ಜಿಲ್ಲಾಡಳಿತ ಸಿದ್ಧತೆ: ಮಕ್ಕಳಲ್ಲಿ ಉತ್ಸುಕತೆ ಜನವರಿ 1 ರಿಂದ ತೆರೆಯಲಿವೆ ಜ್ಞಾನ ದೇಗುಲಗಳು

ಜಿಲ್ಲಾಡಳಿತ ಸಿದ್ಧತೆ: ಮಕ್ಕಳಲ್ಲಿ ಉತ್ಸುಕತೆ ಜನವರಿ 1 ರಿಂದ ತೆರೆಯಲಿವೆ ಜ್ಞಾನ ದೇಗುಲಗಳು

ಎಲ್.ಪಿ.ಪವನ್‍ಕುಮಾರ್
ಹಾಸನ: ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಹಂತ ಹಂತವಾಗಿ ಆರಂಭವಾಗುತ್ತಿದ್ದು, ಪದವಿ ಕ್ಲಾಸ್ ನಂತರ ಇದೀಗ ಜನವರಿ 1
ರಿಂದ 10 ಮತ್ತು 12 ನೇ ತರಗತಿಯ ಪಾಠ ಪ್ರವಚನ ಆರಂಭಿಸಲು
ರಾಜ್ಯ ಸರ್ಕಾರ ಮಹೂರ್ತ ಫಿಕ್ಸ್ ಮಾಡಿದೆ. ಇದಕ್ಕಾಗಿ ಜಿಲ್ಲಾಡಳಿತ
ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಶಿಕ್ಷಣ ಇಲಾಖೆಯಿಂದ ಸಿದ್ಧತೆ:
ಜಿಲ್ಲೆಯಲ್ಲೂ ಶಾಲೆ-ಕಾಲೇಜು ಆರಂಭಕ್ಕೆ ಸಂಬಂಧಪಟ್ಟಂತೆ ಅಗತ್ಯ ಸಿದ್ಧತೆ ನಡೆದಿವೆ. ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅನೇಕ ಸುತ್ತಿನ ಮಾತುಕತೆ ನಡೆಸಲಾಗಿದೆ. ತರಗತಿ ಆರಂಭ ಮತ್ತು ಶಾಲಾ ಆವರಣದಲ್ಲಿ ಪಾಲಿಸಬೇಕಾದ ಕೋವಿಡ್ ನಿಯಮಾವಳಿ ಬಗ್ಗೆ ಚರ್ಚಿಸಲಾಗಿದೆ. ಶಾಲಾ ಕಾಲೇಜಿನ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು ಮತ್ತು ಎಸ್‍ಡಿಎಂಸಿ ಸದಸ್ಯರೊಂದಿಗೆ ಚರ್ಚಿಸಿ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಶಾಲಾ-ಕಾಲೇಜು ಆರಂಭಕ್ಕೆ ತಯಾರಿ ನಡೆದಿದೆ.
ಯಾವ ತರಗತಿಯಲ್ಲಿ ಎಷ್ಟು ಮಕ್ಕಳು:
ಜಿಲ್ಲೆಯಲ್ಲಿ 1 ರಿಂದ 10 ನೇ ತರಗತಿ ವರೆಗೆ 2,16,960 ಮಕ್ಕಳಿದ್ದಾರೆ.
9 ಮತ್ತು 10 ನೇ ತರಗತಿಯಲ್ಲಿ ಒಟ್ಟು 44,511 ಮಕ್ಕಳಿದ್ದಾರೆ. ಈ ಪೈಕಿ 10 ನೇ ತರಗತಿಯಲ್ಲಿ 21,874 ಮಕ್ಕಳಿದ್ದಾರೆ.
ಆದರೆ ಎಸ್‍ಎಸ್‍ಎಲ್‍ಸಿ ತರಗತಿ ಆರಂಭವಾದರೆ ಎಲ್ಲಾ ಮಕ್ಕಳು ಶಾಲೆಗೆ ಬರಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ಮಕ್ಕಳು ಮತ್ತು ಪೋಷಕರು ಒಪ್ಪಿದರೆ ಮಾತ್ರ ತರಗತಿಗೆ ಬರಬಹುದಾಗಿದೆ. ಇಲ್ಲವಾದರೆ ಆನ್‍ಲೈನ್ ತರಗತಿ ಮೂಲಕ ಮನೆಯಲ್ಲೇ ಪಾಠ ಕೇಳಬಹುದಾಗಿದೆ.
ಒಪ್ಪಿಗೆ ಪತ್ರ ಕಡ್ಡಾಯ:
ಪಿಯು ವಿಭಾಗಕ್ಕೆ ಸಂಬಂಧಪಟ್ಟಂತೆ ಸದ್ಯ ದ್ವಿತೀಯ ಪಿಯು ತರಗತಿಗಳನ್ನು ಮಾತ್ರವೇ ಆರಂಭಿಸಲು ಸರ್ಕಾರ ಸೂಚನೆ ನೀಡಿದೆ.
ಎಲ್ಲಾ ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಬೇಕಾದರೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯಗೊಳಿಸಲಾಗಿದೆ. ಎಸ್‍ಎಸ್‍ಎಲ್‍ಸಿ ಮಾದರಿಯಲ್ಲೇ ಪಿಯು ವಿದ್ಯಾರ್ಥಿಗಳಿಗೂ ಹಾಜರಾತಿ ಕಡ್ಡಾಯ ಇಲ್ಲ.
ಎಸ್‍ಎಸ್‍ಎಲ್‍ಸಿ ಮತ್ತು 2ನೇ ಪಿಯು ವಿದ್ಯಾರ್ಥಿಗಳು ತಮ್ಮದೇ ಶಾಲೆ-ಕಾಲೇಜಿಗೆ ಹೋಗಬೇಕು ಎಂದೇನಿಲ್ಲ. ಸಮೀಪದ ಶಾಲೆ-ಕಾಲೇಜಿಗೂ ಹೋಗಬಹುದು. ಆದರೆ ಈ ವಿಷಯವನ್ನು ಮೂಲ ಸಂಸ್ಥೆಗೆ ನೀಡಬೇಕಿದೆ. ತರಗತಿ ಚಿತ್ರಣ ಹೇಗಿರಲಿದೆ: ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿರುವಂತೆ ತರಗತಿಗೆ ಹಾಜರಾಗುವ ಪ್ರತಿ ವಿದ್ಯಾರ್ಥಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ವಿದ್ಯಾರ್ಥಿಗಳನ್ನು ಕೊಠಡಿಯೊಳಗೆ 6 ಅಡಿ ಅಂತರದಲ್ಲಿ ಕೂರಿಸಲಾಗುತ್ತದೆ. ಒಂದೊಂದು ಕೊಠಡಿಗೂ ವಿದ್ಯಾರ್ಥಿಗಳ ಸಂಖ್ಯೆಯನ್ನು ಮಿತಿಗೊಳಿಸಲಾಗಿದೆ. ತರಗತಿ ಕೊಠಡಿ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸಂಬಂಧಪಟ್ಟ ನಗರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾ.ಪಂ. ಸಹಕಾರದೊಂದಿಗೆ ಸ್ಯಾನಿಟೈಸ್ ಮಾಡಿ ಸ್ವಚ್ಛಗೊಳಿಸಲಾಗುತ್ತದೆ.
ಮೈಮರೆಯದಿರಿ ಮಕ್ಕಳೆ:
ಪ್ರೀತಿಯ ಮಕ್ಕಳೇ ಬಹುದಿನಗಳ ನಂತರ ನೀವು ಶಾಲಾ ಕಾಲೇಜಿಗೆ ತೆರಳಲು ಅಣಿಯಾಗಿದ್ದೀರಿ. ನಿಮ್ಮ ಭವಿಷ್ಯದ ದೃಷ್ಟಿಯಿಂದ ಇದು ಅನಿವಾರ್ಯ. ಆದರೆ ಈ ಸಂದರ್ಭ ತಾವು ಹೆಚ್ಚಿನ ಎಚ್ಚರಿಕೆ ವಹಿಸಲೇಬೇಕಿದೆ. ಕಡ್ಡಾಯವಾಗಿ ಮಾಸ್ಕ್ ಧಾರಣೆ, ವೈಯಕ್ತಿಕ ಶುಚಿತ್ವ ಪಾಲನೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಬಹುದಿನಗಳ ನಂತರ ಗೆಳೆಯರು ಸಿಕ್ಕರು ಎಂದು ಸಲುಗೆಯಿಂದ ವರ್ತಿಸಬಾರದು. ಕೋವಿಡ್ ಇನ್ನೂ ಇಡಿಯಾಗಿ ದೂರವಾಗಿಲ್ಲ ಎಂಬುದನ್ನು ಮರೆಯದಿರಿ. ನಿಮ್ಮ ಎಚ್ಚರಿಕೆಯನ್ನು ನೀವು ತಪ್ಪದಿರಿ ಎಂಬುದು ಜನಮಿತ್ರ ಬಳಗದ ಕಳಕಳಿ

