ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

ರಾಮ ಮಂದಿರ ಭೂಮಿಪೂಜೆ ಕಾರ್ಯಕ್ರಮ – ಮೂರು ಬಾರಿ ಮೊಳಗಿತು ಕರ್ನಾಟಕದ ಕಂಪು

ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಭೂಮಿ ಪೂಜೆಯ ವೇದಿಕೆಯ ಕಾರ್ಯಕ್ರಮದಲ್ಲಿ ಕರ್ನಾಟಕದ ಕಂಪು ಮೊಳಗಿದೆ.
ಮಧ್ಯಾಹ್ನ ಗರ್ಭಗುಡಿ ಇರುವ ಜಾಗದಲ್ಲಿ ಭೂಮಿ ಪೂಜೆ ನಡೆದ ಬಳಿಕ ವೇದಿಕೆಯ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮೂರು ಬಾರಿ ಕರ್ನಾಟಕ ಪ್ರಸ್ತಾಪವಾಯಿತು.

ವೇದಿಕೆಯಲ್ಲಿ ಬಟನ್‌ ಒತ್ತುವ ಮೂಲಕ ಮೋದಿ ಶಿಲಾಫಲಕವನ್ನು ಅನಾವರಣಗೊಳಿಸಿದರು. ಇದಾದ ಬಳಿಕ ಪ್ರಧಾನಿಯನ್ನು ಕೋದಂಡರಾಮನ ವಿಗ್ರಹವನ್ನು ನೀಡುವ ಮೂಲಕ ಗೌರವಿಸಲಾಯಿತು. ಈ ವೇಳೆ ನಿರೂಪಕರು ಕರ್ನಾಟಕದಿಂದ ಈ ವಿಗ್ರಹವನ್ನು ತರಲಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಕೆಂಗೇರಿಯ ನಾಗದೇವನಹಳ್ಳಿಯ ನಿವಾಸಿ ರಾಮಮೂರ್ತಿ ಅವರು ಈ ಮೂರ್ತಿಗಳನ್ನು ತಯಾರಿಸಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ರಮಕ್ಕೆ ಮುನ್ನ ಈ ಮೂರ್ತಿಗಳು ಉತ್ತರ ಪ್ರದೇಶಕ್ಕೆ ತಲುಪಿದ್ದವು. ಉತ್ತರ ಪ್ರದೇಶ ಸರ್ಕಾರದ ಬೇಡಿಕೆ ಮೇರೆಗೆ ಕೋದಂಡರಾಮನ ಪ್ರತಿಮೆಯನ್ನು ಮಾಡಲಾಗಿತ್ತು. ಜುಲೈ 31 ರಂದು ರಾಮ, ಲವ, ಕುಶ ಮೂರು ಮೂರ್ತಿಗಳು ರವಾನೆಯಾಗಿದ್ದವು. ಇಂದು ನಡೆದ ಕಾರ್ಯಕ್ರಮದಲ್ಲಿ ಗಣ್ಯರಿಗೆ ಉಡುಗೊರೆಯಾಗಿ ನೀಡಲಾಗಿದೆ.

ತೇಗದ ಮರದಿಂದ ರಾಮ ಮೂರ್ತಿಯನ್ನು ಮಾಡಲಾಗಿದೆ. ಕೋದಂಡರಾಮನ ಪ್ರತಿಮೆ ಮೂರು ಅಡಿ ಇದೆ. ಲವ-ಕುಶ ಒಂದೂವರೆ ಅಡಿ, ಮತ್ತೊಂದು ರಾಮನ ಮೂರ್ತಿ ಒಂದೂವರೆ ಅಡಿ ಇದೆ.

ಇದಾದ ಬಳಿಕ ಕರ್ನಾಟಕದ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ನನ್ನನ್ನು ಆಹ್ವಾನಿಸಿರುವುದು ನನ್ನ ಅದೃಷ್ಟ. ಕನ್ಯಾಕುಮರಿಯಿಂದ ಕ್ಷೀರಭವಾವನಿಯವರೆಗೆ, ಕೋಟೇಶ್ವರದಿಂದ ಕಾಮಾಖ್ಯದವರೆಗೆ, ಜಗನ್ನಾಥನಿಂದ ಕೇದಾರನಾಥದವರೆಗೆ, ಸೋಮನಾಥದವರೆಗೆ ಕಾಶಿ ವಿಶ್ವನಾಥ್, ಸಮ್ಮೇದ ಶಿಖರ್ಜಿಯಿಂದ ಶ್ರವಣಬೆಳಗೊಳದವರೆಗೆ …. ಇಂದು ಇಡೀ ದೇಶ, ವಿಶ್ವ ಭಗವಾನ್ ರಾಮನ ಘೋಷಣೆಯಲ್ಲಿ ಮುಳುಗಿದೆ ಎಂದು ಹೇಳಿದರು.

ನಂತರ ರಾಮಾಯಣದ, ರಾಮನ ವ್ಯಕ್ತಿತ್ವದ ಬಗ್ಗೆ ಮೋದಿ ಮಾತನಾಡಿದರು. ದೇಶದಲ್ಲಿ ಹಲವಾರು ಭಾಷೆಗಳಲ್ಲಿ ರಾಮಾಯಣ ಬರೆಯಲಾಗಿದೆ. ಈ ವೇಳೆ ಕರ್ನಾಟಕದ ನಾಗಚಂದ್ರ ಬರೆದ ಕುಮದೇಂದು ರಾಮಾಯಣದ ಬಗ್ಗೆ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪ ಮಾಡಿದರು.

ನಾಗಚಂದ್ರನಿಗೆ ಅಭಿನವ ಪಂಪ ಎಂಬ ಬಿರುದು ಇದೆ. ಇವನು ರಾಮಚಂದ್ರ ಚರಿತ ಪುರಾಣ ಮತ್ತು ಮಲ್ಲಿನಾಥ ಪುರಾಣ ಎಂಬ ಎರಡು ಚಂಪೂ ಕಾವ್ಯಗಳನ್ನು ರಚಿಸಿದ್ದಾನೆ. ರಾಮಚಂದ್ರ ಪುರಾಣಕ್ಕೆ ಪಂಪರಾಮಾಯಣವೆಂದೂ ಕರೆಯುತ್ತಾರೆ.

ತಾಜಾ ಸುದ್ದಿಗಳು