ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ: 5 ಕೆಜಿ ಅಕ್ಕಿ ಉಚಿತವಾಗಿ ಮನೆಗೆ ಕೊಂಡೊಯ್ಯಿರಿ!

ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ: 5 ಕೆಜಿ ಅಕ್ಕಿ ಉಚಿತವಾಗಿ ಮನೆಗೆ ಕೊಂಡೊಯ್ಯಿರಿ!

ಪುದುಚೆರಿ: ಕಳೆದ ಆರು ತಿಂಗಳಿಂದ ಎಲ್ಲರ ಬಾಯಲ್ಲಿ ಕೇಳುತ್ತಿರುವ ಶಬ್ದ ಕೊರೋನಾ ಪರೀಕ್ಷೆ. ಪರೀಕ್ಷೆಯನ್ನು ನಡೆಸುವ ವಿಧಾನ ಮತ್ತು ಕೊರೋನಾ ಪಾಸಿಟಿವ್, ಪರೀಕ್ಷಾ ದರ, ಚೇತರಿಕೆ ಮುಂತಾದವುಗಳ ಕುರಿತು ಸಾಕಷ್ಟು ವರದಿ ಮಾಡಲಾಗಿದೆ.

ಪರೀಕ್ಷಾ ಕೇಂದ್ರಗಳಿಗೆ ಬರುವಂತೆ ಜನರನ್ನು ಆಕರ್ಷಿಸುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಇಲ್ಲಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ಅಕ್ಕಿ ಕೊಡಲು ಮುಂದಾಗಿದೆ.

ಎಐಎಡಿಎಂಕೆ ಶಾಸಕ ಅನ್ಬಗಳನ್ ತಮ್ಮ ಸ್ವಕ್ಷೇತ್ರದಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ 5ಕೆಜಿ ಅಕ್ಕಿ ನೀಡುತ್ತಿದ್ದಾರೆ. ಪುದುಚೆರಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುದುಚೆರಿ ಜಿಲ್ಲಾಡಳಿತ ಐಸಿಎಂಆರ್ ಆದೇಶದಂತೆ ಪರೀಕ್ಷೆ ನಡೆಸಲು ಮುಂದಾಗಿದೆ. ಹೆಚ್ಚಿನ ಸೋಂಕಿತರು ಇರುವ ಪ್ರದೇಶದಲ್ಲಿ ಆರೋಗ್ಯ ಶಿಬಿರ ನಡೆಸುತ್ತಿದೆ, ಆದರೆ ಪರೀಕ್ಷೆ ಮಾಡಿಸಿಕೊಳ್ಳಲು ಬರುವವರ ಸಂಖ್ಯೆ ಕಡಿಮೆಯಿತ್ತು, ಇತ್ತೀಚೆಗೆ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಶಿಬಿರಕ್ಕೆ ಜನರಿಂದ ಸರಿಯಾದ ಸ್ಪಂದನೆ ಸಿಗಲಿಲ್ಲ, ಆದ ಕಾರಣ ಪರೀಕ್ಷೆ ನಡೆಸಿಕೊಳ್ಳುವವರನ್ನು ಆಕರ್ಷಿಸಲು ಮುಂದಾಗಿದೆ.

ಶಾಸಕ ಅನ್ಬಗಳನ್ ತಮ್ಮ ಸ್ವಂತ ಹಣದಿಂದ ಅಕ್ಕಿ ಸಂಗ್ರಹಿಸಿ ಐದು ಕಿಲೋ ಚೀಲಗಳಲ್ಲಿ ತುಂಬಿಸಿ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ನೀಡುತ್ತಿದ್ದಾರೆ. ಈ ತಂತ್ರವು ಕೆಲಸ ಮಾಡಿದೆ. ಸುಮಾರು 200 ಜನರು ಪರೀಕ್ಷೆಗಳಿಗೆ ಹಾಜರಾಗಿದ್ದರು ಮತ್ತು ಪ್ರತಿಯೊಬ್ಬರೂ ಅಕ್ಕಿ ಚೀಲದೊಂದಿಗೆ ಮನೆಗೆ ತೆರಳಿದ್ದಾರೆ.

ಮುಂದಿನ ದಿನಗಳಲ್ಲಿ ಇದೇ ಕ್ರಮವನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಇದರಿಂದ ಸುಮಾರು 200 ಮಂದಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ, ಅದರಲ್ಲಿ 18 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ.

ತಾಜಾ ಸುದ್ದಿಗಳು