ಮಂಡ್ಯದಲ್ಲಿ ಅಲ್ಪ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆ

ಮಂಡ್ಯದಲ್ಲಿ ಅಲ್ಪ ಪ್ರಮಾಣದ ಲೀಥಿಯಂ ನಿಕ್ಷೇಪ ಪತ್ತೆ

ಮಂಡ್ಯ,: ಮಂಡ್ಯ ಜಿಲ್ಲೆಯ ಅಲ್ಲಾಪಟ್ಟಣ ಗ್ರಾಮದ ಬಳಿ ಅಪರೂಪದ ಲೀಥಿಯಂ ನಿಕ್ಷೇಪ ಇರುವುದು ದೃಢಪಟ್ಟಿದೆ. ಎಲೆಕ್ಟ್ರಿಕ್ ವಾಹನಗಳು, ಲ್ಯಾಪ್‌ಟಾಪ್‌ಗಳು ಮತ್ತು ಮೊಬೈಲ್ ಫೋನ್‌ ರಿಚಾರ್ಜ್ ಬ್ಯಾಟರಿಗಳಿಗೆ ಅಗತ್ಯವಾದ ಲೀಥಿಯಂ ನಿಕ್ಷೇಪದ ಲಭ್ಯತೆ ಕುರಿತು ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ-ಅಲ್ಲಾಪಟ್ಟಣ ಸಮೀಪ ಅಣು ಶಕ್ತಿ ಇಲಾಖೆಯ ಆಟೋಮಿಕ್ ಮಿನರಲ್ಸ್ ಡೈರೆಕ್ಟೊರೇಟ್ ಫಾರ್ ಎಕ್ಸ್‌ಪ್ಲೋರೇಷನ್ ಆಂಡ್ ರೀಸರ್ಚ್ (ಎಎಂಡಿ) ಸಂಶೋಧನೆ ನಡೆಸಿತ್ತು. ಈ ಭಾಗದ ಮೇಲ್ಭಾಗದ ನೆಲ ಹಾಗೂ ಸ್ವಲ್ಪ ಒಳಭಾಗದಲ್ಲಿ ಎಎಂಡಿ ಹುಡುಕಾಟ ನಡೆಸಿದ್ದು, ಅಲ್ಪಪ್ರಮಾಣದ ನಿಕ್ಷೇಪ ಪತ್ತೆಯಾಗಿದೆ. ಈ ಹಿಂದೆ ಇಲ್ಲಿ 14,100 ಟನ್ ಲೀಥಿಯಂ ಲಭ್ಯವಾಗಬಹುದು ಎಂದು ಕಳೆದ ವರ್ಷ ‘ಕರೆಂಟ್ ಸೈನ್ಸ್ಸ’ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿ ಬರಹದಲ್ಲಿ ಹೇಳಲಾಗಿತ್ತು. ಆದರೆ ಪ್ರಾಥಮಿಕ ಸಮೀಕ್ಷೆಗಳ ಪ್ರಕಾರ 1,600 ಟನ್ ಲೀಥಿಯಂ ಸಂಪನ್ಮೂಲ ಇರಬಹುದು ಎಂದು ಸಂಶೋಧನೆ ಬಳಿಕ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಲೀಥಿಯಂ ನಿಕ್ಷೇಪಗಳು ಬಹಳ ಅಮೂಲ್ಯವಾಗಿದ್ದು, ಬ್ಯಾಟರಿ ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಬೇಡಿಕೆ ಇದೆ. ಪ್ರಸ್ತುತ ಭಾರತವು ವಿವಿಧ ದೇಶಗಳಿಂದ ಲೀಥಿಯಂ ಅನ್ನು ಆಮದು ಮಾಡಿಕೊಳ್ಳುತ್ತಿದೆ.

ಸ್ವಾವಲಂಬನೆಗಾಗಿ ಲೀಥಿಯಂ ಅಗತ್ಯ ರಾಜಸ್ಥಾನ, ಗುಜರಾತ್, ಒಡಿಶಾ ಮತ್ತು ಛತ್ತೀಸಗಡ ರಾಜ್ಯಗಳಲ್ಲಿನ ವಿವಿಧ ಭಾಗಗಳಲ್ಲಿ ಲೀಥಿಯಂ ನಿಕ್ಷೇಪವನ್ನು ಹೊರತೆಗೆಯುವ ಕಾರ್ಯಗಳು ನಡೆಯುತ್ತಿವೆ. ಲೀಥಿಯಂ-ಅಯಾನ್ ಶಕ್ತಿಯುಳ್ಳ ಉತ್ಪನ್ನಗಳನ್ನು ಭಾರಿ ಪ್ರಮಾಣದಲ್ಲಿ ತಯಾರಿಸುವ ದೇಶಗಳಲ್ಲಿ ಚೀನಾ ಮುಂಚೂಣಿಯಲ್ಲಿದೆ. ಭಾರತ ಕೂಡ ಈ ಉತ್ಪನ್ನಗಳಿಗಾಗಿ ಚೀನಾವನ್ನು ಅವಲಂಬಿಸಿದೆ. ಲೀಥಿಯಂ ಸಂಬಂಧಿತ ವಸ್ತುಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಿದರೆ ಚೀನಾ ಪೈಪೋಟಿ ಎದುರಿಸಲು ಸಾಕಷ್ಟು ಶಕ್ತಿ ಸಿಗಲಿದೆ. ಹೀಗಾಗಿ ದೇಶದ ಮೂಲೆ ಮೂಲೆಗಳಲ್ಲಿ ಲೀಥಿಯಂಗಾಗಿ ಭಾರತ ತೀವ್ರ ಹುಡುಕಾಟ ನಡೆಸಿದೆ.

ವಿದೇಶಗಳಲ್ಲಿ ಭಾರತದ ಕಂಪೆನಿ ದೇಶದಲ್ಲಿ ಲೀಥಿಯಂ ಸಿಗದ ಕಾರಣ ಅರ್ಜೆಂಟೀನಾ, ಚಿಲಿ ಮತ್ತು ಬೊಲಿವಿಯಾಗಳಲ್ಲಿ ಲೀಥಿಯಂ ನಿಕ್ಷೇಪಗಳನ್ನು ಪತ್ತೆಹಚ್ಚಿ ಹೊರತೆಗೆಯುವ ಸಲುವಾಗಿ ಭಾರತ ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ ಸ್ಥಾಪಿಸಿದೆ. ಮುಂದಿನ ಹತ್ತು ವರ್ಷಗಳಲ್ಲಿ ಲೀಥಿಯಂ-ಐಯಾನ್ ಬ್ಯಾಟರಿಗಳನ್ನು ತಯಾರಿಸಲು ಹತ್ತು ಬೃಹತ್ ಕಾರ್ಖಾನೆಗಳ ಸ್ಥಾಪನೆಗೆ ನೀತಿ ಆಯೋಗ ಗುರಿ ಹೊಂದಿದೆ.

14,100 ಟನ್ ಲೀಥಿಯಂ ‘ಶ್ರೀರಂಗಪಟ್ಟಣ ತಾಲ್ಲೂಕಿನ ಕರಿಘಟ್ಟ ಹಿಂಭಾಗದ ಗೋಮಾಳದ ಪ್ರದೇಶದಲ್ಲಿ ಅಲ್ಲಾಪಟ್ಟಣ-ಮರಳಗಾಲ ಗ್ರಾಮದ 0.5 ಕಿ.ಮೀ * 5 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 30,300 ಟನ್ Li20 ಲಭ್ಯವಿದ್ದು, ಇದನ್ನು ಹೊರತೆಗೆದರೆ ಅಂದಾಜು 14,100 ಟನ್ ಲೀಥಿಯಂ ಲೋಹ ಸಿಗಬಹುದು’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಮತ್ತು ಬ್ಯಾಟರಿ ತಂತ್ರಜ್ಞಾನದ ಪರಿಣತ ಎನ್. ಮುನಿಚಂದ್ರಯ್ಯ ಅವರು ಕಳೆದ ವರ್ಷ ಪ್ರಕಟಿಸಿದ್ದ ವರದಿಯಲ್ಲಿ ತಿಳಿಸಿದ್ದರು.

ಲೀಥಿಯಂ ಬ್ಯಾಟರಿ ಆಮದು 2016-17ರ ಅವಧಿಯಲ್ಲಿ ಭಾರತವು 165 ಕೋಟಿಗಿಂತಲೂ ಅಧಿಕ ಲೀಥಿಂ ಬ್ಯಾಟರಿಗಳನ್ನು ಆಮದು ಮಾಡಿಕೊಂಡಿತ್ತು. ಇದಕ್ಕೆ 384 ಮಿಲಿಯನ್ ಡಾಲರ್ ಮೊತ್ತದ ಹಣ ವಿನಿಯೋಗಿಸಿತ್ತು. 2019-20ರ ಸಾಲಿನಲ್ಲಿ ಲೀಥಿಯಂ ಬ್ಯಾಟರಿಗಳಿಗಾಗಿ ವ್ಯಯಿಸಿದ ವೆಚ್ಚ 3.3 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು.

ತಾಜಾ ಸುದ್ದಿಗಳು