯ ಪ್ರತಿಭಟನೆಗಳಾಗಿ ನಿತ್ಯ ಸುದ್ದಿಯಾಗುತ್ತವಷ್ಟೇ. ಅಲ್ಲಿಂದ ಬಹಳ ದೂರದ ನಮಗೆ ಮನೆ ಬಾಗಿಲಿಗೆ ಬಂದ ಆನೆಗಳು ತರುವ ಪ್ರಾಣಸಂಕಟದ ಅರಿವಿರುವುದಿಲ್ಲ. ನಾಟಕಕ್ಕೆ ಹಾಕಲಾಗಿದ್ದ ಪುಟ್ಟ ನೈಸರ್ಗಿಕ ಸೆಟ್‍ನ ಪಕ್ಕದಲ್ಲೇ ಹಿಂದಿನ ದಿನವಷ್ಟೇ ಬಂದುಹೋಗಿದ್ದ ಕುರುಹಿಗೆ ಬಿದ್ದಿದ್ದ ತಾಜಾ ಆನೆ ಲದ್ದಿ ಅಲ್ಲಿಗೆ ಬಂದ ವಿಭಿನ್ನ ನೆಲೆಗಳೆಲ್ಲರನ್ನೂ ಒಂದುಕ್ಷಣ ಯೋಚನೆಗೀಡು ಮಾಡಿದ್ದರೆ ಚಲಂ ಮತ್ತು ಬಳಗದ ಶ್ರಮ ಸಾರ್ಥಕ. ಮಲೆನಾಡಿನ ಸೌಂದರ್ಯ ತನ್ನೊಳಗೆ ತುಂಬಿಕೊಂಡಿರುವ ರುದ್ರತೆಗಳನ್ನು ರೆಸಾರ್ಟ್‍ಗಳು ಪರಿಚಯಿಸುವುದಿಲ್ಲ, ಆ ನಿಟ್ಟಿನಲ್ಲಿ ಕಾರ್ಯಕ್ರಮ ಹೆಚ್ಚು ಅರ್ಥಪೂರ್ಣವೆನಿಸಿತು.
ನಾಟಕದಲ್ಲಿನ ಪಾತ್ರಗಳನ್ನು ನೋಡಿ ತಮ್ಮನ್ನು ಅಲ್ಲಿ ಕಂಡುಕೊಂಡಂತೆ `ಏಲಕ್ಕಿ ಬೆಳೆವಾಗ ರಾಜರಂತಿದ್ವಿ, ಕಾಫಿ ಬೆಳೆಗಿಳಿದು ತಪ್ಪು ಮಾಡಿದ್ವಿ’ ಅನ್ನುವ ಅಲ್ಲಿನ ಜನಗಳನ್ನು ನೋಡುವಾಗ ಮಲೆನಾಡಿಗರ ಗತ್ತು-ಗಮ್ಮತ್ತುಗಳು ಪ್ಲಾಂಟರ್ ಸೋಗಿನಲ್ಲಿ ಹೇಗೆ ನರಳುತ್ತಿವೆ ಅನ್ನುವುದರ ಅರಿವು ಮೂಡಿಸುತ್ತದೆ. ರೈತರ ಬವಣೆಗಳು ಬಹಳಷ್ಟು.. ಅದಕ್ಕೆ ಸ್ಪಂದಿಸಬಹುದಾದ ರೀತಿಗೆ ಹಲವು ಬಗೆಗಳಿರುತ್ತವೆ. ಪ್ರತಿಭಟನೆಗಳ ಹಲವು ಆಯಾಮದಲ್ಲಿ ಸಾಂಸ್ಕøತಿಕ ಪ್ರತಿಭಟನೆಯೂ ಒಂದು. ‘ನಿಲುವಂಗಿಯ ಕನಸು’ ಅಂತಹದ್ದೊಂದು ಪ್ರತಿಭಟನೆಯಾಗುವತ್ತ ಪ್ರಯತ್ನಿಸಿತು ಅನ್ನುವುದರಲ್ಲಿ ಎರಡು ಮಾತಿಲ್ಲ. ಅದರಾಚೆಗೆ ಒಂದಷ್ಟು ಏರು-ಪೇರುಗಳಿದ್ದರೂ ಇಂತಹದ್ದೊಂದು ಸಾಹಸಮಯ ಪ್ರಯತ್ನಕ್ಕೆ ಸಾತ್ ಖೂನ್ ಮಾಫ್. ಹಾಗೂ ಹೀಗೂ ಸುಂದರ ವಾರಾಂತ್ಯಕ್ಕೆ ಒಂದೊಳ್ಳೆಯ ಅನುಭವ ದಕ್ಕಿಸಿ ಕೊಟ್ಟದ್ದಕ್ಕೆ, ಚಾರಣ-ನಾಟಕ-ನೀರಾಟ-ಅಚ್ಚುಕಟ್ಟಾದ ಹೊಟ್ಟೆಬಿರಿವಷ್ಟು ಶುಚಿ-ರುಚಿ ಕಾಡೂಟ ಮಾಡಿಸಿ ಹೊಸ ಸುಖದ ರುಚಿ ಹತ್ತಿಸಿದ ಬಳಗಕ್ಕೆ ಅಭಿನಂದನೆಗಳು.

ತಾಜಾ ಸುದ್ದಿಗಳು