ತಿಮ್ಮಪ್ಪನ ಹುಂಡಿಗೆ ಒಂದೇ ದಿನ 1 ಕೋಟಿ ರೂ. ಕಾಣಿಕೆ..! ಕೊರೊನಾ ಬಳಿಕ ಚೇತರಿಕೆ ಕಂಡ ಟಿಟಿಡಿ ಆದಾಯ

ತಿಮ್ಮಪ್ಪನ ಹುಂಡಿಗೆ ಒಂದೇ ದಿನ 1 ಕೋಟಿ ರೂ. ಕಾಣಿಕೆ..! ಕೊರೊನಾ ಬಳಿಕ ಚೇತರಿಕೆ ಕಂಡ ಟಿಟಿಡಿ ಆದಾಯ

ತಿರುಮಲ: ಕೊರೊನಾ ಲಾಕ್‌ಡೌನ್‌ ಬಳಿಕ ಶನಿವಾರ ಭಕ್ತರ ದರ್ಶನಕ್ಕೆ ಮುಕ್ತವಾಗಿ ಬಾಗಿಲು ತೆರೆದ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಒಂದೇ ದಿನ 1.02 ಕೋಟಿ ರೂ. ಕಾಣಿಕೆ ಸಂಗ್ರಹಗೊಂಡಿದೆ. ಜೂನ್‌ 11ರಿಂದಲೂ ದೇಗುಲ ಭಕ್ತರಿಗೆ ಬಾಗಿಲು ತೆರೆದಿತ್ತು. ಆದರೆ ಕೋವಿಡ್‌ ಸೋಂಕು ಭೀತಿಯಿಂದ ಒತ್ತಡ ನಿಯಂತ್ರಿಸಲು ಬಿಗಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿತ್ತು.

ಹುಂಡಿಯನ್ನು ಶನಿವಾರ ಪುನರಾರಂಭಿಸಲಾಗಿದ್ದು, ಆರಂಭದ ದಿನವೇ 1 ಕೋಟಿ ರೂ. ಮೇಲ್ಪಟ್ಟು ಕಾಣಿಕೆ ಮೊತ್ತ ಸಂಗ್ರಹಗೊಂಡಿತು. ಆ ದಿನ 13,486 ಭಕ್ತರು ತಿಮ್ಮಪ್ಪನ ದರ್ಶನ ಪಡೆದರು ಎಂದು ತಿರುಮಲ ತಿರುಪತಿ ದೇವಸ್ಥಾನಂ ಸಮಿತಿ (ಟಿಟಿಡಿ) ತಿಳಿಸಿದೆ. ಕೊರೊನಾ ಲಾಕ್‌ಡೌನ್‌ನಿಂದ ಮೂರು ತಿಂಗಳು ಮೇಲ್ಪಟ್ಟು ದೇಗುಲ ಮುಚ್ಚಲಾಗಿತ್ತು.

ಈ ಅವಧಿಯಲ್ಲಿ ಹುಂಡಿ ಹಣ ಬರಿದಾಗಿ ತೀವ್ರ ಹಣಕಾಸು ಬಿಕ್ಕಟ್ಟು ಎದುರಾಗಿತ್ತು. ಸಿಬ್ಬಂದಿ ಸಂಬಳ ಹಾಗೂ ದೇಗುಲ ನಿರ್ವಹಣೆಗೆ ಆಸ್ತಿ ಮಾರಾಟ ಮಾಡಿ ಹಣ ಹೊಂದಿಸಲು ಟಿಟಿಡಿ ಮುಂದಾಗಿತ್ತು. ಈ ನಡುವೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಭಕ್ತರಿಂದಲೂ ಒತ್ತಡ ಹೆಚ್ಚಿತ್ತು. ಕೊನೆಗೂ ಭಕ್ತರ ಆಗ್ರಹಕ್ಕೆ ಮಣಿದಿರುವ ಸರಕಾರ, ತಿಮ್ಮಪ್ಪ ಪೂಜಾಕೈಂಕರ್ಯಗಳನ್ನು ಪುನರಾರಂಭಿಸಲು ಸಮ್ಮತಿಸಿದೆ.

ದರ್ಶನ ವೇಳೆ ಒಬ್ಬರಿಗೊಬ್ಬರು ಅಂಟಿಕೊಳ್ಳದಂತೆ ಅಂತರಕ್ಕೆ ಏರ್ಪಾಡು ಮಾಡಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ. ”ಈ ಬಾರಿ ಮೂರು ವರ್ಷಕ್ಕೆ ಒಮ್ಮೆ ಬರುವ 13 ತಿಂಗಳ ಅವಧಿಯ ವಿಶೇಷ ಅಧಿಕ ಮಾಸ ಬಂದಿದೆ. ಈ ಅವಧಿಯಲ್ಲಿ ಎರಡು ಬ್ರಹ್ಮರಥೋತ್ಸವಗಳು ನಡೆಯಲಿವೆ. ಪ್ರತಿಯೊಂದು 9 ದಿನಗಳ ಆಚರಣೆಯನ್ನು ಒಳಗೊಂಡಿರುತ್ತದೆ,” ಎಂದು ಸುಬ್ಬಾರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಳು