ಸುಶಾಂತ್​ ಜತೆ ಪಾರ್ಟಿ ಮಾಡಿದ್ದು ಹೌದು … ಒಪ್ಪಿಕೊಂಡ ಶ್ರದ್ಧಾ ಕಪೂರ್​

ಸುಶಾಂತ್​ ಜತೆ ಪಾರ್ಟಿ ಮಾಡಿದ್ದು ಹೌದು … ಒಪ್ಪಿಕೊಂಡ ಶ್ರದ್ಧಾ ಕಪೂರ್​

ಮುಂಬೈ: ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ ಅಧಿಕಾರಿಗಳ ಎದುರು ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಹಲವು ಉಪಯುಕ್ತ ಮಾಹಿತಿಗಳನ್ನು ಎನ್​ಸಿಬಿ ಅಧಿಕಾರಿಗಳಿಗೆ ಹೇಳಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಡ್ರಗ್ಸ್​ ಜಾಲ ಮತ್ತು ಬಾಲಿವುಡ್​ ನಂಟಿನ ಕುರಿತು ಎನ್​ಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಬಾಲಿವುಡ್​ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​ ಮತ್ತು ರಾಕುಲ್​ ಪ್ರೀತ್​ ಸಿಂಗ್​ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಲಾಗಿತ್ತು. ಅದರ ಪ್ರಕಾರ, ಇಂದು ಎನ್​ಸಿಬಿ ಅಧಿಕಾರಿಗಳ ಎದುರು ಶ್ರದ್ಧಾ ಹಾಜರಾಗಿದ್ದಾರೆ.

ಈ ಸಂದರ್ಭದಲ್ಲಿ ಅವರು ಸುಶಾಂತ್​ ಸಿಂಗ್​ ರಜಪೂತ್​ ಜತೆಗೆ ಪಾರ್ಟಿ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಮೂಲಗಳ ಪ್ರಕಾರ, ಶ್ರದ್ಧಾ ಅವರು ಸುಶಾಂತ್​ ಸಿಂಗ್​ ಜತೆ ಪಾರ್ಟಿ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದರೂ, ತಾವು ಮಾತ್ರ ಡ್ರಗ್ಸ್​ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರಂತೆ. ಅಷ್ಟೇ ಅಲ್ಲ, ಪಾರ್ಟಿಯಿಂದ ಬಹಳ ಬೇಗನೆ ಹೊರಟು ಬಿಡುತ್ತಿದ್ದಾಗಿ ಹೇಳಿಕೊಂಡಿದ್ದಾರಂತೆ.

ಶ್ರದ್ಧಾ ಕಪೂರ್​ ಇದಕ್ಕೂ ಮುನ್ನ ಸುಶಾಂತ್​ ಸಿಂಗ್ ರಜಪೂತ್​ ಜತೆಗೆ ‘ಚಿಚ್ಚೋರೇ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ಸುಶಾಂತ್​ ನಿಧನರಾದಾಗ ಅವರ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿದ್ದರು. ಸುಶಾಂತ್​ ಅವರ ಮ್ಯಾನೇಜರ್​ ಆಗಿದ್ದ ಜಯಾ ಸಹಾ ಜತೆ3ಗೆ ಚಾಟ್​ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಶ್ರದ್ಧಾ ಕಪೂರ್​ ಅವರಿಗೆ ಎನ್​ಸಿಬಿ ಅಧಿಕಾರಿಗಳು ನೋಟೀಸ್​ ನೀಡಲಾಗಿತ್ತು. ಅದರಂತೆ ಇಂದು ಮಧ್ಯಾಹ್ನದಿಂದ ಶ್ರದ್ಧಾ ವಿಚಾರಣೆ ನಡೆಯುತ್ತಿದೆ.

ತಾಜಾ ಸುದ್ದಿಗಳು