ಪ್ರತಿಕ್ರಿಯೆ 1
ಯಾರಿಗೂ ಭಯಬೇಡ:
ಶಾಲೆ ಆರಂಭಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ನಿರ್ಭಯವಾಗಿ ಮಕ್ಕಳು ಶಾಲೆಗೆ ಬರಬಹುದು. ಪೋಷಕರೂ ಮಕ್ಕಳನ್ನು ಶಾಲೆಗೆ ಕಳಿಸಬಹುದು. ಹಾಜರಾತಿ ಕಡ್ಡಾಯವಲ್ಲ. ಮಕ್ಕಳ ಆರೋಗ್ಯ ರಕ್ಷಣೆ ಮತ್ತು ಸ್ವಚ್ಛತೆಗೆ ಹೆಚ್ಚಿನ ಮುತುವರ್ಜಿ ವಹಿಸಲಾಗಿದೆ.
* ಪ್ರಕಾಶ್, ಡಿಡಿಪಿಐ

ಪ್ರತಿಕ್ರಿಯೆ 2
ಪ್ರಾಯೋಗಿಕ ತರಗತಿಗೆ ಒತ್ತು:
ಸದ್ಯ ದ್ವಿತೀಯ ಪಿಯು ತರಗತಿ ಮಾತ್ರ ಸಧ್ಯ ಆರಂಭವಾಗಲಿವೆ. ವಿದ್ಯಾರ್ಥಿಗಳು ತಮ್ಮದೇ ಕಾಲೇಜಿಗೆ ತೆರಳಿ ಪಾಠ ಕೇಳಬೇಕೆಂದಿಲ್ಲ. ಸಮೀಪದ ಯಾವುದೇ ಕಾಲೇಜಿಗೆ ಹೋಗಬಹುದು. ಪ್ರಾಯೋಗಿಕ ತರಗತಿ ನಡೆಸಲು ಹೆಚ್ಚು ಒತ್ತು ನೀಡಲಾಗುವುದು.
* ಶ್ರೀನಿವಾಸ ಮೂರ್ತಿ, ಪಿಯು ಡಿಡಿ

ಪ್ರತಿಕ್ರಿಯೆ 3
ತರಗತಿ ಆರಂಭಿಸಿದ್ದು ಒಳ್ಳೆಯದು:
ಆನ್‍ಲೈನ್ ತರಗತಿಗಳಿಗೆ ಪ್ರತಿ ದಿನ ಹಾಜರಾಗುತ್ತಿದ್ದೇವೆ. ಆದರೆ ತರಗತಿಯಲ್ಲಿ ಪಾಠ ಕೇಳಿದಂತೆ ಅನಿಸುತ್ತಿಲ್ಲ. ಮನೆಯಲ್ಲೇ ಇದ್ದರೆ ಹೆಚ್ಚು ಓದಲು ಮನಸ್ಸು ಬರುವುದಿಲ್ಲ. ತರಗತಿಯಲ್ಲಾದರೆ ಮುಕ್ತ ವಾತಾವರಣ ಇರಲಿದೆ. ತರಗತಿ ಆರಂಭಿಸಿದ್ದು ಸೂಕ್ತವಾಗಿದೆ. ಶಾಲೆಗೆ ತೆರಳಲು ನಾನು ಉತ್ಸುಕಳಾಗಿದ್ದೇನೆ.
* ಸಿ.ಆರ್.ದೀಪಿಕಾ, ಎಸ್‍ಎಸ್‍ಎಲ್‍ಸಿ ವಿದಾರ್ಥಿನಿ
ಪ್ರತಿಕ್ರಿಯೆ 4
ಕಾಲೇಜಿಗೆ ಹೋಗುತ್ತೇನೆ:
ನಾನು ಜನವರಿ 1 ರಿಂದ ತರಗತಿಗೆ ಖಂಡಿತಾ ಹೋಗುತ್ತೇನೆ. ಮನೆಯಲ್ಲಿ ಓದುವುದಕ್ಕಿಂತ ತರಗತಿಗಳಲ್ಲಿ ಕಲಿತರೆ ಹೆಚ್ಚು ಉಪಯೋಗ. ಗಣಿತದ ಸಮಸ್ಯೆಗಳನ್ನು ಮನೆಯಲ್ಲಿಯೇ ಬಗೆಹರಿಸಿಕೊಳ್ಳುವುದು ಕಷ್ಟವಿತ್ತು. ಜೊತೆಗೆ ವಿಜ್ಞಾನದ ಪ್ರಾಯೋಗಿಕ ತರಗತಿ ಕಲಿಯುವುದು ತುಂಬಾ ಅವಶ್ಯಕ.
* ಸಿ.ಎಸ್.ಧನುಷ್, ದ್ವಿತೀಯ ಪಿಯು ವಿದ್ಯಾರ್ಥಿ
———

ತಾಜಾ ಸುದ್ದಿಗಳು