ಚಿಕ್ಕಮಗಳೂರು: ಅಂಬುಲೆನ್ಸಿನ ಹೆಡ್ಲೈಟ್ ಹಾಳಾದರೂ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಪ್ರಾಣ ಉಳಿಸಲು ಚಾಲಕ 190 ಕಿ.ಮೀ ಸಂಚರಿಸಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಿದ್ದಾರೆ.
ನಗರದ ಟಿಪ್ಪು ನಗರದಲ್ಲಿ ವೃದ್ಧರೊಬ್ಬರು ಮಂಗಳವಾರ ರಾತ್ರಿ ಅಪಘಾತದಲ್ಲಿ ತೀವ್ರ ಗಾಯಗೊಂಡು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಅವರನ್ನು ನಗರದ ಇಸ್ಲಾಮಿಕ್ ಬೈತುಲ್ಮಾಲ್ನ ಅಂಬುಲೆನ್ಸ್ ಚಾಲಕ ಜೀಷಾನ್ ಬೆಂಗಳೂರಿನ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗುತ್ತಿದ್ದರು.
ಹಾಸನದ ಮೊದಲ ಟೋಲ್ ದಾಟುತ್ತಿದ್ದಂತೆ ಅಂಬುಲೆನ್ಸಿನ ಹೆಡ್ಲೈಟ್ಗಳು ಕೆಟ್ಟು ಆನ್ ಆಗಲಿಲ್ಲ. ತಕ್ಷಣ ಜೀಷಾನ್ ಪೊಲೀಸ್ ತುರ್ತು ದೂರವಾಣಿ ಸಂಖ್ಯೆಗೆ ಮಾಹಿತಿ ನೀಡಿದರು. ಅವರ ಸ್ನೇಹಿತರು ಹಾಗೂ ಅಪಘಾತಕ್ಕೊಳಗಾದ ವೃದ್ಧರ ಸಂಬಂಧಿಗಳಿಗೂ ಕರೆ ಮಾಡಿದರು. ಎಲ್ಲರ ಉತ್ತರವೂ ಬರುತ್ತೇವೆ ಎಂದೇ ಬಂದಿತ್ತು. ಆದರೆ ಯಾರ ನೆರವು ಸಿಗಲಿಲ್ಲ.
ಈ ವೇಳೆ ಹಾಸನದಿಂದ ಬೆಂಗಳೂರಿನತ್ತ ಹೊರಟ ಮತ್ತೊಂದು ಅಂಬುಲೆನ್ಸ್ ಹಿಂದೆಯೇ ಚಲಿಸುತ್ತಾ ಲೈಟ್ ಇಲ್ಲದ ಅಂಬುಲೆನ್ಸ್ 190 ಕಿ.ಮೀ. ಸಾಗಿ ನಿಮ್ಹಾನ್ಸ್ ತಲುಪಿ ವೃದ್ಧರ ಜೀವ ಉಳಿಸಿದ್ದಾರೆ. ಹಾಸನದ ಚಾಲಕ ರೋಗಿಯನ್ನು ಬೆಂಗಳೂರಿಗೆ ಸಾಗಿಸುತ್ತಿದ್ದರು. ಈ ವೇಳೆ ಜೀಷಾನ್ ಮನವಿಗೆ ಸ್ಪಂದಿಸಿ ನಿಮ್ಹಾನ್ಸ್ವರೆಗೂ ಹೆಡ್ಲೈಟ್ ಇಲ್ಲದ ಅಂಬುಲೆನ್ಸ್ ಗೆ ದಾರಿಯಾಗಿ ಮಾನವೀಯತೆ ಮೆರೆದಿದ್ದಾರೆ.