ಶಾಲಾ-ಕಾಲೇಜು ಆರಂಭದ ನಂತರ 211 ಶಿಕ್ಷಕರಿಗೆ ಕೊರೊನಾ ಸೋಂಕು

ಶಾಲಾ-ಕಾಲೇಜು ಆರಂಭದ ನಂತರ 211 ಶಿಕ್ಷಕರಿಗೆ ಕೊರೊನಾ ಸೋಂಕು

ಬೆಂಗಳೂರು: ಒಂಬತ್ತು ತಿಂಗಳ ನಂತರ ಕರ್ನಾಟಕದಾದ್ಯಂತ ಜನವರಿ1 ರಿಂದ ಶಾಲಾ ಕಾಲೇಜುಗಳನ್ನು ಆರಂಭಿಸಲಾಗಿದೆ. ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಂಡಿದ್ದು, ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ತರಗತಿಗಳನ್ನು ತೆರೆಯಲಾಗಿದೆ. ಆದರೆ ಶಾಲೆ ಆರಂಭದ ನಂತರ ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ತಂದಿದೆ. ಶಾಲೆ ಕಾಲೇಜು ಆರಂಭವಾದ ಏಳು ದಿನಗಳಲ್ಲಿ ಕರ್ನಾಟಕದಾದ್ಯಂತ 211 ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಿಳಿದುಬಂದಿದೆ.

236 ಮಂದಿಗೆ ಕೊರೊನಾ ಸೋಂಕು ಶಿಕ್ಷಕರು, ಭೋದಕೇತರ ಸಿಬ್ಬಂದಿ ಒಳಗೊಂಡಂತೆ ಕರ್ನಾಟಕದಾದ್ಯಂತ 236 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಾಲೆ ಕಾಲೇಜು ಆರಂಭಕ್ಕೂ ಮುನ್ನ ಎಲ್ಲಾ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಕೊರೊನಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗಿತ್ತು. ಆದರೆ ಶಾಲಾ ಕಾಲೇಜು ತೆರೆದ ನಂತರ ಶಿಕ್ಷಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ವಿದ್ಯಾರ್ಥಿಗಳು, ಪೋಷಕರಲ್ಲಿ ಆತಂಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಕರು ಹಾಗೂ ಭೋದಕೇತರ ಸಿಬ್ಬಂದಿ ಒಳಗೊಂಡಂತೆ 20 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಬೆಳಗಾವಿಯಲ್ಲಿ 19 ಶಿಕ್ಷಕರು, ಆರು ಬೋಧಕೇತರ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ.’ ಶಿವಮೊಗ್ಗ, ಹಾಸನ, ಮಂಡ್ಯದಲ್ಲಿ ಒಟ್ಟು 39 ಶಿಕ್ಷಕರಿಗೆ ಸೋಂಕು ದೃಢಪಟ್ಟಿದ್ದರೆ, ತುಮಕೂರು, ಮೈಸೂರು, ಚಾಮರಾಜನಗರ ಹಾಗೂ ಗದಗದಲ್ಲಿ 45 ಶಿಕ್ಷಕರು ಹಾಗೂ ಇಬ್ಬರು ಬೋಧಕೇತರ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಸಂಗತಿ ವಿದ್ಯಾರ್ಥಿಗಳಲ್ಲಿ ಹಾಗೂ ಪೋಷಕರಲ್ಲಿ ಆತಂಕ ತಂದಿದೆ.

ಸಂಕ್ರಾಂತಿ ನಂತರ ಪದವಿ ಕಾಲೇಜು ಆರಂಭ ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಮಧುಗಿರಿಯಲ್ಲಿ ಶಿಕ್ಷಕರಲ್ಲಿ ಕೊರೊನಾ ಸೋಂಕು ಪ್ರಕರಣಗಳು ಕಂಡುಬಂದಿಲ್ಲ. ಆದರೆ ಸಂಕ್ರಾಂತಿ ನಂತರ ಮೊದಲ, ದ್ವಿತೀಯ ವರ್ಷದ ಪದವಿ ಕಾಲೇಜು ಆರಂಭಗೊಳ್ಳಲಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಇದೇ ಜನವರಿ 15ರಿಂದ ಕಾಲೇಜುಗಳು ತೆರೆಯಲಿದ್ದು, ಇದಕ್ಕೆ ಸೂಕ್ತ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಕರ್ನಾಟಕದ ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ಶುಕ್ರವಾರ, ಜನವರಿ 8ರ ವರದಿಯಂತೆ, 970 ಹೊಸ ಪ್ರಕರಣಗಳು ಕಂಡುಬಂದಿದ್ದು, ಒಟ್ಟು ಸೋಂಕಿನ ಸಂಖ್ಯೆ 9.25ಲಕ್ಷಕ್ಕೆ ಏರಿಕೆಯಾಗಿದೆ. ಇದರಲ್ಲಿ 9.04 ಲಕ್ಷ ಮಂದಿ ಗುಣಮುಖರಾಗಿದ್ದು, ಇದುವರೆಗೂ 12,134ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯಕ್ಕೆ 9,119 ಸಕ್ರಿಯ ಪ್ರಕರಣಗಳಿವೆ.

ತಾಜಾ ಸುದ್ದಿಗಳು