ವಿಜ್ಞಾನ ಇಂಡಸ್ಟ್ರೀಸ್ ಕಾಲಾಂತ್ಯ: ಕಾರ್ಮಿಕರ ಬದುಕು ಅತಂತ್ರ

ವಿಜ್ಞಾನ ಇಂಡಸ್ಟ್ರೀಸ್ ಕಾಲಾಂತ್ಯ: ಕಾರ್ಮಿಕರ ಬದುಕು ಅತಂತ್ರ

< ತರೀಕೆರೆ: 57 ವರ್ಷಗಳ ಕಾಲ ಸೇವೆ ಸಲ್ಲಿಸಿ, ನೂರಾರು ಜನರ ಬದುಕು ರೂಪಿಸಿರುವ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಅಂತ್ಯವಾಗುವ ಕಾಲ ಸನ್ನಿಹಿತವಾಗಿದ್ದು, ಬೆಮೆಲ್ ನಿರ್ಲಕ್ಷವೇ ಕಂಪನಿಯ ಅವನತಿಗೆ ಕಾರಣ ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಸತತವಾಗಿ ಕಂಪನಿ ನಷ್ಟ ಹೊಂದುತ್ತಿರುವ ಕಾರಣವನ್ನು ರಕ್ಷಣಾ ಸಚಿವಾಲಯಕ್ಕೆ ಪತ್ರವ್ಯವಹಾರದ ಮೂಲಕ ಬಿಇಎಮ್‍ಎಲ್(ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್) ತಿಳಿಸಿದ್ದು, ಈ ಹಿನ್ನಲೆಯಲ್ಲಿ ಜು.7 ಡಿಪಿಎ ಮಾರ್ಗಸೂಚಿಯಂತೆ ಕಂಪನಿಯನ್ನು ಮುಚ್ಚುವಂತೆ ಆದೇಶ ನೀಡಿತ್ತು. ಜು.8 ರಂದು ಬೆಮೆಲ್ ಆಡಳಿತ ಮಂಡಳಿಯ ಜೊತೆ ಚರ್ಚಿಸಿ ಕಂಪನಿ ಮುಚ್ಚಲು ತೀರ್ಮಾನಿಸಿದೆ, ಈ ಸಂಬಂಧ ಕಂಪನಿಯ ವಿವಿಧ ವಿಭಾಗಗಳಿಗೆ ಕಂಪನಿಯನ್ನು ಮುಚ್ಚಲಾಗುವುದು ಎಂದು ಪತ್ರ ರವಾನಿಸಿದೆ. ಇದು ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.
1963ರಲ್ಲಿ ಭದ್ರಾವತಿಯ ವಿಐಎಸ್‍ಎಲ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ದುಗ್ಗಪ್ಪ, ಸೋಮಶೇಖರಪ್ಪ ಎಂಬುವರು ತಾವು ಸೇರಿದಂತೆ ಸಾರ್ವಜನಿಕರ ಬಳಿ ಹಣ ಹೂಡಿಕೆ ಮಾಡಿಸಿ ಕಂಪನಿಯನ್ನು ಪ್ರಾರಂಭ ಮಾಡಿದ್ದರು. ಇದು ಮುಂದೆ 1966 ರಲ್ಲಿ ವಿಜ್ಞಾನ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯಾಗಿ ರೂಪಗೊಂಡಿತು.
* ಬಿಇಎಮ್‍ಎಲ್‍ಗೆ ಹಸ್ತಾಂತರ
ವಿಐಎಲ್‍ನಲ್ಲಿ ಸ್ಟೀಲ್ ಸ್ಕ್ಯಾಚಿಂಗ್ಸ್, ರೈಲು ತಯಾರಿಕೆಗೆ ಬೇಕಾಗುವ ಬಿಡಿ ಉಪಕರಣಗಳು ಹಾಗೂ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಉಪಕರಣಗಳನ್ನು ತಯಾರು ಮಡಲಾಗುತ್ತಿತ್ತು. 1974ರಲ್ಲಿ ಕಂಪನಿ ನಷ್ಟ ಹೊಂದಿತು. ಈ ವೇಳೆ ಕಾರ್ಮಿಕರ ಹಿತದೃಷ್ಟಿಯಿಂದ 1975 ರಲ್ಲಿ ರಾಜ್ಯ ಸರ್ಕಾರ ಕಂಪನಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತು. ಇದಾದ ಬಳಿಕ ಸರ್ಕಾರ ಬಿಇಎಮ್‍ಎಲ್‍ಗೆ ಹಸ್ತಾಂತರ ಮಾಡಿತು.
1975ರಲ್ಲಿ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿ ಬಿಇಎಮ್‍ಎಲ್, ವಿಐಎಲ್ ನಲ್ಲಿ ಆಡಳಿತ ನೆಡೆಸುತ್ತಿತ್ತು. 1984ರಲ್ಲಿ ಸರ್ಕಾರ ತನ್ನ60 ಷೇರುಗಳನ್ನು ಬಿಇಎಮ್‍ಎಲ್ ಹಸ್ತಾಂತರ ಮಾಡಿ, ಕೇಂದ್ರ ಸರ್ಕಾರದ ಅಧೀನಕ್ಕೆ ಬಿಟ್ಟುಕೊಟ್ಟಿತು.
1992 ರಲ್ಲಿ ಕಂಪನಿ ಮತ್ತೆ ನಷ್ಟ ಹೊಂದಿದ ಪರಿಣಾಮ ಬೆಮೆಲ್ ಕಂಪನಿಯಲ್ಲಿ ಹೊಸ ಉಪಕರಣಗಳನ್ನು ಅಳವಡಿಸಿ ಪುನರ್‍ನಿರ್ಮಾಣಕ್ಕೆ ಅವಕಾಶ ಕೋರಿ ಬಿಐಐಎಫ್‍ಆರ್ ಗೆ ಮನವಿ ಸಲ್ಲಿಸಿತ್ತು. ಈ ವೇಳೆ ಬಿಐಐಎಫ್‍ಆರ್, ಐಡಿಬಿಐ ಗೆ ಕಂಪನಿಯ ಪರಿಸ್ಥಿತಿಯನ್ನು ತನಿಖೆ ಮಾಡಲು ಸೂಚಿಸಿತ್ತು. ತನಿಖೆ ನಡೆಸಿದ ಐಡಿಬಿಐ, ಬೆಮೆಲ್ ಆಡಳಿತ ಮಂಡಳಿ ಕಂಪನಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ವರದಿ ಸಲ್ಲಿಸಿತ್ತು. ಅಲ್ಲದೇ ಕಂಪನಿಯನ್ನು ತನ್ನ ಅಧೀನಕ್ಕೆ ಸೇರಿಸಿಕೊಳ್ಳಲು ಆದೇಶಿಸಿತ್ತು.
ಬಳಿಕ ಕರ್ನಲ್ ಪ್ರಭಾಕರ್ ವಿಐಎಲ್‍ಗೆ ಆಡಳಿತಾಧಿಕಾರಿಯಾಗಿ ಬಂದ ಬಳಿಕ ವಿಐಎಲ್‍ನ್ನು ನಷ್ಟದಿಂದ ಮೇಲಕ್ಕೆ ಎತ್ತಿ ಆದಾಯ ತರುವ ಕಂಪನಿಯಾಗಿ ರೂಪಿಸಿದರು. 2008_09 ರಲ್ಲಿ ಕಂಪನಿಗೆ 2.93 ಕೋಟಿ ಆದಾಯ ಬಂದಿತ್ತು. ಇದಾದ ಬಳಿಕ 2003 ರಲ್ಲಿ ಬಿಎಫ್‍ಆರ್ ಇದು ರೋಗಗ್ರಸ್ಥ ಕಂಪನಿ ಅಲ್ಲ ಎಂದು ಘೋಷಿಸಿತ್ತು.

* ವಿಎಸ್‍ಲ್ ಮೇಲೆ ಸಾಲ
2009ರಲ್ಲಿ ಬಿಇಎಮ್‍ಎಲ್ ವಿಐಎಲ್ ಮೇಲೆ 12 ಕೋಟಿ ಸಾಲ ಪಡೆದು ಕಂಪನಿಯನ್ನು ಉನ್ನತೀಕರಣಗೊಳಿಸಲು ಮುಂದಾಗಿತ್ತು. ಈ ವೇಳೆ ಕಂಪನಿಗೆ ಹೊಸ ಉಪಕರಣಗಳ ಅಳವಡಿಕೆ ಮಾಡಿತು. ಆ ಉಪಕರಣಗಳು ವಿಐಎಲ್ ಗೆ ಹೊಂದಾಣಿಕೆ ಆಗುವುದಿಲ್ಲ ಎಂದು ಕಾರ್ಮಿಕ ಸಂಘಟನೆ ಕಿವಿಮಾತು ಹೇಳಿದರು, ಬೆಮೆಲ್ ಆಡಳಿತ ಮಂಡಳಿ ಕಾರ್ಮಿಕರ ಮಾತನ್ನು ಗಾಳಿಗೆ ತೂರಿತ್ತು. ಇದು ಕಂಪನಿ ಮತ್ತಷ್ಟು ಆರ್ಥಿಕ ಕುಸಿತ ಅನುಭವಿಸಲು ಕಾರಣವಾಯಿತು. ಈ ಬಗ್ಗೆ ಆಗಿನ ಸಂಸದರಾಗಿದ್ದ ಜಯಪ್ರಕಾಶ್ ಹೆಗ್ಡೆ ತನಿಖೆ ನಡೆಸುವಂತೆ ಕೇಂದ್ರಕ್ಕೆ ಆಗ್ರಹಿಸಿದ್ದರು, ಸರ್ಕಾರ ಈ ಬಗ್ಗೆ ಗಮನಹರಿಸದಿರಿವುದು ಅವನತಿಗೆ ಕಾರಣವಾಯಿತು.
* ಕಾರ್ಮಿಕರಲ್ಲಿ ಅಭದ್ರತೆ
ಬಯಲು ಸೀಮೆ ತರೀಕೆರೆಯಲ್ಲಿ ವಿಐಎಲ್ ಪ್ರಾರಂಭವಾದಗ ಜನರು ಹರ್ಷಗೊಂಡಿದ್ದರು. ಈ ಕಂಪನಿ ಅದೆಷ್ಟೋ ಜನರಿಗೆ ಆಸರೆಯಾಗಿತ್ತು. ಇನ್ನು ಬಹಳಷ್ಟು ಮಂದಿ ಕಂಪನಿಯ ಸಂಬಳದಿಂದಲೇ ಜೀವನ ನಡೆಸುತ್ತಿದ್ದರು. ಅದ್ರಲ್ಲೂ ಕೈಗಾರಿಕೆಗೆ ಸಂಬಂಧಪಟ್ಟ ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಮಾಡಿದ ಬಡ ವಿದ್ಯಾರ್ಥಿಗಳಿಗೆ ಕಂಪನಿ ಆಶ್ರಯದಾತನಾಗಿತ್ತು. ಕಂಪನಿ ಪ್ರಾರಂಭದಲ್ಲಿ ಸಾವಿರಾರು ಜನಕ್ಕೆ ಉದ್ಯೋಗ ಕಲ್ಪಿಸಿತ್ತು. ಆದರೆ ದಿನಕಳೆದಂತೆ ಬೆಮೆಲ್ ಸರಿಯಾಗಿ ನಿರ್ವಹಣೆ ಮಾಡದಿದ್ದ ಕಾರಣ ಕೆಲಸಗಾರರು ಕಡಿಮೆಯಾಗಿದ್ದರು. ಸದ್ಯ ಕಂಪನಿಯಲ್ಲಿ 60 ಕಾಯಂ ನೌಕಕರು, 12 ಐಟಿಐ ಟ್ರೈನಿಗಳು, 10 ಜನ ಆಡಳಿತ ಸಿಬ್ಬಂದಿಗಳು, 150 ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದು ಈಗ ಕಂಪನಿ ಮುಚ್ಚುತ್ತಿರುವುದು ಇವರೆಲ್ಲರ ಆತಂಕಕ್ಕೆ ಕಾರಣವಾಗಿದೆ.
* ಉತ್ಪಾದನೆ ಕುಸಿತ
ಕಂಪನಿ ಪ್ರಾರಂಭದಲ್ಲಿ ತಿಂಗಳಿಗೆ 4.5 ಟನ್ ಉತ್ಪಾದನೆ ಮಾಡುತ್ತಿತ್ತು. ಆದರೆ ಈಗ 1.1 ಟನ್‍ಗೆ ಕುಸಿದಿದೆ. ಉಪಕರಣಗಳು ಸಣ್ಣ ಸಮಸ್ಯೆಯಿಂದ ಅಥವಾ ಯಂತ್ರದೋಷದಿಂದ ಕಾರ್ಯ ನಿಲ್ಲಿಸಿದರೆ ಅದಕ್ಕೆ ಪೂರಕವಾಗುವ ಬಿಡಿಭಾಗಗಳನ್ನು ಸೂಕ್ತ ಸಮಯಕ್ಕೆ ನೀಡುತ್ತಿರಲಿಲ್ಲ. ಯಂತ್ರದ ಉಪಕರಣ ತರಿಸಲಿ ವಾರಗಳು ಬೇಕಾಗುತ್ತದೆ ಈ ರೀತಿಯ ಸಣ್ಣ ಸಮಸ್ಯೆಗಳಿಂದ ಉತ್ಪಾದನೆ ಕುಂಠಿತಗೊಂಡಿದೆ.
ಬಿಇಎಮ್‍ಎಲ್‍ನ ನಿರ್ಲಕ್ಷ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷದಿಂದ ಮಲೆನಾಡು ಚಿಕ್ಕಮಗಳೂರಿನಲ್ಲಿದ್ದ ಏಕೈಕ ಕಂಪನಿ ಮುಚ್ಚುವಂತಾಗಿದೆ. ಇದರಿಂದ ಕಾರ್ಮಿಕರು ಸೇರಿದಂತೆ ಕಂಪನಿಯನ್ನು ನೆಚ್ಚಿಕೊಂಡು ಬದುಕು ನಡೆಸುತ್ತಿದ್ದ ನೂರಾರು ಕುಟುಂಬಗಳ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ.
********
ಕಂಪನಿಯನ್ನು ಮುಚ್ಚುವುದರಿಂದ ಕಾರ್ಮಿಕರು ಸೇರಿದಂತೆ, ಕಂಪನಿಯನ್ನು ನೆಚ್ಚಿಕೊಂಡು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಕಾರ್ಯ ನಿರ್ವಹಿಸುತ್ತಿರುವ ಪೆಟ್ಲರ್ಸ್‍ಗಳ ಬದುಕು ಬೀದಿಗೆ ಬರುತ್ತದೆ. ಕಂಪನಿಯಲ್ಲಿ 30-40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಖಾಯಂ ನೌಕರರ ಕುಟುಂಬಗಳು ಸೇರಿದಂತೆ ಗುತ್ತಿಗೆ ಕೆಲಸಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಈಗಾಗಿ ಸರ್ಕಾರ ಈ ಬಗ್ಗೆ ಸೂಕ್ತ ಗಮನ ಹರಿಸಬೇಕು. ಅಲ್ಲದೇ ಖಾಯಂ ನೌಕರರನ್ನು ಬೆಂಗಳೂರು ಬಿಇಎಮ್‍ಎಲ್ ಗೆ ವರ್ಗಾವಣೆ ಮಾಡಬೇಕು.
ಜಿ.ಎಸ್.ಸತ್ಯನಾರಾಯಣ್,
ಕಾರ್ಯದರ್ಶಿ ವಿಜ್ಞಾನ್ ಇಂಡಸ್ಟ್ರೀಸ್ ಮಜ್ದುರ್ ಸಂಘ
************
ರ್ಕಾರದ ಆದೇಶದ ಮೇರೆಗೆ ಬೆಮೆಲ್ ಅಧೀನದಲ್ಲಿರುವ ಎಲ್ಲಾ ಕಂಪನಿಗಳನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಐಎಲ್ ಸಹ ಸ್ಥಗಿತಗೊಳಿಸಲು ಆದೇಶ ಬಂದಿದೆ. ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಲು ಚಿಂತಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಿಇಎಮ್‍ಎಲ್ ಸಹ ಖಾಸಗಿ ಹೊಡೆತನಕ್ಕೆ ಸೇರಿಸುವ ಸಾಧ್ಯತೆ ಇದೆ.
ರಾಜಶೇಖರನ್,
ವಿಐಎಲ್, ಆಡಳಿತಾಧಿಕಾರಿ.

********
ವರದಿ-ಚೇತನ್ ಬೇಲೇನಹಳ್ಳಿ

ತಾಜಾ ಸುದ್ದಿಗಳು