ಶಬರಿಮಲೆ ಅಯ್ಯಪ್ಪ ಸ್ವಾಮಿ: ತಿರುವಾಭರಣಂ ಮೆರವಣಿಗೆ ಆರಂಭ

ಶಬರಿಮಲೆ ಅಯ್ಯಪ್ಪ ಸ್ವಾಮಿ: ತಿರುವಾಭರಣಂ ಮೆರವಣಿಗೆ ಆರಂಭ

ತಿರುವನಂತಪುರಂ: ಶಬರಿಮಲೆ ಸ್ವಾಮಿ ಅಯ್ಯಪ್ಪನ ಸನ್ನಿಧಿಯಲ್ಲಿ ಮಕರ ಸಂಕ್ರಾಂತಿಯ ಹಬ್ಬದ ಸಂಭ್ರಮ ಕಳೆಗಟ್ಟುತ್ತಿದೆ. ಕೊರೊನಾ ವೈರಸ್ ಸೋಂಕು ತಡೆಯುವ ನಿರ್ಬಂಧಗಳ ಹಿನ್ನೆಲೆಯಲ್ಲಿ ಈ ಹಿಂದೆಯಂತೆ ಸಂಭ್ರಮಾಚರಣೆಗಳು ವೈಭವದಿಂದ ನಡೆಯುತ್ತಿಲ್ಲ. ಭಕ್ತರ ಗೈರು ಹಾಗೂ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಲ್ಲ ಸಂಪ್ರದಾಯಗಳನ್ನು ಪಾಲಿಸಲಾಗುತ್ತಿದೆ.

ಮಕರವಿಳಕ್ಕು ಆಚರಣೆಗೆ ಸ್ವಾಮಿ ಅಯ್ಯಪ್ಪನನ್ನು ಅಲಂಕರಿಸುವ ಪವಿತ್ರ ಆಭರಣ ತಿರುವಾಭರಣಂ ಅನ್ನು ಕೊಂಡೊಯ್ಯುವ ಮೆರವಣಿಗೆ ಮಂಗಳವಾರ ಆರಂಭವಾಗಿದೆ. ಪಂಡಲಂ ವಲಿಯಾಕೊಯಿಕ್ಕಲ್ ಧರ್ಮಸಾಸ್ಥ ದೇವಾಲಯದಿಂದ ಈ ಮೆರವಣಿಗೆ ಶುರುವಾಗಿದೆ. ಇದು ಜನವರಿ 14ರ ಮಕರವಿಳಕ್ಕು ದಿನದಂದು ಶಬರಿಮಲೆಗೆ ಸಂಜೆ ಆರು ಗಂಟೆಗೆ ತಲುಪಲಿದೆ. ಈ ಬಾರಿ ಕೋವಿಡ್ ಶಿಷ್ಟಾಚಾರಗಳಿಗೆ ಅನುಗುಣವಾಗಿ ಮೆರವಣಿಗೆಯನ್ನು ಆಯೋಜಿಸಲಾಗಿದೆ.

ಈ ಹಿಂದಿನ ವರ್ಷಗಳಲ್ಲಿ ಶ್ರೀಗಂಧದ ಪೆಟ್ಟಿಗೆಗಳಲ್ಲಿ ತಿರುವಾಭರಣಂಅನ್ನು ಬೆಳಗಿನ ಜಾವ 11 ಗಂಟೆಗೆ ಸಾಗಿಸಲಾಗುತ್ತಿತ್ತು. ಈ ಬಾರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಬೇಕಿರುವುದರಿಂದ ಬೆಳಿಗ್ಗೆ 11.45ರ ಸುಮಾರಿಗೆ ತಿರುವಾಭರಣಂ ಮೆರವಣಿಗೆ ಆರಂಭವಾಯಿತು.

85 ವರ್ಷದ ಕುಳತಿನಲ್ ಗಗಾಧರನ್ ಪಿಳ್ಳೈ ಅವರು ತಿರುವಾಭರಣಗಳನ್ನು ಸಾಗಿಸಿದರು. ಇದು ಅವರ 65ನೇ ವರ್ಷದ ಪಯಣವಾಗಿದೆ.

ಅಂಬಳಪುಳ ಮತ್ತು ಅಳಂಗದ ತಂಡಗಳಿಂದ ಸೋಮವಾರ ಎರುಮೇಲಿಯ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ವಾರ್ಷಿಕ ಪೆಟ್ಟಾ ತುಳ್ಳಾಲ್ ಆಚರಣೆ ನಡೆಯಿತು. ಎರಡೂ ತಂಡಗಳಿಂದ ತಲಾ ಸುಮಾರು 50 ಭಕ್ತರು ತಮ್ಮ ದೇಹದ ಮೇಲೆ ಗುಲಾಬಿ ಹಾಗೂ ಹಸಿರು ಬಣ್ಣಗಳನ್ನು ಹಚ್ಚಿಕೊಂಡು ನರ್ತಿಸಿದರು.

ತಾಜಾ ಸುದ್ದಿಗಳು