ಚಿಕ್ಕಮಗಳೂರು – ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ

ಚಿಕ್ಕಮಗಳೂರು – ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ

ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಎನ್‍ಜಿಓ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನ ಮಧ್ಯೆ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಈ ಕ್ಯಾಮರಾಗಳು ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದೊಂದು ವಾರದಿಂದ ಚುರ್ಚೆಗುಡ್ಡದ ಶ್ರೀಗಂಧದ ರಸ್ತೆ ಮಾರ್ಗದ ಒಂದೆರಡು ಕಿ.ಮೀ. ದೂರದಲ್ಲಿ ಕಾಡು ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವ ನೀರುಗುಂಡಿಯ ಬಳಿಯ ಮರಕ್ಕೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಕ್ಯಾಮೆರಾವನ್ನು ಯಾರೂ ತೆಗೆದುಕೊಂಡು ಹೋಗದಂತೆ ಕಬ್ಬಿಣದ ಸರಪಳಿಯಿಂದ ಲಾಕ್ ಮಾಡಲಾಗಿದೆ. ಅರಣ್ಯದಲ್ಲಿ ಕ್ಯಾಮೆರಾಗಳನ್ನು ಗಮನಿಸಿದ ಸ್ಥಳೀಯರು, ಅರಣ್ಯ ಅಧಿಕಾರಿಗಳು ಇಟ್ಟಿರಬೇಕೆಂದು ಸುಮ್ಮನಿದ್ದರು. ಆದರೆ ಸ್ಥಳೀಯ ಎನ್‍ಜಿಓಗಳಲ್ಲಿ ಕೆಲಸ ಮಾಡುವವರು ಈ ಟ್ರ್ಯಾಪಿಂಗ್ ಕ್ಯಾಮೆರಾ ಗಮನಿಸಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳನ್ನು ವಿಚಾರಿಸಿದಾಗ ಇಲಾಖೆಯಿಂದ ಯಾವುದೇ ಕ್ಯಾಮೆರಾ ಅಳವಡಿಸದಿರುವುದು ತಿಳಿದಿದೆ.

ಸಾವಿರಾರು ಎಕರೆಯ ಚುರ್ಚೆಗುಡ್ಡ ಅರಣ್ಯದಲ್ಲಿ ಚಿರತೆ, ಹುಲಿ, ನರಿ, ಆನೆ, ಕರಡಿ ಸೇರಿದಂತೆ ಅಮೂಲ್ಯವಾದ ಶ್ರೀಗಂಧದ ಮರಗಳಿವೆ. ಈ ಪ್ರದೇಶವನ್ನು ಕಾಡುಗಳ್ಳರಿಂದ ರಕ್ಷಿಸಲು ಅರಣ್ಯ ರಕ್ಷಕರು ಹದ್ದಿನ ಕಣ್ಣಿದ್ದಾರೆ. ಆದರೂ ಇಲ್ಲಿ ಕ್ಯಾಮೆರಾ ಅಳವಡಿಸಿ ಹಲವು ದಿನ ಕಳೆದರೂ ಇಲಾಖೆ ಸಿಬ್ಬಂದಿಗೆ ಗೊತ್ತಾಗದಿರುವುದು ಅನುಮಾನ ಮೂಡಿಸಿದೆ. ಅಕ್ರಮವಾಗಿ ಮೀಸಲು ಅರಣ್ಯದಲ್ಲಿ ಕ್ಯಾಮೆರಾ ಅಳವಡಿಸಿರುವ ಬಗ್ಗೆ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಸ್ಥಳದಿಂದ ಕ್ಯಾಮೆರಾ ನಾಪತ್ತೆಯಾಗಿದೆ.

ತಾಜಾ ಸುದ್ದಿಗಳು