ಮನೆ ಕಳೆದುಕೊಂಡವರಿಗೆ ತಕ್ಷಣಕ್ಕೆ 10 ಸಾವಿರ ರೂ. ನೆರವು: ಮುಖ್ಯಮಂತ್ರಿ ಯಡಿಯೂರಪ್ಪ

ಮನೆ ಕಳೆದುಕೊಂಡವರಿಗೆ ತಕ್ಷಣಕ್ಕೆ 10 ಸಾವಿರ ರೂ. ನೆರವು: ಮುಖ್ಯಮಂತ್ರಿ ಯಡಿಯೂರಪ್ಪ

ಮೈಸೂರು: ಪ್ರವಾಹದಿಂದ ಮನೆ ಕಳೆದುಕೊಂಡ ಜನರಿಗೆ ತಕ್ಷಣಕ್ಕೆ 10 ಸಾವಿರ ರೂಪಾಯಿ ನೀಡಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ.

ಮೈಸೂರಿನಲ್ಲಿ ನಾಡ ಹಬ್ಬ ದಸರಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರದಿಂದ ಪರಿಹಾರ, ನೆರವು ಪಡೆಯುವ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ ಎಂದರು.

ಇನ್ನು ಉತ್ತರ ಕರ್ನಾಟಕದ ನೆರೆ ಪರಿಸ್ಥಿತಿಯ ಕುರಿತು ಪ್ರತಿಕ್ರಿಯಿಸಿ. 12 ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿ ಮಾಹಿತಿ ಪಡೆಯಲಾಗಿದೆ. 10 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ವಾರದೊಳಗೆ ಅಂದಾಜು ನಷ್ಟದ ವರದಿ ಸಲ್ಲಿಸುವಂತೆ ಡಿಸಿಗಳಿಗೆ ಸೂಚಿಸಿದ್ದೇನೆ ಎಂದರು. ಅನುದಾನದ ಕೊರತೆ ಇಲ್ಲ, ಎನ್ಡಿಆರ್ಎಫ್ ನಿಧಿಯಲ್ಲಿ ಹಾನಿಯಾದವರಿಗೆ, ಮನೆ ಕಳೆದುಕೊಂಡವರಿಗೆ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ಸಿಎಂ ತಿಳಿಸಿದರು.

ಕಳೆದ ರಾತ್ರಿ ಪ್ರಧಾನಿ ಮೋದಿ ಅವರು ತಮ್ಮೊಂದಿಗೆ ಮಾತುಕತೆ ನಡೆಸಿದ್ದು, ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ. ಸನ್ನಿವೇಶವನ್ನು ನಿರ್ವಹಿಸಲು ಎಲ್ಲಾ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದರು.

ಧಾರಾಕಾರ ಮಳೆ ಮತ್ತು ರಾಜ್ಯದ ಪ್ರಮುಖ ಅಣೆಕಟ್ಟುಗಳಿಂದ ನೀರನ್ನು ಬಿಡುಗಡೆ ಮಾಡುವುದರಿಂದ ಕರ್ನಾಟಕದ ಅನೇಕ ಭಾಗಗಳಲ್ಲಿನ ಪ್ರವಾಹ ಪರಿಸ್ಥಿತಿ ಶುಕ್ರವಾರ ಗಂಭೀರವಾಗಿದೆ. ಕಳೆದ ಮೂರು ತಿಂಗಳಲ್ಲಿ ಈ ಪ್ರದೇಶದಲ್ಲಿ ಮೂರನೇ ಬಾರಿಗೆ ಪ್ರವಾಹ ಉಂಟಾಗಿರುವುದರಿಂದ ಉತ್ತರ ಕರ್ನಾಟಕವು ಶೋಚನೀಯ ಸ್ಥಿತಿ ತಲುಪಿದೆ.

ತಾಜಾ ಸುದ್ದಿಗಳು