ಕೊರೊನಾ ಊಹೆಗೆ ನಿಲುಕದ ವೈರಸ್- ಮತ್ತೆ ಲಾಕ್‍ಡೌನ್ ಸುಳಿವು ನೀಡಿದ ಸಿಟಿ ರವಿ

ಕೊರೊನಾ ಊಹೆಗೆ ನಿಲುಕದ ವೈರಸ್- ಮತ್ತೆ ಲಾಕ್‍ಡೌನ್ ಸುಳಿವು ನೀಡಿದ ಸಿಟಿ ರವಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಲ್ ಲಾಕ್‍ಡೌನ್ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವ ಸಿಟಿ ರವಿ ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿಟಿ ರವಿ, ಕೊರೊನಾ ನಮ್ಮ ಊಹೆಗೂ ನಿಲುಕದ ವೈರಸ್ ಆಗಿದ್ದು, ಈ ಬಗ್ಗೆ ಯೋಚನೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ತಿಳಿಸಿದರು.

ಸದ್ಯ ಆರೋಗ್ಯವಾಗಿದ್ದ ಕೇಂದ್ರ ಸಚಿವರು ವಿಧಿವಶರಾಗಿದ್ದು, ರಾಜ್ಯ, ದೇಶಕ್ಕೆ ದೊಡ್ಡ ನಷ್ಟವಾಗಿದೆ. ಹಲವು ಕೊರೊನಾ ಪ್ರಕರಣದಲ್ಲಿ 90 ವರ್ಷದವರೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ಆದರೆ 30 ವರ್ಷಗಳ ವಯಸ್ಸಿನವರು ಸಾವನ್ನಪ್ಪುತ್ತಿದ್ದಾರೆ. ಈಗ ಕೊರೊನಾವನ್ನು ನಿರ್ಲಕ್ಷ್ಯ ಮಾಡುವ ಸ್ಥಿತಿ ಇಲ್ಲ. ಅಚಾನಕ್ ಸಾವುಗಳು ಸಂಭವಿಸುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆ ನೀಡಿರುವ ಎಲ್ಲಾ ಎಚ್ಚರಿಕೆಗಳನ್ನು ವೈಯುಕ್ತಿಕವಾಗಿಯೂ ಅನುಸರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂಬ ಸಂದೇಶ ಲಭಿಸಿದೆ ಎಂದರು.

ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. ಆದರೆ ಕೆಲವರು ಇದನ್ನೂ ಕೇವಲ ಸರ್ಕಾರದ ಜವಾಬ್ದಾರಿ ಅಷ್ಟೇ ಎಂದುಕೊಂಡಿದ್ದಾರೆ. ಕೊರೊನಾ ವಿಚಾರದಲ್ಲಿ ಸರ್ಕಾರಕ್ಕಿಂತ ವೈಯುಕ್ತಿಕ ಜವಾಬ್ದಾರಿ ಬಹಳ ಹೆಚ್ಚಿದೆ. ಆದ್ದರಿಂದ ಎಲ್ಲರೂ ನಿಯಮಗಳನ್ನು ಪಾಲಿಸಿ ಕೊರೊನಾವನ್ನು ದೂರ ಮಾಡೋಣ ಎಂದರು.

ಸದನದಲ್ಲಿ ಕಾಂಗ್ರೆಸ್ ಪಕ್ಷ ಕಾಯ್ದೆಗಳಿಗೆ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಜನರ ವಿಶ್ವಾಸ ಕಳೆದುಕೊಂಡವರು ಇನ್ನು ಏನು ಮಾಡಲು ಸಾಧ್ಯ. ಕಾಂಗ್ರೆಸ್ ಪಕ್ಷದವರು ಜನರ ವಿಶ್ವಾಸ ಕಳೆದುಕೊಂಡಿದ್ದು, ಅವರಿಗೆ ನೈತಿಕತೆ ಎಲ್ಲಿದೆ. ತಾಂತ್ರಿಕವಾಗಿಯೂ ನಾವು ಗೆಲ್ಲುತ್ತೇವೆ, ನಂಬರ್ ನಲ್ಲಿಯೂ ನಾವು ಗೆಲ್ಲುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಳು