ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ: ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಇನ್ನೂ ಎರಡು ದಿನ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಕುಳಿರ್ಗಾಳಿ ಮತ್ತಷ್ಟು ತೀವ್ರಗೊಂಡಿದೆ. ಇದರ ಪರಿಣಾಮ ಜ. 8 ಮತ್ತು 9ರಂದು ಕರಾವಳಿ ಮತ್ತು ದಕ್ಷಿಣ ಒಳನಾಡಿನ ಭಾಗಗಳಲ್ಲಿ ಮಳೆ ಸುರಿಯಲಿದೆ. ಒಟ್ಟು ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. 64.5 ಮಿ.ಮೀ ಇಂದ 115.5 ಮಿ.ಮೀವರೆಗೂ ಮಳೆ ಸುರಿಯುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತು ಉತ್ತರ ಒಳನಾಡಿನ ಅಲ್ಲಲ್ಲಿ ಮುಂದಿನ 48ಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಜನವರಿ 12ರವರೆಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯನ್ನು ನಿರೀಕ್ಷಿಸಲಾಗಿದೆ. ರಾಜ್ಯದಲ್ಲಿ ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅದು ಮಾಹಿತಿ ನೀಡಿದೆ.

ರೈತರಿಗೆ ತೀವ್ರ ಸಂಕಷ್ಟ ಈ ಅಕಾಲಿಕ ಮಳೆ ಕರಾವಳಿ ಹಾಗೂ ಮಲೆನಾಡಿನ ಜನತೆಯನ್ನು ತೀವ್ರ ಸಂಕಷ್ಟಕ್ಕೆ ನೂಕಿದೆ. ಮುಖ್ಯವಾಗಿ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ಭತ್ತ, ಕಾಫಿ ಹಾಗೂ ಅಡಿಕೆ ಕೊಯ್ಲಿನ ಅವಧಿ ಇದಾಗಿದ್ದು, ಅಪಾರ ಪ್ರಮಾಣದ ಬೆಳೆ ಮಳೆಯಿಂದ ನಾಶವಾಗಿದೆ. ಕೊಯ್ಲು ಮಾಡಿದ ಭತ್ತ ಕೂಡ ಮೊಳಕೆ ಬಂದಿದೆ. ಜತೆಗೆ ಗೇರು, ಮಾವು ಮುಂತಾದ ಬೆಳೆಗಳು ಹೂವು ಬಿಡುವ ಅವಧಿ ಆರಂಭವಾಗುತ್ತಿದ್ದು, ಮೋಡ ಕವಿದ ವಾತಾವರಣ ಅದರ ಮೇಲೆ ಪರಿಣಾಮ ಬೀರಲಿದೆ.

ಜನವರಿ ತಿಂಗಳ ಅಧಿಕ ಮಳೆ ತಮಿಳುನಾಡಿನ ಮೀನಾಂಬಕ್ಕಮ್ ಹವಾಮಾನ ಇಲಾಖೆಯು ಜನವರಿ ತಿಂಗಳಿನಲ್ಲಿಯೇ ಅತ್ಯಧಿಕ ಮಳೆಯನ್ನು ದಾಖಲಿಸಿಕೊಂಡಿದೆ. ಗುರುವಾರ ಬೆಳಗಿನ ವೇಳೆಗೆ ಇಲ್ಲಿ 224.3 ಮಿಮೀ ಮಳೆಯಾಗಿದೆ. 1986ರಲ್ಲಿ ಜನವರಿಯಲ್ಲಿ 170 ಮಿಮೀ ಮಳೆಯಾಗಿದ್ದೇ ಅಧಿಕ ದಾಖಲೆಯಾಗಿತ್ತು.

ಜ. 13ರವರೆಗೂ ಮಳೆ ಚೆನ್ನೈನಲ್ಲಿ ಮಳೆಯ ಅಬ್ಬರ ಜನವರಿ 13ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೊಯಮತ್ತೂರು, ತಿರುವರೂರ್ ಮತ್ತು ಮಧುರೈ ಸೇರಿದಂತೆ 14 ಜಿಲ್ಲೆಗಳ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ. ಜನವರಿ 10ರಂದು ಕೆಲವು ಪ್ರದೇಶಗಳಲ್ಲಿ ಮಳೆಯ ಆರ್ಭಟ ಮತ್ತಷ್ಟು ಜೋರಾಗಲಿದೆ. ಕುಡ್ಡಲೂರ್ ಜಿಲ್ಲೆಯ ಮಾಥುರ್ ಮತ್ತು ದಿಂಡಿಗಲ್ ಜಿಲ್ಲೆಯ ನಥಾಮ್‌ನಲ್ಲಿ ಗುರುವಾರ 21 ಸೆಂಮೀ ಮಳೆಯಾಗಿದೆ.

ತಾಜಾ ಸುದ್ದಿಗಳು