ಕೊಡಗಿನಲ್ಲಿ ಚುರುಕಾದ ತುಂತುರು ಮುಂಗಾರು ಮಳೆ

ಕೊಡಗಿನಲ್ಲಿ ಚುರುಕಾದ ತುಂತುರು ಮುಂಗಾರು ಮಳೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವಾರದಿಂದ ಬಿಡುವು ಕೊಟ್ಟಿದ್ದ ವರುಣ ಮತ್ತೆ ಚುರುಕಾಗಿದ್ದು, ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ತುಂತುರು ಮಳೆ ಆಗುತ್ತಿದೆ.

ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣವಿದ್ದು, ಸುರಿಯುತ್ತಿರುವ ಮಳೆಯಲ್ಲೇ ಜನರು ಕೊಡೆಗಳನ್ನು ಹಿಡಿದು ದೈನಂದಿನ ಕೆಲಸಗಳಿಗೆ ತೆರಳುತ್ತಿದ್ದಾರೆ. ಈಗಾಗಲೇ ಜೂನ್, ಜುಲೈ ತಿಂಗಳಲ್ಲಿ ವಾಡಿಕೆ ಪ್ರಮಾಣದ ಮಳೆ ಬಿದ್ದಿಲ್ಲ. ಆಗಸ್ಟ್ ತಿಂಗಳ ಪ್ರಾರಂಭದಲ್ಲಿ ಆರಂಭವಾಗಿರುವ ಆಶ್ಲೇಷ ಮಳೆ ಚುರುಕಾಗಿದೆ.

ವಿರಾಜಪೇಟೆ ವ್ಯಾಪ್ತಿ, ಬ್ರಹ್ಮಗಿರಿ ತಪ್ಪಲು, ಪುಷ್ಪಗಿರಿ, ಭಾಗಮಂಡಲ, ನಾಪೋಕ್ಲು ಸೇರಿದಂತೆ ಅನೇಕ ಕಡೆ ಮಳೆ ಬಿರುಸು ಪಡೆದುಕೊಂಡಿದೆ. ಅಲ್ಲದೇ ಭತ್ತದ ನಾಟಿ ಕೆಲಸಗಳು ಕೂಡ ಚುರುಕಾಗಿದೆ.

ಇಂದಿನಿಂದ ಲಾಕ್‍ಡೌನ್ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನಗಳ ಓಡಾಟವೂ ಜೋರಾಗಿತ್ತು. ಜಿಲ್ಲೆಯಲ್ಲಿ ಒಂದೆಡೆ ಶರವೇಗದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ ಮಳೆ ಪ್ರವಾಹವನ್ನು ಸೃಷ್ಟಿಸದಿರಲಿ ಎಂದು ಸ್ಥಳೀಯರು ಹೇಳಿದ್ದಾರೆ.

ತಾಜಾ ಸುದ್ದಿಗಳು