80ರ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಟ್ರಕ್ ಡ್ರೈವರ್!

80ರ ವೃದ್ಧೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆಗೈದ ಟ್ರಕ್ ಡ್ರೈವರ್!

ಗಾಂಧಿನಗರ: ದೆಹಲಿಯಲ್ಲಿ ಇತ್ತೀಚೆಗಷ್ಟೇ 90 ವರ್ಷದ ವೃದ್ಧೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಮಾಸುವ ಮುನ್ನವೇ ಇದೀಗ ಗುಜರಾತ್‍ನ ರಾಜ್‍ಕೋಟ್ ಎಂಬಲ್ಲಿ ಇಂತದ್ದೇ ಘಟನೆ ನಡೆದಿದೆ.

ಹೌದು. 80 ವರ್ಷದ ವೃದ್ಧೆಯ ಮೇಲೆ 40 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಅಲ್ಲದೆ ವೃದ್ಧೆಯನ್ನು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಜಸರಾಜ್ ಮಾನೆಕ್ ಎಂದು ಗುರುತಿಸಲಾಗಿದೆ. ಈತ ರಾಜ್‍ಕೋಟ್ ನಲ್ಲಿ ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಈ ಘಟನೆ ದೇವಭೂಮಿ ದ್ವಾರಕಾದ ಓಖಾ ತಾಲೂಕಿನ ಸೂರಜ್ ಕರಾಡಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ರಾತ್ರಿ ವೃದ್ಧೆ ಸೂರಜ್ ಕರಡಿ ಬಸ್ಸು ನಿಲ್ದಾಣದಲ್ಲಿ ಬಸ್ಸಿಗಾಗಿ ಒಬ್ಬರೇ ಕಾಯುತ್ತಾ ಕುಳಿತಿದ್ದರು. ಇದೇ ಸಂದರ್ಭದಲ್ಲಿ ವೃದ್ಧೆ ಏಕಾಂಗಿಯಾಗಿ ಕುಳಿತಿರುವುದನ್ನು ಗಮನಿಸಿದ ಕಾಮುಕ ಆಕೆಯ ಬಳಿ ಬಂದು ಬಲವಂತ ಮಾಡಿದ್ದಾನೆ. ಇದರಿಂದ ಗಾಬರಿಗೊಂಡ ವೃದ್ಧೆ ಜೋರಾಗಿ ಕಿರುಚಿಕೊಂಡಿದ್ದಾರೆ. ವೃದ್ಧೆ ಕೂಗಿಕೊಂಡಿದ್ದರಿಂದ ಜನ ಜಮಾಯಿಸುತ್ತಾರೆ ಎಂದು ಕಾಮುಕ ಆಕೆಯ ಕುತಿಗೆಗೆ ಬಟ್ಟೆ ಸುತ್ತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಇತ್ತ ವೃದ್ಧೆಯ ಚೀರಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆರೋಪಿ ಅಲ್ಲಿಂದ ಕಾಲ್ಕಿತ್ತಲು ಪ್ರಯತ್ನಿಸಿದ್ದಾನೆ. ಕೂಡಲೇ ಆತನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಗಳವಾದರೆ ಮನೆಯಿಂದ ಹೊರ ಹೋಗುವ ಅಭ್ಯಾಸ ವೃದ್ಧೆಗೆ ಇತ್ತು ಎಂದು ತಿಳಿದುಬಂದಿದೆ. ವೃದ್ಧೆಯ ಮಗ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ ಬಳಿಕ ಆರೋಪಿ ಮಾನೆಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೋವಿಡ್ 19 ಪರೀಕ್ಷೆಯ ಬಳಿಕ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ದೆಹಲಿಯ ನಜಾಫ್‍ಗರ್ ಎಂಬಲ್ಲಿ 90 ವರ್ಷದ ಅಜ್ಜಿಯ ಮೇಲೆ ಸಾಮೂಹಿಕ ಅತ್ಯಾಚಾರವೆಗಿದ್ದಾರೆ. ತನ್ನ ಮೇಲೆ ನಡೆಯುತ್ತಿರುವ ಅತ್ಯಾಚಾರವನ್ನು ವಿರೋಧಿಸಿದಾಗ ಆಕೆಗೆ ಥಳಿಸಿ ಗಂಭೀರವಾಗಿ ಗಾಯಗೊಳಿಸಲಾಗಿತ್ತು.

ತಾಜಾ ಸುದ್ದಿಗಳು