ಪಾಕ್ ಕ್ರಿಕೆಟರ್‌ಗೆ 17 ತಿಂಗಳು ಜೈಲು ಶಿಕ್ಷೆ ವಿಧಿಸಿದ ಲಂಡನ್ ಕೋರ್ಟ್

ಪಾಕ್ ಕ್ರಿಕೆಟರ್‌ಗೆ 17 ತಿಂಗಳು ಜೈಲು ಶಿಕ್ಷೆ ವಿಧಿಸಿದ ಲಂಡನ್ ಕೋರ್ಟ್

ಲಂಡನ್: ಪಾಕಿಸ್ತಾನದ ಮಾಜಿ ಬ್ಯಾಟ್ಸ್‌ಮನ್ ನಾಸಿರ್ ಜಮ್‍ಶೆಡ್‍ಗೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮ್ಯಾಂಚೆಸ್ಟರ್‌ನ ಕ್ರೌನ್ ಕೋರ್ಟ್ 17 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

33 ವರ್ಷದ ಮಾಜಿ ಬ್ಯಾಟ್ಸ್‌ಮನ್ ನಾಸಿರ್ ಜಮ್‍ಶೆಡ್‌ಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಈ ಹಿಂದೆ 4 ಆಟಗಾರರು ಫಿಕ್ಸಿಂಗ್‍ಗಾಗಿ ಜೈಲಿಗೆ ಹೋಗಿದ್ದರು. ಇದರಲ್ಲಿ ಪಾಕಿಸ್ತಾನದ ಮೊಹಮ್ಮದ್ ಅಮೀರ್, ಮೊಹಮ್ಮದ್ ಆಸಿಫ್, ಸಲ್ಮಾನ್ ಬಟ್ ಸೇರಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ಅಮೀರ್, ಆಸಿಫ್ ಮತ್ತು ಸಲ್ಮಾನ್ ಬಟ್ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ ಆರೋಪ ಸಾಬೀತಾದ ನಂತರ 2010ರಲ್ಲಿ ಲಂಡನ್ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಅಮೀರ್ 1 ವರ್ಷ ಕ್ರಿಕೆಟ್ ನಿಷೇಧ ಶಿಕ್ಷೆ, 3 ತಿಂಗಳ ಜೈಲುವಾಸ ಅನುಭವಿಸಬೇಕಾಯಿತು. ಆಸಿಫ್‍ಗೂ 1 ವರ್ಷ ಕ್ರಿಕೆಟ್ ನಿಷೇಧ, 6 ತಿಂಗಳು ಸೆರೆವಾಸಕ್ಕೆ ಗುರಿಯಾಗಿದ್ದರು. ಬಟ್‍ಗೆ 30 ತಿಂಗಳು ಕ್ರಿಕೆಟ್ ನಿಷೇಧ, 7 ತಿಂಗಳ ಜೈಲು ವಾಸಕ್ಕೆ ಗುರಿಯಾಗಿದ್ದರು.

ಜಮ್‍ಶೆಡ್ ಸಹಚರರಾದ ಯೂಸುಫ್ ಅನ್ವರ್ ಮತ್ತು ಮೊಹಮ್ಮದ್ ಎಜಾಜ್ ಅವರಿಗೆ ಕ್ರೌನ್ ಕೋರ್ಟ್ 40 ಮತ್ತು 30 ತಿಂಗಳು ಜೈಲು ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿನ ಕಳಪೆ ಪ್ರದರ್ಶನಕ್ಕಾಗಿ ಆಟಗಾರರಿಗೆ ಹಣವನ್ನು ನೀಡಿದ್ದನ್ನು ಇಬ್ಬರೂ ಒಪ್ಪಿಕೊಂಡಿದ್ದಾರೆ. ಈ ಇಬ್ಬರೂ ಇಂಗ್ಲೆಂಡ್ ಪ್ರಜೆಗಳಾಗಿದ್ದು, ಜಮ್‍ಶೆಡ್‍ರನ್ನು 2018ರಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) 10 ವರ್ಷಗಳ ಕಾಲ ನಿಷೇಧ ಹೇರಿತ್ತು.

ಬಂಧಿಸಿದ್ದು ಹೇಗೆ?:

ಸ್ಪಾಟ್ ಫಿಕ್ಸಿಂಗ್ ಬಗ್ಗೆ ತನಿಖೆಯ ವೇಳೆ ಬ್ರಿಟನ್‍ನ ರಾಷ್ಟ್ರೀಯ ಅಪರಾಧ ಸಂಸ್ಥೆಯು ಕಳೆದ ವರ್ಷ ಜಮ್‍ಶೆಡ್, ಯೂಸುಫ್ ಅನ್ವರ್ ಮತ್ತು ಮೊಹಮ್ಮದ್ ಇಜಾಜ್ ಅವರನ್ನು ಬಂಧಿಸಿತ್ತು. ಆರಂಭದಲ್ಲಿ ಮೂವರೂ ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿ ಫಿಕ್ಸಿಂಗ್ ಆರೋಪವನ್ನು ನಿರಾಕರಿಸಿದ್ದರು. ಆದರೆ ಕಳೆದ ವರ್ಷ ಡಿಸೆಂಬರ್‍ನಲ್ಲಿ ನಡೆದ ವಿಚಾರಣೆಯ ವೇಳೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದರು.

2016ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‍ನಲ್ಲಿ ಜಮ್‍ಶೆಡ್ ಎರಡು ಬಾರಿ ಸ್ಪಾಟ್ ಫಿಕ್ಸಿಂಗ್ ಮಾಡಲು ಯತ್ನಿಸಿ ವಿಫಲರಾಗಿದ್ದರು ಎಂದು ತನಿಖೆಯಿಂದ ಪೊಲೀಸರಿಗೆ ತಿಳಿದುಬಂದಿತ್ತು. ನಂತರ ಅವರು ರಣಪುರ ರೈಡರ್ಸ್ ಪರ ಶಾರ್ಜೀಲ್ ಖಾನ್ ಜೊತೆ ಆಡಿದ್ದರು.

ತಾಜಾ ಸುದ್ದಿಗಳು