ಸಾರಿಗೆ ಸಿಬ್ಬಂದಿ ಮುಷ್ಕರ: ಪರದಾಡಿದ ಪ್ರಯಾಣಿಕರು, ಸವಧಿ ಮಾತುಕತೆ ವಿಫಲ, ಮುಂದುವರೆಯಲಿರುವ ಮುಷ್ಕರ

ಸಾರಿಗೆ ಸಿಬ್ಬಂದಿ ಮುಷ್ಕರ: ಪರದಾಡಿದ ಪ್ರಯಾಣಿಕರು, ಸವಧಿ ಮಾತುಕತೆ ವಿಫಲ, ಮುಂದುವರೆಯಲಿರುವ ಮುಷ್ಕರ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೆಲವು ಸಾರಿಗೆ ಸಂಘಟನೆಗಳು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.

ಮುಷ್ಕರ ಪ್ರಯಾಣಿಕರಷ್ಟೇ ಅಲ್ಲದೇ ಸರ್ಕಾರದ ಮಟ್ಟದಲ್ಲೂ ಗೊಂದಲ ಮೂಡಿಸಿತು. ಮುಷ್ಕರ ಮುಂದುವರೆಯುತ್ತದೆಯೋ ಇಲ್ಲವೋ ಎನ್ನುವ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ. ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿ ಹಳ್ಳಿ ಚಂದ್ರಶೇಖರ್ ಮತ್ತಿತರರು ಮುಷ್ಕರಕ್ಕೆ ಕರೆ ನೀಡಿದ್ದು, ಎಐಟಿಸಿಯು ಮುಖಂಡ ಅನಂತ ಸುಬ್ಬರಾವ್ ಮತ್ತಿತರರರು ಹೋರಾಟಕ್ಕೆ ನೈತಿಕ ಬೆಂಬಲ ನೀಡಿದ್ದರು. ಹೀಗಾಗಿ ಗೊಂದಲ ಏರ್ಪಟ್ಟಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಜವಾಬ್ದಾರಿ ಹೊಂದಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರಿಗೆ ನೌಕರರ ಸಂಘಟನೆಗಳ ಪ್ರಮುಖರ ಜತೆ ಸಭೆ ನಡೆಸಿದರು. ಆದರೆ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರ ಜತೆ ಮಾತುಕತೆ ನಡೆಸದೇ, ಎ.ಐ.ಟಿ.ಯು.ಸಿ ಮುಖಂಡ ಅನಂತ ಸುಬ್ಬರಾವ್, ಸಿ.ಐ.ಟಿ.ಯು. ಮುಖಂಡ ಪ್ರಕಾಶ್, ಮಹಾಮಂಡಲದ ಪ್ರತಿನಿಧಿಗಳು, ಭಾರತೀಯ ಮಜ್ದೂರ್ ಸಂಘದ ಶ್ರೀ ಪೂಂಜಾ ಅವರ ಜತೆ ಸಮಾಲೋಚಿಸಿದರು. ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷ ಚಂದ್ರಪ್ಪ, ಬಿ.ಎಂ.ಟಿ.ಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಸಾರಿಗೆ ಇಲಾಖೆಯ ಉನ್ನತ ಅಧಿಕಾರಗಳ ಜತೆ ಚರ್ಚೆ ನಡೆಸಿದರು.

ಆದರೆ ಮಾತುಕತೆ ಫಲಪ್ರದವಾಗಲಿಲ್ಲ. ಬಳಿಕ ನಂದೀಶ್ ರೆಡ್ಡಿ ಅವರು ಯಶವಂತಪುರದಲ್ಲಿ ಪ್ರತಿಭಟನಾನಿರತ ಸಾರಿಗೆ ನೌಕರರ ಜತೆ ಚರ್ಚಿಸಿದರಾದರೂ ಸೂಕ್ತ ಪ್ರತಿಫಲ ಹೊರಬರಲಿಲ್ಲ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಾರಿಗೆ ಸಿಬ್ಬಂದಿಗಳ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಸಹಾನುಭೂತಿ ಇದೆ. ಅವರ ಸಮಸ್ಯೆಗಳ ಬಗ್ಗೆ ಈಗಾಗಲೇ ಒಕ್ಕೂಟಗಳ ಮುಖಂಡರ ಜತೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಅಗತ್ಯವಿದ್ದರೆ ಮತ್ತಷ್ಟು ಸಂಘಟನೆಗಳು ಮತ್ತು ಮುಖಂಡರ ಜತೆ ಮಾತುಕತೆಗಳನ್ನು ನಡೆಸಿ ಸಂಧಾನ ಮಾರ್ಗದಲ್ಲಿ ಸಮಸ್ಯೆ ಪರಿಹರಿಸುವ ಉದ್ದೇಶವನ್ನು ನಮ್ಮ ಸರ್ಕಾರ ಹೊಂದಿದೆ ಎಂದರು.

ಇಂದು ಪ್ರತಿಭಟಾಕಾರರು ದಿಡೀರ್ ಆಗಿ ಬಸ್ ಸಂಚಾರವನ್ನು ಕೆಲವೆಡೆ ಸ್ಥಗಿತಗೊಳಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟಾಗಿದೆ. ಆದ್ದರಿಂದ ತಕ್ಷಣ ಮುಷ್ಕರನಿರತ ಸಿಬ್ಬಂದಿಗಳು ಕರ್ತವ್ಯಕ್ಕೆ ಮರಳಬೇಕೆಂದು ಮನವಿ ಮಾಡುತ್ತೇನೆ. ಸಾರಿಗೆ ನಿಗಮದ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಬೇಡಿಕೆ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿಯವರೊಂದಿಗೆ ಒಕ್ಕೂಟದ ಮುಖಂಡರುಗಳ ಸಭೆಯನ್ನು ಏರ್ಪಡಿಸಿ ಶೀಘ್ರವೇ ಮುಂದಿನ ಮಾರ್ಗೋಪಾಯಗಳನ್ನು ನಿರೂಪಿಸಲಾಗುವುದು ಎಂದರು.

ಕೋವಿಡ್‍ನಿಂದಾಗಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ನೌಕರರ ಕುಟುಂಬದವರಿಗೆ ಇನ್ನು 15 ದಿನಗಳೊಳಗಾಗಿ 30 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಸಿಬ್ಬಂದಿಗಳಿಗೆ ಕೆಲಸಗಳನ್ನು ವಿಂಗಡಿಸುವಾಗ ಕೆಲವು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಬಗ್ಗೆ ಒಕ್ಕೂಟದ ಮುಖಂಡರು ಗಮನ ಸೆಳೆದಿದ್ದಾರೆ. ಆದ್ದರಿಂದ ಈ ರೀತಿಯ ಕಿರುಕುಳ ನೀಡುವ ಘಟನೆಗಳು ಮುಂದೆ ನಡೆದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನಮಂಡಲದ ಅಧಿವೇಶನದಲ್ಲಿ ನಾನು ಪಾಲ್ಗೊಂಡಿದ್ದರಿಂದ ಸಾರಿಗೆ ಅಧಿಕಾರಿಗಳನ್ನು ಕಳುಹಿಸಿ ಪ್ರತಿಭಟನಾನಿರತರ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ. ಕಾರ್ಮಿಕರ ಹಿತಾಸಕ್ತಿ ರಕ್ಷಿಸುವುದೇ ನನ್ನ ಪ್ರಥಮ ಆದ್ಯತೆಯೇ ಹೊರತು ನನಗೆ ಯಾವುದೇ ಪ್ರತಿಷ್ಠೆಯ ಪ್ರಶ್ನೆ ಉದ್ಭವಿಸಿಲ್ಲ ಎಂಬುದನ್ನು ಪ್ರತಿಭಟನಾಕಾರರು ಗಮನಿಸಬೇಕು ಎಂದು ಲಕ್ಷ್ಮಣ ಸವದಿ ಹೇಳಿದರು.

