ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

ದುಬೈ: 2020ರ ಐಪಿಎಲ್ ಆವೃತ್ತಿಯಲ್ಲಿ ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಎರಡು ಕ್ಯಾಚ್‍ಗಳನ್ನು ಕೈಚೆಲ್ಲಿದ್ದ ಕೊಹ್ಲಿ, ಬ್ಯಾಟಿಂಗ್‍ನಲ್ಲೂ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲಿಲ್ಲ. ದುಬೈ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿ ಕೊಹ್ಲಿ ದುಬಾರಿಯಾಗಿದ್ದರು. 207 ರನ್ ಬೃಹತ್ ಗುರಿಯನ್ನ ಬೆನ್ನಟ್ಟಿದ್ದ ಆರ್‌ಸಿಬಿ 97 ರನ್‍ಗಳ ಭಾರೀ ಅಂತರದಲ್ಲಿ ಸೋಲುಂಡಿತ್ತು.

ಇದರ ನಡುವೆಯೇ ಕೊಹ್ಲಿ ಅವರಿಗೆ ನಿಧಾನಗತಿ ಬೌಲಿಂಗ್ ರೇಟ್ ಕಾರಣದಿಂದ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಎಲ್ ನಿಯಮಗಳ ಅನ್ವಯ ಮೊದಲ ತಪ್ಪಾಗಿರುವ ಕಾರಣದಿಂದ ದಂಡ ವಿಧಿಸಲಾಗಿದೆ. ಟಿ20 ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡುವ ತಂಡಕ್ಕೆ ಡ್ರಿಂಕ್ಸ್ ಬ್ರೇಕ್ ಸೇರಿಸಿ 75 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ನಿಗಧಿತ ಕಾಲಾವಧಿಯೊಳಗೆ 20 ಓವರ್ ಗಳನ್ನು ತಂಡದ ನಾಯಕ ಮುಗಿಸಬೇಕಿರುತ್ತದೆ. ಅವಧಿಯೊಳಗೆ ಓವರ್ ಮುಕ್ತಾಯ ಮಾಡದಿದ್ದರೇ ಪಂದ್ಯದ ರೆಫ್ರಿ ದಂಡವನ್ನು ವಿಧಿಸುತ್ತಾರೆ.

ಪಂದ್ಯದ ಬಳಿಕ ತಂಡದ ಸೋಲಿನ ಕಾರಣ ಬಿಚ್ಚಿಟ್ಟಿರುವ ಕೊಹ್ಲಿ, ತಂಡದ ಬೌಲರ್ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ನಾವು ಮಾಡಿದ ತಪ್ಪಿನಿಂದ ದುಬಾರಿ ಬೆಲೆ ಕಟ್ಟಿದ್ದೇವೆ. ಪಂಜಾಬ್ ತಂಡವನ್ನು 180 ರನ್ ಗಳಿಗೆ ಕಟ್ಟಿ ಹಾಕುವ ಅವಕಾಶವಿತ್ತು. ಆದರೆ ಕ್ಯಾಚ್ ಬಿಟ್ಟಿದ್ದು ತಂಡಕ್ಕೆ ಮಾರಕವಾಯಿತು. ಸದ್ಯ ನಾವು ಮಾಡಿದ ಕೆಲ ತಪ್ಪುಗಳನ್ನು ತಿದ್ದಿಕೊಂಡು ಸಮಯದೊಂದಿಗೆ ಮುನ್ನಡೆಯಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳು