ಕನ್ನಡದ ಖ್ಯಾತ ನಟರು, ಸಂಗೀತ ನಿರ್ದೇಶಕರಿಗೆ ಡ್ರಗ್ ಡೀಲರ್ಸ್ ಜೊತೆ ನಂಟು

ಕನ್ನಡದ ಖ್ಯಾತ ನಟರು, ಸಂಗೀತ ನಿರ್ದೇಶಕರಿಗೆ ಡ್ರಗ್ ಡೀಲರ್ಸ್ ಜೊತೆ ನಂಟು

– ಬೆಂಗ್ಳೂರಿನಲ್ಲಿ ಲೇಡಿ ಡ್ರಗ್ ಪೆಡ್ಲರ್ಸ್ ಅರೆಸ್ಟ್
– ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ನವದೆಹಲಿ:
ಕರ್ನಾಟಕದ ಕೆಲ ಪ್ರಮುಖ ಸಂಗೀತ ನಿರ್ದೇಶಕರು ಮತ್ತು ನಟರಿಗೆ ಡ್ರಗ್ ಡೀಲರ್ ಜೊತೆ ನಂಟಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ನಾರ್ಕೋಟಿಕ್ಸ್ ಬ್ಯೂರೋ ತಿಳಿಸಿದೆ.

ಆಗಸ್ಟ್ 21ರಂದು ಬೆಂಗಳೂರಿನ ಕಲ್ಯಾಣ್ ನಗರ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್‍ನಿಂದ 145 ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು 2.20 ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಪಡಿಸಿಕೊಂಡಿದ್ದೇವೆ. ನಂತರ ಬೆಂಗಳೂರಿನ ನಿಕೂ ಹೌಸ್‍ನಲ್ಲಿ 96 ಎಂಡಿಎಂಎ ಮಾತ್ರೆಗಳು ಮತ್ತು 180 ಎಲ್‍ಎಸ್ಡಿ ಬ್ಲಾಟ್ಸ್ ಗಳನ್ನು ವಶಪಡಿಸಿಕೊಂಡಿದೆ ಎಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಉಪನಿರ್ದೇಶಕ ಕೆಪಿ ಎಸ್ ಮಲ್ಹೋತ್ರಾ ತಿಳಿಸಿದ್ದಾರೆ.

ಇದೇ ಕಾರ್ಯಚರಣೆಯ ಮುಂದುವರಿದ ಭಾಗವಾಗಿ, ಪ್ರಕರಣದ ಮುಖ್ಯ ಕಿಂಗ್‍ಪಿನ್ ಆಗಿದ್ದ ಲೇಡಿ ಡ್ರಗ್ ಡೀಲರ್ ಬಂಧನವಾಗಿದೆ. ಜೊತೆಗೆ ಬೆಂಗಳೂರಿನ ದೊಡ್ಡ ಗುಬ್ಬಿಯಲ್ಲಿರುವ ಆಕೆಯ ಮನೆಯಿಂದ ಎಂಡಿಎಂಎಯ 270 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ವೇಳೆ ಎಂ ಅನೂಪ್, ಆರ್ ರವೀಂದ್ರನ್ ಮತ್ತು ಅನಿಖಾ ಡಿ ಎಂಬ ಮೂವರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಬಂಧಿತ ಆರೋಪಿಗಳು ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರು, ನಟರು ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದಂತೆ ಸಮಾಜದ ಶ್ರೀಮಂತ ವರ್ಗಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬೆಂಗಳೂರು ಎನ್‍ಸಿಬಿ ಘಟಕದಿಂದ ಹೆಚ್ಚಿನ ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.

ಎನ್‍ಸಿಬಿ ಈ ತಿಂಗಳ ಆರಂಭದಲ್ಲಿ ಡ್ರಗ್ ಸಪ್ಲೇ ಮಾಡುತ್ತಿದ್ದ ಆರೋಪದ ಮೇಲೆ ಡೀಲರ್ ರಹಮಾನ್ ಕೆ ಅನ್ನು ಬಂಧಿಸಿತ್ತು. ಈತ ತನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ನೆರೆಹೊರೆಯವರಿಗೆ ಎಂಡಿಎಂಎ ಮತ್ತು ಇತರ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಅನ್‍ಲೈನ್‍ನಲ್ಲಿ ಬಿಟ್‍ಕಾಯಿನ್‍ಗಳ ವಿನಿಮಯದಿಂದ ಎಂಡಿಎಂಎ ಮಾತ್ರೆಗಳ ಖರೀದಿ ಮಾಡುತ್ತಿದ್ದು, ತನಿಖೆ ವೇಳೆ ತಿಳಿದು ಬಂದಿತ್ತು.

ತಾಜಾ ಸುದ್ದಿಗಳು