ಗೋ ಹತ್ಯೆ ನಿಷೇಧ: ಒಂದು ಕೋಟಿಗೂ ಅಧಿಕ ಕನ್ನಡಿಗರ ಸಹಿ, ಸಿಎಂಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ

ಗೋ ಹತ್ಯೆ ನಿಷೇಧ: ಒಂದು ಕೋಟಿಗೂ ಅಧಿಕ ಕನ್ನಡಿಗರ ಸಹಿ, ಸಿಎಂಗೆ ಹಕ್ಕೊತ್ತಾಯ ಪತ್ರ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧಿಸಿ ಭಾರತೀಯ ಗೋ ತಳಿಗಳ ಸಂವರ್ಧನೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಒಂದು ಕೋಟಿಗೂ ಅಧಿಕ ಕನ್ನಡಿಗರ ಸಹಿ ಸಂಗ್ರಹ ಮಾಡಿದ ಹಕ್ಕೊತ್ತಾಯ ಪತ್ರಗಳನ್ನು ಶ್ರೀರಾಮಚಂದ್ರಾಪುರ ಮಠದ ಸಂಚಾಲಿತ ಭಾರತೀಯ ಗೋ ಪರಿವಾರದಿಂದ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮಂಗಳವಾರ ಸಲ್ಲಿಸಲಾಯಿತು.

ಸೆ.21ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಸಂಪೂರ್ಣ ಗೋಹತ್ಯೆ ನಿಷೇಧ ಮಸೂದೆ ಆಂಗೀಕರಿಸಬೇಕು ಎಂದು ಶಂಕರಾಚಾರ್ಯ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಸೇರಿದಂತೆ ನಾಡಿನ 2000ಕ್ಕೂ ಹೆಚ್ಚು ಮಂದಿ ಸಂತರು, ಭಾರತೀಯ ಗೋ ಪರಿವಾರ ಒತ್ತಾಯಿಸಿತು. ಶ್ರೀಮಠದ ಶಾಸನತಂತ್ರ ಪದಾಧಿಕಾರಿಗಳು ಸ್ವರಕ್ತದಲ್ಲಿ ಬರೆದ ಹಕ್ಕೊತ್ತಾಯ ಪತ್ರಗಳನ್ನೂ ಸಿಎಂಗೆ ಸಲ್ಲಿಸಲಾಯಿತು.

ಪಕ್ಷ ಭೇದ, ಧರ್ಮ ಭೇದ ಮರೆತು ಹಲವು ಮಂದಿ ಜನಪ್ರತಿನಿಧಿಗಳು, ಮಠಾಧೀಶರು, ಸಾಹಿತಿಗಳು, ಹೋರಾಟಗಾರರು, ಗೋಪ್ರೇಮಿಗಳು, ಧರ್ಮಗುರುಗಳು ಪ್ರತ್ಯೇಕ ಹಕ್ಕೊತ್ತಾಯ ಪತ್ರಗಳಿಗೆ ಸಹಿ ಮಾಡಿದ್ದಾರೆ. ರಾಘವೇಶ್ವರ ಶ್ರೀಗಳ ನೇತೃತ್ವದಲ್ಲಿ ನಾಡಿನಾದ್ಯಂತ ಅಭಯಾಕ್ಷರ ಅಭಿಯಾನ ಮತ್ತು ಅಭಯ ಯಾತ್ರೆ ಕೈಗೊಂಡು ಒಂದು ಕೋಟಿಗೂ ಅಧಿಕ ಅಭಯಾಕ್ಷರಗಳನ್ನು ಸಂಗ್ರಹಿಸಲಾಗಿತ್ತು. ಸಿಎಂ ಮತ್ತು ಪಿಎಂಗಳಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೋಟಿ ಸಂಖ್ಯೆಯ ಹಕ್ಕೊತ್ತಾಯ ಪತ್ರಗಳನ್ನು ಸಲ್ಲಿಸಲಾಗಿತ್ತು.

ಅಭಯ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಹಿರಿಯ ಮುಖಂಡ ಡಾ.ಸುಬ್ರಮಣಿಯನ್‌ ಸ್ವಾಮಿ, ಕೋಟಿ ಕನ್ನಡಿಗರ ಹಕ್ಕೊತ್ತಾಯದ ಹಿನ್ನೆಲೆಯಲ್ಲಿ ಗೋಹತ್ಯೆ ನಿಷೇಧ ಕುರಿತ ಖಾಸಗಿ ಮಸೂದೆ ಮಂಡಿಸಿದರು. ಪಕ್ಷಬೇಧ ಮರೆತು ಇದಕ್ಕೆ ಬೆಂಬಲ ವ್ಯಕ್ತವಾದಾಗ, ಗೋಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಕೇಂದ್ರ ಸರಕಾರ, ಮಸೂದೆ ವಾಪಸು ಪಡೆಯುವಂತೆ ಸುಬ್ರಮಣಿಯನ್‌ ಸ್ವಾಮಿ ಮನವೊಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಳು