ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ: ಕೇಜ್ರಿವಾಲ್ ಸೇರಿದಂತೆ ಗಣ್ಯರ ಸಂತಾಪ

ಬಾಲಿವುಡ್ ನಟ ಇರ್ಫಾನ್ ಖಾನ್ ಇನ್ನಿಲ್ಲ: ಕೇಜ್ರಿವಾಲ್ ಸೇರಿದಂತೆ ಗಣ್ಯರ ಸಂತಾಪ

ಮುಂಬಯಿ: ಟ್ಯೂಮರ್ ನಿಂದಾಗಿ ಬಳಲುತ್ತಿದ್ದ ಬಾಲಿವುಡ್ ನಟ ಇರ್ಫಾನ್ ಖಾನ್ ಮುಂಬೈನ ಧೀರುಬಾಯಿ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.

ಕಳೆದ ವಾರವಷ್ಟೇ ಅವರ ತಾಯಿ ನಿಧನರಾಗಿದ್ದರು. ಲಾಕ್ ಡೌನ್ ನಿಂದಾಗಿ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿರಲಿಲ್ಲ. ಈ ಬಳಿಕ ಅನಾರೋಗ್ಯದಿಂದಾಗಿ ತಾವು ಕೂಡ ಮುಂಬೈನ ಕೋಕಿಲಾಬೆನ್ ಧೀರುಬಾಯಿ ಅಂಬಾನಿ ಆಸ್ಪತ್ರೆಗೆ ಕಳೆದ ಎರಡು ದಿನಗಳ ಹಿಂದೆ ದಾಖಲಾಗಿದ್ದರು.

54 ವರ್ಷದ ಇರ್ಫಾನ್ ಖಾನ್ ಕಳೆದ ಕೆಲ ವರ್ಷಗಳಿಂದ ನ್ಯೂರೋಎಂಡೋಕ್ರೈನ್ ಟ್ಯೂಮರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅವರು 2018 ರಲ್ಲಿ ಲಂಡನ್ ನಲ್ಲಿ ಟ್ಯೂಮರ್ ಗೆ ಚಿಕಿತ್ಸೆ ಪಡೆದಿದ್ದರು. ಇರ್ಫಾನ್ ಖಾನ್ ಆರೋಗ್ಯ ಗಂಭೀರವಾದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಟನನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.


ಅವರು ಇತ್ತೀಚೆಗಷ್ಟೇ ಅಂಗ್ರೇಜಿ ಮೀಡಿಯಾಂ ಸಿನಿಮಾದಲ್ಲಿ ನಟಿಸಿದ್ದರು.

ನನ್ನ ಆತ್ಮೀಯ ಮಿತ್ರ ಇರ್ಫಾನ್ ಖಾನ್ ವಿಧಿವಶರಾಗಿದ್ದು ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನೀಡಲಿ ಎಂದು ಶೂಜಿತ್ ಸರ್ಕಾರ್ ಟ್ವೀಟ್ ಮಾಡಿದ್ದಾರೆ.


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇರ್ಫಾನ್ ಖಾನ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಅವರ ನಿಧನ ನಮಗೆ ಆಘಾತವನ್ನುಂಟು ಮಾಡಿದೆ, ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳು