ಕೊರೊನಾ ಎಫೆಕ್ಟ್- ಭಾರತ, ದ.ಆಫ್ರಿಕಾ ನಡುವನ ಸರಣಿ ರದ್ದು

ಕೊರೊನಾ ಎಫೆಕ್ಟ್- ಭಾರತ, ದ.ಆಫ್ರಿಕಾ ನಡುವನ ಸರಣಿ ರದ್ದು

ಮುಂಬೈ: ಕೊರೊನಾ ವೈರಸ್ ಕರಿನೆರಳು ಕ್ರಿಕೆಟ್ ಅಂಗಳಕ್ಕೂ ತಟ್ಟಿದೆ. ಬಿಸಿಸಿಐಗೆ ಭಾರೀ ಆದಾಯ ತಂದುಕೊಂಡುವ ಐಪಿಎಲ್ ದಿನಾಂಕ ಮುಂದೂಡಿದ ಬೆನ್ನಲ್ಲೇ ಭಾರತ, ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿ ರದ್ದುಗೊಳಿಸಲಾಗಿದೆ.

ಈಗಾಗಲೇ ಆರಂಭವಾಗಿರುವ ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವಿನ ಮೂರು ಏಕದಿನ ಪಂದ್ಯಗಳ ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಆದರೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಉಳಿದ ಎರಡು ಪಂದ್ಯಗಳನ್ನು ಖಾಲಿ ಮೈದಾನದಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿತ್ತು. ಆದರೆ ಈಗ ಸರಣಿಯನ್ನು ರದ್ದುಗೊಳಿಸಲಾಗಿದೆ ಎಂದು ಬಿಸಿಸಿಐ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯವು ಲಕ್ನೋದಲ್ಲಿ ಮಾರ್ಚ್ 15ರಂದು ಹಾಗೂ ಮೂರನೇ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್‍ನಲ್ಲಿ ಮಾರ್ಚ್ 18 ರಂದು ನಡೆಯಬೇಕಿತ್ತು. ಬಿಸಿಸಿಐ ಸರಣಿಯನ್ನು ರದ್ದುಗೊಳಿಸಿದ್ದರಿಂದ ಹರಿಣರು ತಮ್ಮ ತಾಯ್ನಾಡಿಗೆ ಮರಳಲಿದ್ದಾರೆ.


ದೇಶದಲ್ಲಿ ಮಹಾಮಾರಿ ಕೊರೊನಾ ಹೆಚ್ಚಾಗುತ್ತಿದೆ. ಹೀಗಾಗಿ ಐಪಿಎಲ್ ಟೂರ್ನಿಯನ್ನು ಮುಂದೂಡಬೇಕು. ಇಲ್ಲವೇ ರದ್ದುಗೊಳಿಸಬೇಕು ಎಂಬ ಕೂಗು ಕೇಳಿ ಬಂದಿತ್ತು. ಇದರಿಂದಾಗಿ ಬಿಸಿಸಿಐ ಜಾಗತಿಕ ಕಾಳಜಿಯ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿಯನ್ನು ಏಪ್ರಿಲ್ 15ಕ್ಕೆ ಮುಂದೂಡಿದೆ. ಚೆನ್ನೈನಲ್ಲಿ ಮಾರ್ಚ್ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಮುಂದೂಡಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಹಾಗೂ ಐಪಿಎಲ್‍ನ ಉನ್ನತ ಆಡಳಿತ ಮಂಡಳಿ ನಿರ್ಧಾರ ಪ್ರಕಟಿಸಿದೆ.


ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ್ದ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ಕ್ರಿಕೆಟ್ ವೀಕ್ಷಿಸಲು ಸಾವಿರಾರು ಮಂದಿ ಕ್ರೀಡಾಂಗಣಕ್ಕೆ ಬರುತ್ತಾರೆ. ಯಾರು ಬರುತ್ತಾರೆ? ಅವರು ಎಲ್ಲಿಂದ ಬರುತ್ತಿದ್ದಾರೆ ಎನ್ನುವುದು ತಿಳಿಯುವುದು ಅಸಾಧ್ಯ. ಒಬ್ಬ ವ್ಯಕ್ತಿ ಬಂದರೂ ಹಲವು ಮಂದಿಗೆ ಕೊರೊನಾ ಹರಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾ ಕಾರ್ಯಕ್ರಮವನ್ನು ರದ್ದುಪಡಿಸುತ್ತಿದ್ದೇವೆ ಎಂದು ಹೇಳಿದ್ದರು.

ತಾಜಾ ಸುದ್ದಿಗಳು