ಸ್ಯಾಂಡಲ್’ವುಡ್ ಡ್ರಗ್ಸ್ ದಂಧೆ: ರಾಜ್ಯದಲ್ಲಿ ಮತ್ತಿಬ್ಬರು ಆರೋಪಿಗಳ ಬಂಧನ

ಸ್ಯಾಂಡಲ್’ವುಡ್ ಡ್ರಗ್ಸ್ ದಂಧೆ: ರಾಜ್ಯದಲ್ಲಿ ಮತ್ತಿಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಸ್ಯಾಂಡಲ್’ವುಡ್ ಡ್ರಗ್ಸ್ ನಂಟು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವಿರೇನ್ ಖನ್ನಾ ಸಹಚರ ಸೇರಿ ಮತ್ತಿಬ್ಬರನ್ನು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಮಂಗಳೂರಿನ ಪ್ರತೀಕ್ ಶೆಟ್ಟಿ ಹಾಗೂ ಹರಿಯಾಣ ಮೂಲಕ ಆದಿತ್ಯ ಅಗರ್ವಾಲ್ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿಕ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ತನಿಖಾ ತಂಡ ವಶಕ್ಕೆ ಪಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಎಂಜಿನಿಯರಿಂಗ್ ಪದವೀಧರನಾಗಿರುವ ಪ್ರತೀಕ್ ಮೂಲತಃ ಮಂಗಳೂರಿನವನಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿ ನಗರಕ್ಕೆ ಬಂದಿದ್ದ ಆರೋಪಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಸಾಫ್ಟ್’ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಮಾದಕ ವಸ್ತು ಸೇವನೆ ಚಟಕ್ಕೆ ಬಿದ್ದಿದ್ದ ಆರೋಪಿಗೆ ಆಫ್ರಿಕನ್ ಪ್ರಜೆಗಳು ನೇರವಾಗಿ ಸಂಪರ್ಕಕ್ಕೆ ಬಂದಿದ್ದರು.

ಮಾಸಿಕ ರೂ.1 ಲಕ್ಷ ವೇತನ ಬಿಟ್ಟು ಆರೋಪಿ ಸುಲಭವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತಾನೇ ಮಾದಕ ವಸ್ತು ಮಾರಾಟಕ್ಕೆ ಇಳಿದಿದ್ದ. ತನ್ನ ಜಾಲದ ನಂಟನ್ನು ದೊಡ್ಡದಾಗಿಸಿಕೊಂಡಿದ್ದ. ಕೊಕೋನ್, ಅಫೀಮು, ಗಾಂಜಾ, ಎಂಡಿಎಂ ಸೇರಿದಂತೆ ಎಲ್ಲಾ ರೀತಿಯ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ.

2018ರಲ್ಲಿ ಬೆಂಗಳೂರಿನ ಬಾಣಸವಾಡಿ ಪೊಲೀಸರಿಂದ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗಟ್ಟಿದ್ದರು. ಜೈಲಿನಿಂದ ಹೊರಬಂದ ಬಳಿಕವೂ ಆರೋಪಿ ತನ್ನ ದಂಧೆ ನಿಲ್ಲಿಸಿರಲಿಲ್ಲ ಎಂದು ತಿಳಿದುಬಂದಿದೆ.

ನಟಿ ರಾಗಿಣಿ ಜೊತೆ ನಿರಂತರ ಸಂಪರ್ಕ
ಪೇಜ್ ತ್ರಿ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ರಾಗಿಣಿಗೆ ಪ್ರತೀಕ್ ಶೆಟ್ಟಿ ಸಂಪರ್ಕಕ್ಕೆ ಬಂದಿದ್ದ. ಆರೋಪಿ ರವಿಶಂಕರ್ ಹಾಗೂ ರಾಗಿಣಿಗೆ ಆಪ್ತನಾಗಿದ್ದ. ಯಾವುದೇ ಪಾರ್ಟಿ ಆಯೋಜನೆಯಾದರೂ ಪ್ರತೀಕ್ ಶೆಟ್ಟಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ. ಸೆಲೆಬ್ರೆಟಿಗಳು, ಉದ್ಯಮಿಗಳು ಹಾಗೂ ಶ್ರೀಮಂತರ ಮಕ್ಕಳಿಗೆ ಡ್ರಗ್ಸ್ ಪೂರೈಸುತ್ತಿದ್ದ. ವೀರೇನ್ ಖನ್ನಾನ ಜೊತೆಗೂ ಹೆಚ್ಚಿನ ನಂಟು ಹೊಂದಿದ್ದಾನೆಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಇನ್ನು ಮತ್ತೊಬ್ಬ ಆರೋಪಿ ಡ್ರಗ್ಸ್ ಪಾರ್ಟಿ ಆಯೋಜನೆಯ ಕಿಂಗ್’ಪಿನ್ ವೀರೇನ್ ಖನ್ನಾ ಸಹಚರ ಆದಿತ್ಯ ಅಗರ್ ವಾಲ್ ಎಂಬಾತನನ್ನು ಹರಿಯಾಣದಲ್ಲಿ ಬಂಧಿಸಲಾಗಿದೆ. ವೀರೇನ್ ಖನ್ನಾ ಪಾರ್ಟಿಯಲ್ಲಿ ಆದಿತ್ಯ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ. ಆದಿತ್ಯ ಈವೆಂಟ್ ಮ್ಯಾನೇಜ್ ಮೆಂಟ್ ಸ್ವಂತ ಕಂಪನಿ ಹೊಂದಿದ್ದ. ಈತ ಕೂಡ ಸೆಲೆಬ್ರಿಟಿಗಳಿಗಾಗಿ ಪಾರ್ಟಿ ಆಯೋಜಿಸುತ್ತಿದ್ದ. ಅಲ್ಲದೆ, ಡ್ರಗ್ಸ್ ಪೆಡ್ಲರ್ ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ. ವಿಚಾರಣೆ ವೇಳೆ ಬಂಧಿತ ಆರೋಪಿಗಳು ಕೊಟ್ಟ ಮಾಹಿತಿ ಮೇರೆಗೆ ಆದಿತ್ಯನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳು