ನೈಟ್‌ ಕರ್ಫ್ಯೂ; ಮಲೆ ಮಾದೇಶ್ವರನ ದರ್ಶನಕ್ಕೆ ಮಾರ್ಗಸೂಚಿ

ನೈಟ್‌ ಕರ್ಫ್ಯೂ; ಮಲೆ ಮಾದೇಶ್ವರನ ದರ್ಶನಕ್ಕೆ ಮಾರ್ಗಸೂಚಿ

ಚಾಮರಾಜನಗರ, ಡಿಸೆಂಬರ್ 24: ಕರ್ನಾಟಕ ಸರ್ಕಾರ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಣೆ ಮಾಡಿದೆ. ಈ ಹಿನ್ನಲೆಯಲ್ಲಿ ಮಲೆ ಮಾದೇಶ್ವರ ದೇವಾಲಯದ ದರ್ಶನದಲ್ಲಿ ಹಲವು ಬದಲಾವಣೆ ಮಾಡಲಾಗಿದ್ದು, ಮಾರ್ಗಸೂಚಿ ಪ್ರಕಟಿಸಲಾಗಿದೆ. ಗುರುವಾರ ರಾತ್ರಿ 11 ಗಂಟೆಯಿಂದ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಭಕ್ತರಿಗಾಗಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ದಿನಗಳಲ್ಲಿ ದೇವಾಲಯಕ್ಕೆ ಆಗಮಿಸುವ ಭಕ್ತರು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಮನವಿಯನ್ನು ಮಾಡಲಾಗಿದೆ. ದೇವಾಲಯಕ್ಕೆ ಬರುವ ಭಕ್ತರಿಗಾಗಿಯೇ ಸಹಾಯವಾಣಿಯನ್ನು ಆರಂಭಿಸಲಾಗಿದೆ. ದೇವಾಲಯದ ದರ್ಶನದ ಸಮಯ, ನಿಯಮಗಳ ಬಗ್ಗೆ ಯಾವುದೇ ಗೊಂದಲವಿದ್ದರೂ ಸಹಾಯವಾಣಿ ಸಂಖ್ಯೆ 1860 425 4350 ಗೆ ಕರೆ ಮಾಡಬಹುದು.

10.30ರೊಳಗೆ ಆಗಮಿಸಬೇಕು * ಕೊಠಡಿಗಳನ್ನು ಆನ್‍ ಲೈನ್ ಮೂಲದ ಕಾಯ್ದಿರಿಸಿರುವ ಭಕ್ತಾದಿಗಳು ರಾತ್ರಿ 10.30ರೊಳಗೆ ಮಹದೇಶ್ವರ ಬೆಟ್ಟಕ್ಕೆ ಬಂದು ಮಾಹಿತಿ ಕೇಂದ್ರದಲ್ಲಿ ನೋಂದಾಯಿಸಿ, ಸಂಬಂಧಪಟ್ಟ ವಸತಿ ಗೃಹದೊಳಗೆ ವಾಸ್ತವ್ಯಕ್ಕೆ 10.45ರೊಳಗೆ ತಲುಪಬೇಕು. * ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮಾಹಿತಿ ಕೇಂದ್ರವನ್ನು ಮುಚ್ಚಲಾಗುವುದು ಹಾಗೂ ಯಾವುದೇ ಕೊಠಡಿಗಳನ್ನು ಈ ಸಮಯದಲ್ಲಿ ವಿತರಿಸಲಾಗುವುದಿಲ್ಲ.

ಸಂಚಾರಕ್ಕೆ ಅವಕಾಶ ಇರುವುದಿಲ್ಲ * ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಸಂಪೂರ್ಣ ಲಾಕ್‍ ಔಟ್ ಪಾಲಿಸಲಾಗುವುದು. ಯಾವುದೇ ಸಂಚಾರಕ್ಕೆ ಅವಕಾಶವಿರುವುದಿಲ್ಲ. * ದೇವಸ್ಥಾನ, ಲಾಡು ಕೌಂಟರ್ ಹಾಗೂ ದಾಸೋಹಕ್ಕೆ ಬರುವವರು ರಾತ್ರಿ 10ರ ಒಳಗಾಗಿ ದರ್ಶನ ಪಡೆಯುವುದು, ದಾಸೋಹ ಸ್ವೀಕರಿಸುವುದು ಹಾಗೂ ಲಾಡು ಖರೀದಿಸುವುದು. ರಾತ್ರಿ 10ರ ನಂತರ ಈ ಮೂರೂ ಸೇವೆಗಳು ಲಭ್ಯವಿರುವುದಿಲ್ಲ.

ಭಕ್ತಾದಿಗಳಿಗೆ ಪವೇಶವಿಲ್ಲ * ಬೆಳಗ್ಗೆ 4ಕ್ಕೆ ಪ್ರಾರಂಭವಾಗುವ ಅಭಿಷೇಕಕ್ಕೆ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಆದರೆ, ಸಾಂಪ್ರದಾಯಿಕವಾಗಿ ಅಭಿಷೇಕವನ್ನು ಬೇಡ ಗಂಪಣರು ಹಾಗೂ ದೇವಾಲಯದ ಒಳಾವರಣದ ಸಿಬ್ಬಂದಿ ನಡೆಸಲಿರುವರು. ಬೆಳಗ್ಗೆ 5ರ ನಂತರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು. * ದೇವಾಲಯದ ಆವರಣದಲ್ಲಿ ವಸತಿ ಗೃಹಗಳು, ಕಾಟೇಜುಗಳು ಹಾಗೂ ಡಾರ್ಮಿಟರಿ ಹೊರತುಪಡಿಸಿ, ಬೇರೆ ಯಾವುದೇ ತೆರೆದ ಜಾಗಗಳು ಹಾಗೂ ದೇವಾಲಯದ ಪಕ್ಕದಲ್ಲಿರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆಯ ಷೆಡ್‍ನಲ್ಲಿ ಉಳಿದುಕೊಳ್ಳಬಾರದಾಗಿ ಮನವಿ. * ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಶ್ರೀ ಕ್ಷೇತ್ರಕ್ಕೆ ಬರುವುದು ಹಾಗೂ ಶ್ರೀ ಕ್ಷೇತ್ರದಿಂದ ತೆರಳುವವರೆಗೆ ಧರಿಸಿರಲು ಕೋರಿದೆ. ವೈಯುಕ್ತಿಕವಾಗಿ ಸ್ಯಾನಿಟೈಸರ್ ಇಟ್ಟುಕೊಳ್ಳಲು ಹಾಗೂ ಆಗಾಗ ಉಪಯೋಗಿಸಲು ಕೋರಿದೆ.

ಸಾಮಾಜಿಕ ಅಂತರ ಪಾಲಿಸಿ * ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುವುದು. ವಿಶೇಷವಾಗಿ ದೇವಸ್ಥಾನದ ದರ್ಶನಕ್ಕೆ ಕ್ಯೂ ನಿಲ್ಲುವಾಗ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡೇ ದರ್ಶನ ಮಾಡುವುದು. * ದಾಸೋಹದಲ್ಲಿ ಕಡ್ಡಾಯವಾಗಿ ಕ್ಯೂ ನಲ್ಲಿ ಹಾಗೂ ಕುಳಿತುಕೊಳ್ಳುವ ಮೇಜಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

ತಾಜಾ ಸುದ್ದಿಗಳು