ಸಾರಿಗೆ ಸಿಬ್ಬಂದಿ ಬಗ್ಗೆ ನನಗೆ ಮತ್ತು ನಮ್ಮ ಸರ್ಕಾರಕ್ಕೆ ಯಾವತ್ತೂ ಸಹಾನುಭೂತಿ ಇದೆ. ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿಯೂ ಸಹ ಎಲ್ಲಾ ಸಿಬ್ಬಂದಿಗಳಿಗೆ ಯಾವುದೇ ಕಡಿತವಿಲ್ಲದೇ ಸಂಬಳ ನೀಡಿದ್ದು ಇದಕ್ಕೆ ನಿದರ್ಶನವಾಗಿದೆ. ಮುಖ್ಯಮಂತ್ರಿ ಅವರು ಸಹ ಸಾರಿಗೆ ಸಿಬ್ಬಂದಿಗಳ ಸಂಬಳ ನೀಡಿಕೆಯ ಬಗ್ಗೆ ಅತ್ಯಂತ ಉದಾರವಾಗಿ ಬೇಡಿಕೆಗೆ ಸ್ಪಂದಿಸಿದ್ದನ್ನು ನಾನು ಸ್ಮರಿಸುತ್ತೇನೆ ಎಂದರು.

ಅನಂತ ಸುಬ್ಬರಾವ್ ಮಾತನಾಡಿ, ಇದು ನಾವು ಕರೆ ನೀಡಿರುವ ಮುಷ್ಕರವಲ್ಲ. ಯಾರೋ ಸ್ವಾಮಿಗಳು, ರೈತ ಮುಖಂಡರು ಕರೆ ನೀಡಿರುವ ಮುಷ್ಕರ. ದಿಢೀರ್ ಆಗಿ ಹೋರಾಟ ಮಾಡುತ್ತಿದ್ದಾರೆ. ಕಾನೂನು ಬದ್ದವಾಗಿ ಅವರು ಮುಷ್ಕರಕ್ಕೆ ಕರೆಕೊಟ್ಟಿಲ್ಲ‌. ಹಾಗಾಗಿ ನಾವು ಪ್ರತಿಭಟನೆ ಕೈ ಬಿಟ್ಟು ಕರ್ತವ್ಯಕ್ಕೆ ಮರಳುವಂತೆ ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದೇವೆ‌ ಎಂದರು.

ಮಾತುಕತೆಗೆ ಪೂರಕವಾದ ವಾತಾವರಣವನ್ನು ಸರ್ಕಾರವೂ ನಿರ್ಮಾಣ ಮಾಡಬೇಕು. ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನೆಲ್ಲಾ ಸಚಿವರ ಗಮನಕ್ಕೆ ತಂದಿದ್ದೇವೆ. ನಮ್ಮ ಬೆಂಬಲಿಗರು ಅವರ ಪ್ರತಿಭಟನೆಯನ್ನು ಬೆಂಬಲಿಸಿದ್ದಾರೆ. ಆದರೆ ಮುಂಚೂಣಿಯಲ್ಲಿ ನಿಂತಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಎಷ್ಟು ದಿನ ಟ್ರೇಡ್ ಯೂನಿಯನ್ ನ ಮುನ್ನಡೆಸಿದ್ದಾರೆ. ಧರಣಿ ಮಾಡುವುದಾಗಿ ನಮಗೆ ಹೇಳಿದ್ದರು. ಇದೀಗ ದಿಢೀರ್ ಮುಷ್ಕರ ಮಾಡಿದ್ದಾರೆ. ನಮಗೆ ಈ ಮುಷ್ಕರದ ವಿಷಯವೇ ಗೊತ್ತಿರಲಿಲ್ಲ. ಕಾರ್ಮಿಕ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಆದರೆ ಸಾರಿಗೆ ನೌಕರರ ನೋವಿಗೆ ಸ್ಪಂದಿಸಿದ್ದಾರೆಂದು ಸಾರಿಗೆ ನೌಕರರು ಅವರ ಮಾತಿಗೆ ಬೆಲೆಕೊಟ್ಟಿದ್ದಾರೆ ಎಂದರು.

ತಾಜಾ ಸುದ್ದಿಗಳು