ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸರ್ಕಾರದ ಸಾಧನೆಯನ್ನು ಪ್ರಶಂಸಿಸಲು ಸಂಸದರ ಕೈಯಿಂದ ಚಪ್ಪಾಳೆ ಹೊಡೆಸಿದ ವಿಚಾರವನ್ನು ಸಿಎಂ ಯಡಿಯೂರಪ್ಪನವರು ಇಂದು ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ನಡೆದ ʼಸಾರ್ಥಕ ವರ್ಷ, ಸಮರ್ಥ ನಾಯಕʼ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತನಾಡಿದರು.

ಭಾಷಣದಲ್ಲಿ ಲೋಕಸಭಾ ಚುನಾವಣೆಯ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ, 28 ಲೋಕಸಭಾ ಕೇತ್ರದಲ್ಲಿ 25 ಕ್ಷೇತ್ರಗಳನ್ನು ನಾವು ಗೆಲ್ಲುವ ಮೂಲಕ ಪ್ರಧಾನಿ ಮೋದಿಯವರಿಗೆ ಕಾಣಿಕೆ ನೀಡಿದ್ದೇವೆ. ಕರ್ನಾಟಕದ ಜನ ನಮ್ಮನ್ನು ಆಶೀರ್ವಾದ ಮಾಡಿದ್ದಾರೆ. 25 ಕ್ಷೇತ್ರಗಳನ್ನು ಗೆದ್ದಿರುವುದು ದಾಖಲೆ. ಕಾರ್ಯಕರ್ತರು, ಶಾಸಕರು ಹಗಲಿರುಳು ದುಡಿದ ಪರಿಣಾಮದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದ ಸಾಧನೆಯ ಬಗ್ಗೆ ಮಾತನಾಡಿದ ಅವರು, 15 ಕ್ಷೇತ್ರಗಳ ಪೈಕಿ ನಾವು 12ರಲ್ಲಿ ಗೆದ್ದುಕೊಂಡಿದ್ದೇವೆ. ದೆಹಲಿಯಲ್ಲಿ ಪ್ರಧಾನಿ ಮೋದಿ ವಾರಕ್ಕೊಮ್ಮೆ ಸಂಸದರ ಸಭೆ ಕರೆಯುತ್ತಾರೆ. ಈ ಸಭೆಯಲ್ಲಿ ಎಲ್ಲ ಸಂಸದರನ್ನು ಎದ್ದು ನಿಲ್ಲಿಸಿ ಚಪ್ಪಾಳೆ ಹೊಡೆಸಿದ್ದಾರೆ. ಇದು ನಮಗೆ ಸಿಕ್ಕಿದ ದೊಡ್ಡ ಗೌರವವಾಗಿದ್ದು ಹೆಮ್ಮೆಯ ಸಂಗತಿ ಎಂದರು.

ಕರ್ನಾಟಕ ಜನರ ಆಶೀರ್ವಾದ ನಮಗೆ ಸಿಕ್ಕಿದ್ದರೂ ನಾವು ಮಾಡಬೇಕಾದ ಕೆಲಸ ಬಹಳಷ್ಟಿದೆ. ನನಗೆ ಕಣ್ಣೀರು ಬರುತ್ತಿದ್ದು ಕೋವಿಡ್‌ ಕಾಡದೇ ಇದ್ದರೆ ರಾಜ್ಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದಾಗಿತ್ತು. ಅಧಿಕಾರಕ್ಕೆ ಬಂದಾಗ ಪ್ರವಾಹ ಬಂತು. ಆದರೆ ಈ ವರ್ಷ ಭಗವಂತನ ದಯದಿಂದ ಉತ್ತಮ ಮಳೆ ಆಗಿದ್ದು ಜಲಾಶಯಗಳು ಭರ್ತಿಯಾಗುತ್ತಿದೆ. ಬಾಕಿ ಇರುವ ಮೂರು ವರ್ಷದ ಅವಧಿಯಲ್ಲಿ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಸಿಎಂ ಈ ವೇಳೆ ಭರವಸೆಯ ಮಾತನ್ನು ಆಡಿದರು.

ತಾಜಾ ಸುದ್ದಿಗಳು