ಮುನಿರತ್ನಗಿಲ್ಲ ಸಚಿವ ಸ್ಥಾನ, ಅಬಕಾರಿ ಸಚಿವ ನಾಗೇಶ್ ಗೆ ಕೊಕ್, 7 ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ

ಮುನಿರತ್ನಗಿಲ್ಲ ಸಚಿವ ಸ್ಥಾನ, ಅಬಕಾರಿ ಸಚಿವ ನಾಗೇಶ್ ಗೆ ಕೊಕ್, 7 ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊನೆಗೂ ಕರ್ನಾಟಕ ಬಿಜೆಪಿ ಸರ್ಕಾರದ ಸಂಪುಟ ಪುನಾರಚನೆ ಸರ್ಕಸ್ ಮುಕ್ತಾಯವಾಗಿದ್ದು, 7 ನೂತನ ಸಚಿವರ ಪಟ್ಟಿ ಪ್ರಕಟಿಸಿದ ಸಿಎಂ ಯಡಿಯೂರಪ್ಪ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸುವುದಾಗಿ ಹೇಳಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಘೋಷಣೆ ಮಾಡಿರುವಂತೆ ಉಮೇಶ್ ಕತ್ತಿ, ಎಸ್. ಅಂಗಾರ, ಸಿ.ಪಿ. ಯೋಗೇಶ್ವರ್, ಅರವಿಂದ ಲಿಂಬಾವಳಿ, ಎಂಟಿಬಿ ನಾಗರಾಜ್, ಆರ್. ಶಂಕರ್, ಮುರುಗೇಶ್ ನಿರಾಣಿ ಅವರ ಹೆಸರನ್ನು ರಾಜಭವನಕ್ಕೆ ಕಳುಹಿಸಲಾಗಿದ್ದು, ಸಂಜೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅದರಂತೆ ಬಿಜೆಪಿ ಸರ್ಕಾರ ರಚನೆಗೆ ಸಹಾಯವಾಗಿದ್ದ ವಿಧಾನ ಪರಿಷತ್ ಸದಸ್ಯರಾದ ಎಂ.ಟಿ.ಬಿ.ನಾಗರಾಜ್, ಆರ್.ಶಂಕರ್, ಸಿ.ಪಿ.ಯೋಗೇಶ್ವರ್, ಜೊತೆಗೆ ಶಾಸಕರಾದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ, ಬಿಳಗಿ ಶಾಸಕ ಮುರುಗೇಶ್ ನಿರಾಣಿ, ಸುಳ್ಯ ಶಾಸಕ ಎಸ್.ಅಂಗಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಏಳು ಸಚಿವರಿಗೆ ಇಂದು ಮಧ್ಯಾಹ್ನ ವಜುಭಾಯಿ ವಾಲಾ ಪ್ರಮಾಣವಚನ ಬೋಧಿಸಲಿದ್ದಾರೆ.

ನಾಗೇಶ್ ಗೆ ಕೊಕ್: ಮುನಿರತ್ನಕ್ಕಿಲ್ಲ ಸ್ಥಾನ
ಇದೇ ವೇಳೆ ಮುನಿರತ್ನಗೆ ಸಚಿವ ಸ್ಥಾನದ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಯಾವುದೇ ಉತ್ತರ ಕೊಡದೆ ಯಡಿಯೂರಪ್ಪ ಮುಂದೆ ನಡೆದಿದ್ದಾರೆ. ಅಂತೆಯೇ ಅಬಕಾರಿ ಸಚಿವ ಎಚ್. ನಾಗೇಶ್ ಅವರನ್ನು ಸಂಪುಟದಿಂದ ಕೈ ಬಿಡಲು ನಿರ್ಧರಿಸಲಾಗಿದೆ. ಆದರೆ ಇಂದು ಅವರ ರಾಜೀನಾಮೆ ಪಡೆಯುವುದಿಲ್ಲ. ಅವರ ಮನವೊಲಿಸುವ ಪ್ರಯತ್ನ ಮಾಡುತ್ತೇನೆ. ನಾಳೆ ರಾಜೀನಾಮೆ ಪಡೆಯುತ್ತೇನೆ ಎಂದು ಬಿಎಸ್ ವೈ ಹೇಳಿದರು.

ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಈ ಬಾರಿ ಕೂಡ ಅವಕಾಶ ಸಿಕ್ಕಿಲ್ಲ. ವರಿಷ್ಠರ ಸೂಚನೆ ಮೇರೆಗೆ ಮುನಿರತ್ನ ಅವರಿಗೆ ಈ ಬಾರಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಳು