ಕೊರೊನಾ ಎಫೆಕ್ಟ್- ಮಡಿಕೇರಿ ದಸರಾದ ಕರಗ ಎರಡು ದಿನಕ್ಕೆ ಸೀಮಿತ

ಕೊರೊನಾ ಎಫೆಕ್ಟ್- ಮಡಿಕೇರಿ ದಸರಾದ ಕರಗ ಎರಡು ದಿನಕ್ಕೆ ಸೀಮಿತ

ಮಡಿಕೇರಿ: ಕೊರೊನಾ ವೈರಸ್ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ಜಿಲ್ಲಾಡಳಿತ ಸರಳ ದಸರಾಗೆ ಮುಂದಾಗಿದ್ದು, ಕರಗ ಮಹೋತ್ಸವವನ್ನು ಸಹ ಎರಡು ದಿನಕ್ಕೆ ಸೀಮಿತಗೊಳಿಸಲಾಗಿದೆ.

ಜಿಲ್ಲಾಡಳಿತದ ನಿರ್ಧಾರಕ್ಕೆ ದಸರಾ ಸಮಿತಿಯವರು ಸಹ ಸಮ್ಮತಿಸಿದ್ದಾರೆ. ಹೀಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡಿ, ವಿಜೃಂಭಣೆಯಿಂದ ನಡೆಸಲಾಗುತ್ತಿದ್ದ ಮಂಜಿನನಗರಿ ಮಡಿಕೇರಿಯ ದಸರಾ ಈ ಬಾರಿ ನಿರಾಡಂಬರವಾಗಿ ನಡೆಯಲಿದೆ.

ದಸರಾ ಸಂಬಂಧ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರಳ ಹಾಗೂ ಸಂಪ್ರದಾಯಿಕವಾಗಿ ತಲಕಾವೇರಿ ಜಾತ್ರೆ ಹಾಗೂ ಮಡಿಕೇರಿ ದಸರಾ ಆಚರಿಸಬೇಕು. ಪ್ರಸ್ತುತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು, ಪ್ರತಿಯೊಬ್ಬರು ಸೂಕ್ಷ್ಮತೆಯಿಂದ ವರ್ತಿಸಬೇಕಾಗಿದೆ. ಸಂಪ್ರದಾಯಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಪಚಾರ ಅಥವಾ ಲೋಪ ಉಂಟಾಗದಂತೆ ಹಾಗೂ ವಿಜೃಂಭಣೆಯಿಂದ ದಸರಾ ಆಚರಿಸದಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಕರಗ ಉತ್ಸವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ಸಂಪ್ರದಾಯಬದ್ಧವಾಗಿ ನಡೆಸಲು ಸೂಚಿಸಿದ್ದಾರೆ. ಅದರಂತೆ ಕರಗ ಆಚರಣೆ ನಡೆಯಲಿದೆ.

ಕರಗ ಉತ್ಸವ ಎರಡೇ ದಿನ
ಅ.17ರಂದು ಸಂಜೆ ವೇಳೆಗೆ ಮಡಿಕೇರಿ ನಗರದ ಪಂಪಿನ ಕೆರೆಯಿಂದ ಕರಗೋತ್ಸವಕ್ಕೆ ಚಾಲನೆ ದೊರೆಯಲಿದೆ. ಅ.17 ಹಾಗೂ 26 ರಂದು ಮಾತ್ರ ಕರಗ ನಗರ ಪ್ರದಕ್ಷಿಣೆ ನಡೆಯಲಿದ್ದು, ಈ ಸಂದರ್ಭ ಹೆಚ್ಚು ಮಂದಿ ಸೇರುವುದಿಲ್ಲ. ಅಲ್ಲದೆ ಕರಗ ಹೋರುವ ವೃತ್ತದಾರಿಗಳು ಹಾಗೂ ದೇವಾಲಯದ ಸಮಿತಿ ಸದಸ್ಯರುಗಳಿಗೆ ಇಂದು ಮಡಿಕೇರಿ ನಗರದ ನಗರಸಭೆಯಲ್ಲಿ ಕೋವಿಡ್ ಟೇಸ್ಟ್ ಮಾಡಿಸಲಾಗುತ್ತಿದೆ. ಕರಗ ಮಹೋತ್ಸವ 17 ರಂದು ಸಂಜೆ ಆರಂಭಗೊಂಡು ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿದ ಬಳಿಕ ತಮ್ಮ ದೇವಾಲಯಗಳಿಗೆ ನಾಲ್ಕು ಶಕ್ತಿ ದೇವತೆಗಳ ಕರಗಗಳು ತೆರಳಿದೆ ಎಂದು ಸಮಿತಿ ಮಾಹಿತಿ ನೀಡಿದೆ.

ಮಂಟಪ ಮೆರವಣಿಗೆ ಇಲ್ಲ
ದಸರಾದ ಪ್ರಮುಖ ಆಕರ್ಷಣೆಯಾದ ಮಂಟಪ ಮೆರವಣಿಗೆಯನ್ನು ಈ ಬಾರಿ ರದ್ದುಗೊಳಿಸಲಾಗಿದೆ. ಮಂಟಪ ಮೆರವಣಿಗೆ ನಡೆಸಿದರೆ ಜನಸಂದಣಿ ನಿಯಂತ್ರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗುವುದರಿಂದ ಅ.26ರ ವಿಜಯದಶಮಿಯಂದು ಮಂಟಪ ಸಮಿತಿಗಳು ಕಳಸ ಪ್ರತಿಷ್ಠಾಪನೆ ಮಾಡಲಿವೆ. ಪ್ರತಿ ಮಂಟಪ ಸಮಿತಿಯಿಂದಲೂ ಹತ್ತು ಮಂದಿ ಕಳಸದೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ, ಬನ್ನಿ ಕಡಿಯುವುದರ ಮೂಲಕ ಮಡಿಕೇರಿ ದಸರಾಗೆ ಮಂಗಳ ಹಾಡಲಾಗುತ್ತದೆ ಎಂದು ದಸರಾ ಸಮಿತಿ ಕಾರ್ಯಧ್ಯಕ್ಷ ರಾಬಿನ್ ದೇವಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳು