ಕೊನೆಯ ಓವರಿನಲ್ಲಿ 3 ರನ್‍ಗಳ ರೋಚಕ ಜಯ- ಹ್ಯಾಟ್ರಿಕ್ ಗೆಲುವು, ಸೆಮಿಗೆ ಟೀಂ ಇಂಡಿಯಾ

ಕೊನೆಯ ಓವರಿನಲ್ಲಿ 3 ರನ್‍ಗಳ ರೋಚಕ ಜಯ- ಹ್ಯಾಟ್ರಿಕ್ ಗೆಲುವು, ಸೆಮಿಗೆ ಟೀಂ ಇಂಡಿಯಾ

– ಕೊನೆಯ 3 ಓವರಿನಲ್ಲಿ 5 ಬೌಂಡರಿ ಸೇರಿ 25 ರನ್ ಸಿಡಿಸಿದ ಕೆರ್
– ಎ ಗುಂಪಿನಲ್ಲಿ ಭಾರತಕ್ಕೆ ಆಗ್ರಸ್ಥಾನ
ಮೆಲ್ಬರ್ನ್:
ನ್ಯೂಜಿಲೆಂಡ್ ತಂಡವನ್ನು 3 ರನ್‍ಗಳಿಂದ ಸೋಲಿಸಿದ ಭಾರತವು ಹ್ಯಾಟ್ರಿಕ್ ಗೆಲುವಿನೊಂದಿಗೆ ಮಹಿಳೆಯರ ಟಿ20 ವಿಶ್ವಕಪ್ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

ಮೆಲ್ಬರ್ನ್ ನಲ್ಲಿ ಮಹಿಳೆಯರ ಟಿ20 ವಿಶ್ವಕಪ್ ಭಾಗವಾಗಿ ನ್ಯೂಜಿಲೆಂಡ್ ವಿರುದ್ಧ ಗುರುವಾರ ನಡೆದ ನಡೆದ ಪಂದ್ಯದಲ್ಲಿ ಭಾರತದ ಕೊನೆಯ ಓವರಿನಲ್ಲಿ ಗೆದ್ದು ಬೀಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ 8 ವಿಕೆಟ್‍ಗೆ 133 ರನ್ ಗಳಿಸಿತ್ತು. ಆದರೆ ನ್ಯೂಜಿಲೆಂಡ್ ತಂಡವು 6 ವಿಕೆಟ್‍ಗೆ 130 ರನ್ ಗಳಿಸಿ ಸೋಲು ಕಂಡಿತು.


ಕೊನೆಯ ಮೂರು ಓವರ್ ಗಳಲ್ಲಿ 40 ರನ್ ಗಳಿಸಬೇಕಾದ ಒತ್ತಡದಲ್ಲಿದ್ದಾಗ ನ್ಯೂಜಿಲೆಂಡ್ 18ನೇ ಓವರಿನಲ್ಲಿ 6 ರನ್ ಗಳಿಸಿದರೆ 19ನೇ ಓವರಿನಲ್ಲಿ 18 ರನ್ ಗಳಿಸಿತ್ತು. ಪೂನಂ ಯಾದವ್ ಎಸೆದ ಈ ಓವರಿನಲ್ಲಿ ಕೇರ್ 4 ಬೌಂಡರಿ, 2 ರನ್ ಹೊಡೆದ ಪರಿಣಾಮ 18 ರನ್ ಬಂದಿತ್ತು. ಕೊನೆಯ ಓವರಿನಲ್ಲಿ 16 ರನ್ ಬೇಕಿತ್ತು. ಪಾಂಡೆ 20ನೇ ಓವರಿನಲ್ಲಿ 2 ಬೌಂಡರಿ ಮತ್ತು 3 ಸಿಂಗಲ್ ರನ್ ಬಿಟ್ಟುಕೊಟ್ಟು ರನ್ ನಿಯಂತ್ರಿಸಿದ ಪರಿಣಾಮ ಭಾರತ ರೋಚಕವಾಗಿ ಪಂದ್ಯ ಗೆದ್ದುಕೊಂಡಿತು.


ಅಮೆಲಿಯಾ ಕೆರ್ ಹಾಗೂ ಹೇಲಿ ಜೆನ್ಸನ್ ಸ್ಫೋಟಕ ಬ್ಯಾಟಿಂಗ್ ಆರಂಭಿಸಿ ಪಂದ್ಯಕ್ಕೆ ರೋಚಕ ತಿರುವು ನೀಡಿದ್ದರು. ಕೊನೆಯ ಮೂರು ಓವರಿನಲ್ಲಿ ಅಮೆಲಿಯಾ ಕೆರ್ 5 ಬೌಂಡರಿ ಸೇರಿ 25 ರನ್ ಸಿಡಿಸಿದರು. ಜೆನ್ಸನ್ ಕೂಡ 1 ಬೌಂಡರಿ ಸೇರಿ 10 ರನ್ ಪೇರಿಸಿದರು. ಆದರೆ ನಿಗದಿತ 20 ಓವರ್ ಗಳ ಮುಕ್ತಾಯಕ್ಕೆ ಕಿವೀಸ್ 130 ರನ್ ಗಳಿಸಲು ಶಕ್ತವಾಯಿತು.

ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮಹಿಳಾ ತಂಡಕ್ಕೆ ಇದು ಸತತ ಮೂರನೇ ಜಯವಾಗಿದೆ. ಭಾರತವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 17 ರನ್‍ಗಳಿಂದ ಮತ್ತು ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 18 ರನ್‍ಗಳಿಂದ ಮಣಿಸಿತ್ತು.


ಭಾರತದ ಪರ ಶೆಫಾಲಿ ವರ್ಮಾ ಅತಿ ಹೆಚ್ಚು 46 ರನ್ (34 ಎಸೆತ, 4 ಬೌಂಡರಿ, 3 ಸಿಕ್ಸರ್) ಗಳಿಸಿದರೆ, ತಾನಿಯಾ ಭಾಟಿಯಾ 23 ರನ್ (25 ಎಸೆತ, 3 ಬೌಂಡರಿ) ದಾಖಲಿಸಿದರು. ಶೆಫಾಲಿ ವರ್ಮಾ ಪಂದ್ಯ ಶ್ರೇಷ್ಠಕ್ಕೆ ಭಾಜನರಾಗಿದ್ದಾರೆ. ಅದೇ ಸಮಯದಲ್ಲಿ, ನ್ಯೂಜಿಲೆಂಡ್ ಪರ ಅಮೆಲಿಯಾ ಕೆರ್ ಮತ್ತು ರೋಸ್ಮರಿ ಮಾರ್ ತಲಾ 2 ವಿಕೆಟ್ ಪಡೆದರು. ಕ್ಯಾಪ್ಟನ್ ಸೋಫಿ ಡಿವೈನ್, ಲೀ ತಹುಹು ಮತ್ತು ಲಾಗ್ ಕಾಸ್ಪೆರೆಕ್ ತಲಾ ಒಂದು ವಿಕೆಟ್ ಕಿತ್ತರು.

ಹರ್ಮನ್‍ಪ್ರೀತ್ ವೈಫಲ್ಯ:
ಈ ಟೂರ್ನಿಯಲ್ಲಿ ಹರ್ಮನ್‍ಪ್ರೀತ್ ಕಳಪೆ ಪ್ರದರ್ಶನ ಮುಂದುವರಿಸಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಎರಡಂಕಿ ಅಂಕಿ ರನ್ ದಾಟುವಲ್ಲಿ ಹರ್ಮನ್‍ಪ್ರೀತ್ ವಿಫಲರಾಗಿದ್ದಾರೆ. ಅವರು ಆಸ್ಟ್ರೇಲಿಯಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 2 ರನ್ ಗಳಿಸಿದೆ, ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯದಲ್ಲಿ 8 ರನ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಇಂದಿನ ಪಂದ್ಯದಲ್ಲಿ 1 ರನ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

ಎ ಗುಂಪಿನಲ್ಲಿ ಭಾರತಕ್ಕೆ ಅಗ್ರಸ್ಥಾನ:
ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ 6 ಅಂಕಗಳೊಂದಿಗೆ ಗ್ರೂಪ್-ಎ ಯಲ್ಲಿ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯವನ್ನು 7 ವಿಕೆಟ್‍ಗಳಿಂದ ಗೆದ್ದಿದ್ದ ನ್ಯೂಜಿಲೆಂಡ್, ಭಾರತದ ವಿರುದ್ಧದ ಎರಡದಲ್ಲಿ ಸೋಲು ಕಂಡು 2 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಳು