ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕು ಸ್ಥಾಪನೆ

ಡಾ.ವಿಷ್ಣುವರ್ಧನ್ ಸ್ಮಾರಕಕ್ಕೆ ಶಂಕು ಸ್ಥಾಪನೆ

ಮೈಸೂರು: ಇಂದು ದಿವಂಗತ ಡಾ.ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆನ್‍ಲೈನ್ ಮೂಲಕ ಚಾಲನೆ ನೀಡಿದ್ದಾರೆ.

ಸಿಎಂ ಯಡಿಯೂರಪ್ಪ ಅವರು ಮೈಸೂರಿನಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕಕ್ಕೆ ಗೃಹ ಕಚೇರಿ ಕೃಷ್ಣಾದಿಂದ ಸಚಿವರೊಟ್ಟಿಗೆ ಆನ್‍ಲೈನ್ ಮೂಲಕ ಭೂಮಿ ಪೂಜೆಗೆ ಚಾಲನೆ ಕೊಟ್ಟಿದ್ದಾರೆ. ಮೈಸೂರಿನ ಹಾಲಾಳು ಗ್ರಾಮದಲ್ಲಿ ಶಂಕು ಸ್ಥಾಪನೆಯ ಸಮಾರಂಭ ನಡೆದಿದ್ದು, ಹಿರಿಯ ನಟಿ ಭಾರತಿ ಅವರು ವಿಷ್ಣುವರ್ಧನ್ ಸ್ಮಾರಕ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಸಿಎಂ ಯಡಿಯೂರಪ್ಪ, ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಈಗಾಗಲೇ ತಡವಾಗಿದೆ. ಆದ್ದರಿಂದ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಡಾ.ವಿಷ್ಣುವರ್ಧನ್ ತವರು ಜಿಲ್ಲೆ ಮೈಸೂರಿನಲ್ಲಿ ಅವರ ಸ್ಮಾರಕ ನಿರ್ಮಾಣವಾಗುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.

ಮೈಸೂರು ತಾಲೂಕಿನ ಹೆಚ್.ಡಿ.ಕೋಟೆ ರಸ್ತೆಯ ಮಾರ್ಗದಲ್ಲಿ ಬರುವ ಹಾಲಾಳು ಗ್ರಾಮದ 5 ಎಕರೆ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುತ್ತದೆ. ಪೊಲೀಸ್ ವಸತಿಗೃಹ ನಿರ್ಮಾಣ ಸಂಸ್ಥೆಯ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸ್ಮಾರಕ ನಿರ್ಮಾಣಕ್ಕೆ ಈಗಾಗಲೇ 11 ಕೋಟಿ ರೂ. ಅನುದಾನ ಮಂಜೂರಾಗಿದೆ. ಕಾಮಗಾರಿ ಪ್ರಾರಂಭಿಸಲು ಸುಮಾರು 5 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಡಾ. ವಿಷ್ಣುವರ್ಧನ್ ಸ್ಮಾರಕವು ಸುಸಜ್ಜಿತವಾಗಿ ನಿರ್ಮಾಣಗೊಳ್ಳಲು ಎಲ್ಲ ರೀತಿಯ ಕ್ರಮಕೈಗೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ಡಾ.ವಿಷ್ಣುವರ್ಧನ್ ಸ್ಮಾರಕ ಭವನ 11 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸ್ಮಾರಕ ನಿರ್ಮಾಣದ ಗುತ್ತಿಗೆಯನ್ನು ಪೊಲೀಸ್ ವಸತಿ ನಿಗಮಕ್ಕೆ ನೀಡಲಾಗುತ್ತಿದೆ. ಎಂ-9 ಡಿಸೈನ್ ಸ್ಟುಡಿಯೋದಿಂದ ಆರ್ಕಿಟೆಕ್ ಡಿಸೈನ್ ಮಾಡಿಸಲಾಗಿದೆ. ಸ್ಮಾರಕದಲ್ಲಿ ವಿಷ್ಣು ಪುತ್ಥಳಿ, ಆಡಿಟೋರಿಯಂ, ಫೋಟೋ ಗ್ಯಾಲರಿ, ಉದ್ಯಾನವನ, ವಾಟರ್ ಪೌಂಡ್ ಇರುತ್ತದೆ.

ತಾಜಾ ಸುದ್ದಿಗಳು