ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ 50 ಲಕ್ಷ ರುಪಾಯಿ ಜಪ್ತಿ; ಐವರ ಬಂಧನ

ಖಾಸಗಿ ಬಸ್ ನಲ್ಲಿ ಸಾಗಿಸುತ್ತಿದ್ದ 50 ಲಕ್ಷ ರುಪಾಯಿ ಜಪ್ತಿ; ಐವರ ಬಂಧನ

ಕಾರವಾರ: ಖಾಸಗಿ ಬಸ್ಸಿನಲ್ಲಿ ಅನಧಿಕೃತವಾಗಿ ಸಾಗಿಸಲಾಗುತ್ತಿದ್ದ 50 ಲಕ್ಷ ರುಪಾಯಿ ಹಣವನ್ನು ಪೊಲೀಸರು ಬುಧವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿ-63ರ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದು ಐವರನ್ನು ಬಂಧಿಸಿದ್ದಾರೆ.

ಗುಜರಾತ್ ರಾಜ್ಯದ ನಿವಾಸಿಗಳಾದ ದಿನೇಶ.ಜಿ ಯಾನೆ ದಿಲೀಪ್ ಪ್ರಭಾತ್ ಠಾಕೂರ್ (34), ಪಂಕಜಕುಮಾರ ರಾಮಾಭಾಯಿ ಪಟೇಲ್(40), ಗೋವಿಂಧಬಾಯಿ ನಾಥುದಾಸ್ ಪಟೇಲ್(50), ಮುಖೇಶಭಾಯಿ ಚಥುರ ಬಾಯಿ ಪಟೇಲ್(55) ಹಾಗೂ ಉಪೇಂದ್ರ. ನಾರಾಯಣಭಾಯಿ ಪಟೇಲ್(47) ಬಂಧನಕ್ಕೊಳಗಾದ ಹಣ ಸಾಗಾಟಗಾರರಾಗಿದ್ದಾರೆ.

ಧಾರವಾಡ ಜಿಲ್ಲೆ ಕಲಘಟಗಿ ಕಡೆಯಿಂದ ಯಲ್ಲಾಪುರ ಕಡೆಗೆ ಓರ್ವ ವ್ಯಕ್ತಿ ಗಣೇಶ್ ಟ್ರಾವೆಲ್ಸ್ ಬಸ್ ನಲ್ಲಿ ಯಾವುದೇ ದಾಖಲಾತಿಗಳಿಲ್ಲದೆ, ಹಣ ಸಾಗಾಟ ಮಾಡುತ್ತಿದ್ದಾನೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಪ್ರಕಾಶ ದೇವರಾಜು, ಪೋಲಿಸ್ ಉಪಾಧೀಕ್ಷಕರಾದ ರವಿ.ಡಿ ನಾಯ್ಕರವರು ಕಾರ್ಯಪ್ರವೃತ್ತರಾಗಿದ್ದಾರೆ.

ಇವರ ಮಾರ್ಗದರ್ಶನದಲ್ಲಿ ಯಲ್ಲಾಪುರ ಪೊಲೀಸ್ ನಿರೀಕ್ಷಕರಾದ ಸುರೇಶ ಯಳ್ಳೂರು ತಮ್ಮ ತಂಡದೊಂದಿಗೆ ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-63 ಜೋಡುಕೆರೆ ಬಳಿ, ಖಾಸಗಿ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಹಣ ಸಾಗಾಟ ಮಾಡುವುದು ಕಂಡುಬಂದಿದೆ.

ಬಂಧಿತರಿಂದ 50 ಲಕ್ಷ ರೂ ನಗದು, 23 ಸಾವಿರ ರೂ. ಬೆಲೆಯ ವಿವಿಧ ಕಂಪನಿಯ 6 ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಬೆಳಗಾವಿಯಿಂದ ಮಂಗಳೂರಿಗೆ ಹಣ ಸಾಗಾಟ ಮಾಡಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹವಾಲಾ ಮೂಲಕ ಹಣ ಸಾಗಾಟ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದೆ.

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮುಂದಿನ ತನಿಖೆಯನ್ನು ಆದಾಯ ತೆರಿಗೆ ಇಲಾಖೆ ನಡೆಸಲಿದೆ. ಯಲ್ಲಾಪುರ ಪಿಎಸ್ಐ ಮಂಜುನಾಥ ಗೌಡರ್, ಸಿಬ್ಬಂದಿಗಳಾದ ದೀಪಕ ವಿ ನಾಯ್ಕ, ಗಜಾನನ ನಾಯ್ಕ, ನಾಗಪ್ಪ ಲಮಾಣಿ, ಮಹ್ಮದ ಶಫಿ, ಚಾಲಕರಾದ ಕೃಷ್ಣ ಮಾತ್ರೋಜಿ, ಗಿರೀಶ ಲಮಾಣಿ, ದಾಳಿಯ ವೇಳೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಳು