ಧಾರ್ಮಿಕ ಸ್ಥಳಗಳಿಗೆ ಪ್ರವೇಶ: ಮಾರ್ಗಸೂಚನೆ ಪರಿಷ್ಕರಿಸುವಂತೆ ಕೇಂದ್ರಕ್ಕೆ ಹೈ ಕೋರ್ಟ್ ನಿರ್ದೇಶನ

ಧಾರ್ಮಿಕ ಸ್ಥಳಗಳಿಗೆ ಪ್ರವೇಶ: ಮಾರ್ಗಸೂಚನೆ ಪರಿಷ್ಕರಿಸುವಂತೆ ಕೇಂದ್ರಕ್ಕೆ ಹೈ ಕೋರ್ಟ್ ನಿರ್ದೇಶನ

ಬೆಂಗಳೂರು: ಕೋವಿಡ್-19 ಸೋಂಕಿತ ಅಥವಾ ಶಂಕಿತರು ಧಾರ್ಮಿಕ ಸ್ಥಳ, ಮಾಲ್ ಗಳು ಮತ್ತು ರೆಸ್ಟೋರೆಂಟ್ ಪ್ರವೇಶದ ಬಗ್ಗೆ ಮಾರ್ಗಸೂಚನೆಯನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳಿಗೆ ಸೂಚನೆ ನೀಡುವಂತೆ ನಗರ ಮೂಲದ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿದ ಅರ್ಜಿ ವಿಚಾರಣೆ ವೇಳೆಯಲ್ಲಿ ಮುಖ್ಯ ನ್ಯಾಯಾಧೀಶ ಅಭಯ್ ಶ್ರೀನಿವಾಸ್ ಒಕಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ಆದೇಶವನ್ನು ನೀಡಿದೆ.

ವಿಪತ್ತು ನಿರ್ವಹಣಾ ಕಾಯ್ದೆಯಡಿ ನಿಯಮಗಳ ಉಲ್ಲಂಘನೆಯನ್ನು ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಪೀಠ, ಮಾರ್ಗಸೂಚಿ ಪಟ್ಟಿಯಲ್ಲಿ ಕಠಿಣ ಕ್ರಮಗಳಿವೆ, ಆದರೆ ಉಲ್ಲಂಘಿಸುವವರಿಗೆ ದಂಡ ವಿಧಿಸಬಹುದಾ ಅಥವಾ ಎಸ್‌ಒಪಿಗೆ ಕಾನೂನು ಬಲವಿದೆಯೇ ಎಂದು ನ್ಯಾಯಪೀಠ ಕೇಳಿತು.

ಮದುವೆ, ಅಂತ್ಯಸಂಸ್ಕಾರದಲ್ಲಿ ಇಂತಿಷ್ಟೇ ಜನ ಪಾಲ್ಗೊಳ್ಳುವಂತೆ ನಿರ್ಬಂಧ ಹೇರಿರುವಂತೆ ದೇವಾಲಯಗಳಿಗೆ ತೆರಳುವ ಭಕ್ತಾಧಿಗಳ ಸಂಖ್ಯೆಯಲ್ಲಿ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಕೋವಿಡ್-19 ಸೋಂಕಿತ ಅಥವಾ ದೃಢಪಟ್ಟ ವ್ಯಕ್ತಿ ದೇವಾಲಯ ಆವರಣ ಪ್ರವೇಶಿಸಬಹುದೇ ಎಂಬುದರ ಬಗ್ಗೆ ಮಾರ್ಗಸೂಚನೆಯಲ್ಲಿ ಸಲಹೆ ನೀಡಬೇಕಾಗಿದೆ. ಕೇಂದ್ರ ಸರ್ಕಾರ ಈ ಅಂಶದ ಬಗ್ಗೆ ಮರು ಪರಿಶೀಲಿಸಬೇಕೆಂದು ನ್ಯಾಯಪೀಠ ಹೇಳಿದೆ.

ಈ ಮಧ್ಯೆ ಮಾರ್ಗಸೂಚಿಗಳ ಅನುಷ್ಠಾನ ಬಗ್ಗೆ ರಾಜ್ಯಸರ್ಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ದೇವಾಲಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸೋಂಕು ಹೆಚ್ಚಾಗಿ ಹರಡುವಿಕೆಗೆ ಕಾರಣವಾಗಲಿದೆ. ಜೂನ್ 8ರಿಂದ ರೆಸ್ಟೋರೆಂಟ್ ಗಳು, ದೇವಾಲಯಗಳು, ಮಾಲ್ ಗಳು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಈ ವಿಚಾರದ ಬಗ್ಗೆ ತುರ್ತಾಗಿ ಗಮನ ಹರಿಸಬೇಕಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಇದೇ ವೇಳೆ ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಮೃತಪಟ್ಟ ಸಂದರ್ಭದಲ್ಲಿ ಸಾಮಾಜಿಕ ಅಂತರ ಮತ್ತು ನಿಯಮಗಳ ಉಲ್ಲಂಘನೆ ಬಗ್ಗೆ ಅರ್ಜಿದಾರರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಈ ಸಂಬಂಧ ಮನವಿ ಸಲ್ಲಿಸುವಂತೆ ತಿಳಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜೂನ್ 16ಕ್ಕೆ ಮುಂದೂಡಿತು.

ತಾಜಾ ಸುದ್ದಿಗಳು