7 ತಿಂಗಳ ಬಳಿಕ ಬಳಿಕ ಭಕ್ತರಿಗಾಗಿ ಬಾಗಿಲು ತೆರೆದ ಶಬರಿಮಲೆ ದೇವಸ್ಥಾನ

7 ತಿಂಗಳ ಬಳಿಕ ಬಳಿಕ ಭಕ್ತರಿಗಾಗಿ ಬಾಗಿಲು ತೆರೆದ ಶಬರಿಮಲೆ ದೇವಸ್ಥಾನ

ತಿರುವನಂತಪುರ: 7 ತಿಂಗಳ ಬಳಿಕ ಕೇರಳ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಶನಿವಾರ ತೆರೆಯಲಾಗಿದ್ದು, 5 ದಿನಗಳ ಮಾಸಿಕ ಪೂಜೆ ನಡೆಯಲಿದೆ. ಈ ವೇಳೆ ಭಕ್ತರಿಗೂ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಆನ್‌ಲೈನ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಭಕ್ತರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದ್ದು, ನಿತ್ಯ ಗರಿಷ್ಠ 250 ಮಂದಿ ಭಕ್ತಾದಿಗಳಿಗೆ ಪ್ರವೇಶ ನೀಡಲು ಅವಕಾಶ ನೀಡಲಾಗಿದೆ.

ಪಂಪ ಸ್ಥಾನವನ್ನು ತಲುಪುವುದಕ್ಕೆ ಗರಿಷ್ಠ 48 ಗಂಟೆಗಳೊಳಗೆ ಪರೀಕ್ಷೆಗೆ ಒಳಗಾಗಿ ಪಡೆದಿರುವ ಕೋವಿಡ್‌–19 ವೈದ್ಯಕೀಯ ವರದಿಯನ್ನು ಭಕ್ತಾದಿಗಳು ತಂದಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ವೈರಸ್‌ ಸೋಂಕು ಇಲ್ಲದ ಹಾಗೂ ಫಿಟ್ನೆಸ್‌ ಸರ್ಟಿಫಿಕೆಟ್‌ ಹೊಂದಿರುವ ಭಕ್ತಾದಿಗಳಿಗೆ ಪಂಪಾ ಶಿಬಿರದಿಂದ ಗಿರಿಯಲ್ಲಿರುವ ದೇವಾಲಯಕ್ಕೆ ನಡೆದು ಸಾಗಲು ಮಧ್ಯಾಹ್ನ ಅವಕಾಶ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಎತ್ತರದ ಬೆಟ್ಟ ಏರುತ್ತ ಸಾಗುವ ಭಕ್ತಾದಿಗಳಿಗೆ ಮಾಸ್ಕ್‌ ಕಡ್ಡಾಯಗೊಳಿಸಿಲ್ಲ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಗಿರಿಯನ್ನು ಏರಲು ಈಗಲೂ ಅವಕಾಶ ನೀಡಿಲ್ಲ, ಕೋವಿಡ್‌–19 ಪರಿಸ್ಥಿತಿ ಸುಧಾರಿಸಲು ಕಾಯಬೇಕಿದ್ದು, ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಪತ್ತೆಯಾದರೆ, ಚಿಕಿತ್ಸೆಗಾಗಿ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ. ಪಂಪಾ ನದಿಯಲ್ಲಿ ಸ್ನಾನ ಮಾಡಲು ಅನುಮತಿ ಇಲ್ಲ.

ಅದರ ಬದಲು ಸ್ನಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಎರುಮೇಲಿ ಮತ್ತು ವಡಶ್ಶೇರಿಕ್ಕರ ಮಾರ್ಗಗಳಲ್ಲಿ ಮಾತ್ರ ಸಾಗಲು ಭಕ್ತಾದಿಗಳಿಗೆ ಅವಕಾಶವಿದ್ದು, ಕಾಡಿನ ಉಳಿದ ಎಲ್ಲ ಮಾರ್ಗಗಳನ್ನೂ ನಿರ್ಬಂಧಿಸಲಾಗಿದೆ. ಭಕ್ತಾದಿಗಳಿಗೆ ದೇಗುಲದಲ್ಲಿ ಗುಂಪುಗೂಡಲು ಹಾಗೂ ಅಲ್ಲಿಯೇ ಇರಲು ಅವಕಾಶ ನೀಡಲಾಗಿಲ್ಲ. ಅಕ್ಟೋಬರ್‌ 21ರಂದು ದೇಗುಲ ಮತ್ತೆ ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳು