ಶೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ

ಶೈನಿ, ಶಾರ್ದೂಲ್, ರಾಹುಲ್, ಪಾಂಡೆ ಕಮಾಲ್- ಸೂಪರ್ ಓವರಿನಲ್ಲಿ ಮತ್ತೆ ಭಾರತಕ್ಕೆ ಜಯ

– 1 ಸಿಕ್ಸರ್, 1 ಬೌಂಡರಿ ಸಿಡಿಸಿದ ರಾಹುಲ್
– 13 ರನ್ ಬಿಟ್ಟುಕೊಟ್ಟ ಬುಮ್ರಾ

– ಕೊನೆಯ ಓವರಿನಲ್ಲಿ 4 ವಿಕೆಟ್ ಕಳೆದುಕೊಂಡ ಕಿವೀಸ್
ವೆಲ್ಲಿಂಗ್ಟನ್:
ಸೂಪರ್ ಓವರಿನಲ್ಲಿ ಭಾರತ ಮತ್ತೊಮ್ಮೆ ಕಮಾಲ್ ಮಾಡಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಈ ಮೂಲಕ 5 ಪಂದ್ಯಗಳ ಟಿ 20 ಸರಣಿಯಲ್ಲಿ 4 ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್‌ನತ್ತ ಚಿತ್ತ ಹರಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದರೆ ನ್ಯೂಜಿಲೆಂಡ್ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಪಂದ್ಯ ಟೈ ಆದ ಹಿನ್ನೆಲೆಯಲ್ಲಿ ಸೂಪರ್ ಓವರ್ ಮೊರೆ ಹೊಗಲಾಯಿತು.


ಸೂಪರ್ ಓವರ್ ಹೀಗಿತ್ತು:
ನ್ಯೂಜಿಲೆಂಡ್ ಪರವಾಗಿ ಸೀಫರ್ಟ್ ಮತ್ತು ಮನ್ರೋ ಕ್ರೀಸಿಗೆ ಆಗಮಿಸಿದರು. ಬುಮ್ರಾ ಎಸೆದ ಮೊದಲ ಓವರಿನಲ್ಲಿ ಸೀಫರ್ಟ್ ಬಲವಾಗಿ ಹೊಡೆದಿದ್ದು ಶ್ರೇಯಸ್ ಅಯ್ಯರ್ ಕ್ಯಾಚ್ ಕೈ ಚೆಲ್ಲಿದ ಪರಿಣಾಮ 2 ರನ್ ಬಂತು. ನಂತರ ಸೀಫರ್ಟ್ ಬೌಂಡರಿ ಹೊಡೆದರೆ ನಂತರದ ಎಸೆತದಲ್ಲಿ ಎರಡು ರನ್ ಕದ್ದರು. 4ನೇ ಎಸೆತದಲ್ಲಿ ಸೀಫರ್ಟ್ ಕ್ಯಾಚ್ ನೀಡಿ ಔಟಾದರು. 5ನೇ ಎಸೆತದಲ್ಲಿ ಮನ್ರೋ ಬೌಂಡರಿ ಹೊಡೆದರೆ, ಕೊನೆಯ ಎಸೆತದಲ್ಲಿ 1 ರನ್ ಬಂತು.14 ರನ್ ಗಳ ಸವಾಲು ಪಡೆದ ಭಾರತ ಪರವಾಗಿ ಕೆ.ಎಲ್. ರಾಹುಲ್ ಟಿಮ್ ಸೌಥಿ ಎಸೆದ ಮೊದಲ ಎಸೆತವನ್ನು ಸಿಕ್ಸರ್ ಗೆ ಅಟ್ಟಿದರೆ ಎರಡನೇ ಎಸೆತವನ್ನು ಬೌಂಡರಿಗೆ ಹೊಡೆದರು. ಮೂರನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ನಂತರ ಕೊಹ್ಲಿ ಎರಡು ರನ್ ತೆಗೆದರೆ, 5ನೇ ಎಸೆತವನ್ನು ಬೌಂಡರಿಗೆ ಹೊಡೆಯುವ ಮೂಲಕ ಭಾರತಕ್ಕೆ ಜಯವನ್ನು ತಂದಿಟ್ಟರು.

ತಿರುವು ನೀಡಿದ್ದು ಕೊನೆಯ 2 ಓವರ್:
ಕೊನೆಯ ಎರಡು ಓವರಿನಲ್ಲಿ ನ್ಯೂಜಿಲೆಂಡ್ ಗೆಲ್ಲಲು 11 ರನ್ ಬೇಕಿತ್ತು. 19ನೇ ಓವರ್ ಶೈನಿ ಎಸೆದಿದ್ದು ಯಾವುದೇ ವಿಕೆಟ್ ಪಡೆಯದೇ ಕೇವಲ 4 ರನ್ ನೀಡುವ ಮೂಲಕ ಪಂದ್ಯವನ್ನು ರೋಚಕ ಘಟ್ಟಕ್ಕೆ ತಂದು ನಿಲ್ಲಿಸಿದರು.

ಕೊನೆಯ ಓವರ್ ಎಸೆಯಲು ಬಂದಿದ್ದು ಶಾರ್ದೂಲ್ ಠಾಕೂರ್. ಮೊದಲ ಎಸೆತದಲ್ಲಿ ಸಿಕ್ಸ್ ಹೊಡೆಯಲು ಯತ್ನಿಸಿದ ಟೇಲರ್ ಶ್ರೇಯಸ್ ಅಯ್ಯರ್ ಗೆ ಕ್ಯಾಚ್ ನೀಡಿ ಔಟಾದರು. ನಂತರದ ಎಸೆತವನ್ನು ಮಿಚೆಲ್ ಬೌಂಡರಿ ಹೊಡೆದರು. ಮೂರನೇ ಎಸೆತಕ್ಕೆ ಬೈ ಮೂಲಕ ರನ್ ಕದಿಯುವ ಯತ್ನದಲ್ಲಿದ್ದಾಗ ರಾಹುಲ್ ನೇರವಾಗಿ ವಿಕೆಟಿಗೆ ಎಸೆದ ಪರಿಣಾಮ ಸೀಫರ್ಟ್ ರನ್‍ಔಟ್ ಆದರು. ನಂತರ ಬಂದ ಸ್ಯಾಂಟ್ನರ್ 1 ರನ್ ಓಡಿದರು. ಕೊನೆಯ ಎರಡು ಎಸೆತದಲ್ಲಿ 2 ರನ್ ಬೇಕಿತ್ತು. 5ನೇ ಎಸೆತವನ್ನು ಬಲವಾಗಿ ಹೊಡೆದ ಮಿಚೆಲ್ ಶಿವಂ ದುಬೆಗೆ ಕ್ಯಾಚ್ ನೀಡಿ ಔಟಾದರು. ಕೊನೆಯ ಒಂದು ಎಸೆತದಲ್ಲಿ 2 ರನ್ ಬೇಕಿತ್ತು. ಕೊನೆಯ ಎಸೆತವನ್ನು ಬಲವಾಗಿ ಸ್ಯಾಂಟ್ನರ್ ಹೊಡೆದರೂ ಬಾಲ್ ಸಂಜು ಸ್ಯಾಮ್ಸನ್ ಕೈಗೆ ಸೇರಿತು. ಎರಡು ರನ್ ಕದಿಯಲು ಹೋಗಿ ರನೌಟ್ ಆದ ಪರಿಣಾಮ ಪಂದ್ಯ ಸೂಪರ್ ಓವರ್ ಕಡೆ ತಿರುಗಿತು. ಕೊನೆಯ ಓವರಿನಲ್ಲಿ ರನ್ ನಿಯಂತ್ರಿಸಿದ್ದಕ್ಕೆ ಶಾರ್ದೂಲ್‍ಗೆ ಪಂದ್ಯಶ್ರೇಷ್ಠ ಗೌರವ ನೀಡಲಾಯಿತು.

ಕಾಲಿನ್ ಮನ್ರೋ 64 ರನ್ (47 ಎಸೆತ, 6 ಬೌಂಡರಿ, 3 ಸಿಕ್ಸರ್), ಟೀಂ ಸೀಫರ್ಟ್ 57 ರನ್ (39 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ರಾಸ್ ಟೇಲರ್ 24 ರನ್ (18 ಎಸೆತ, 2 ಬೌಂಡರಿ) ಗಳಿಸಿದರು.

ಸ್ಯಾಮ್ಸನ್ ವೈಫಲ್ಯ:

ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ತಂಡವು ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ಕಾಡಿತು. ಈ ಪಂದ್ಯದಲ್ಲಿ ಅನುಭವಿ ಆಟಗಾರ ರೋಹಿತ್ ಶರ್ಮಾ ಅವರ ಸ್ಥಾನದಲ್ಲಿ ಇನಿಂಗ್ಸ್ ಆರಂಭಿಸುವ ಅವಕಾಶವನ್ನು ಸಂಜು ಸ್ಯಾಮ್ಸನ್‍ಗೆ ನೀಡಲಾಗಿತ್ತು. ಆದರೆ ಅವರು ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲೂ ಸ್ಯಾಮ್ಸನ್ ಅವರಿಗೆ ಅವಕಾಶ ನೀಡಲಾಗಿತ್ತು. ಆಗ ಸಿಕ್ಸರ್ ಸಿಡಿಸಿ ವಿಕೆಟ್ ಒಪ್ಪಿಸಿದ್ದರು. ಅದೇ ರೀತಿ ಈ ಪಂದ್ಯದಲ್ಲೂ ಸಿಕ್ಸರ್ ಬಾರಿಸಿ ನಂತರ ವಿಕೆಟ್ ಕಳೆದುಕೊಂಡರು.

ಸ್ಯಾಮ್ಸನ್ 8 ರನ್ (5 ಎಸೆತ, ಸಿಕ್ಸ್) ಗಳಿಸಿ ವಿಕೆಟ್ ಒಪ್ಪಿಸಿದರು. 14 ರನ್ ಗಳಿಗೆ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಮೈದಾಕ್ಕಿಳಿಸಿದ ವಿರಾಟ್ ಕೊಹ್ಲಿ 11 ರನ್, ಶ್ರೇಯಸ್ ಅಯ್ಯರ್ 1 ರನ್ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು. ವಿಕೆಟ್ ಕಾಯ್ದುಕೊಂಡು ರನ್ ಹೊಡೆಯುತ್ತಿದ್ದ ಕೆ.ಎಲ್.ರಾಹುಲ್ ಕ್ಯಾಚ್ ನೀಡಿ ಔಟಾದರು. ರಾಹುಲ್ 39 ರನ್ (26 ಎಸೆತ, 3 ಬೌಂಡರಿ, 2 ಸಿಕ್ಸರ್) ಸಿಡಿಸಿ ವಿಕೆಟ್ ಕಳೆದುಕೊಂಡರು. ಈ ಬೆನ್ನಲ್ಲೇ ಶಿವಂ ದುಬೆ 12 ರನ್ ಹಾಗೂ ವಾಷಿಂಗ್ಟನ್ ಸುಂದರ್ ಯಾವುದೇ ರನ್ ಗಳಿಸದೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು.

ಇನ್ನಿಂಗ್ಸ್ ನ 12ನೇ ಓವರಿನ 3ನೇ ಎಸೆತದ ವೇಳೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ 88 ರನ್ ಪೇರಿಸಿತ್ತು. ಈ ವೇಳೆ ಮನೀಶ್ ಪಾಂಡೆ ಹಾಗೂ ಶಾರ್ದೂಲ್ ಠಾಕೂರ್ ವಿಕೆಟ್ ಕಾಯ್ದುಕೊಂಡು ಉತ್ತಮ ಜೊತೆಯಾಟ ಕಟ್ಟಿದರು. ಈ ಜೋಡಿಯು 7ನೇ ವಿಕೆಟ್‍ಗೆ 43 ರನ್ ಗಳಿಸಿ ತಂಡವನ್ನು 130 ರನ್‍ಗಳ ಗಡಿದಾಟಿಸಿತು.

ಮನೀಶ್ ಅರ್ಧಶತಕ:
15 ಎಸೆತಗಳಲ್ಲಿ 22 ರನ್‍ಗಳಿಸಿದ್ದ ಶಾರ್ದೂಲ್ ಠಾಕೂರ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಮನೀಶ್ ಪಾಂಡೆ ಔಟಾಗದೆ 50 ರನ್ (36 ಎಸೆತ, 3 ಬೌಂಡರಿ) ಗಳಿಸಿ ತಂಡದ ಮೊತ್ತವನ್ನು ಏರಿಸಿದರು. ಇನಿಂಗ್ಸ್ ಅಂತ್ಯದಲ್ಲಿ ಯಜುವೇಂದ್ರ ಚಾಹಲ್ 1 ರನ್ ಹಾಗೂ ನವದೀಪ್ ಸೈನಿ ಔಟಾಗದೆ 11 ರನ್ ಗಳಿಸಿದರು. ಈ ಮೂಲಕ ಟೀಂ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್‍ಗೆ 165 ರನ್‍ಗಳ ಸವಾಲಿನ ಮೊತ್ತ ಪೇರಿಸಿತು.

ಹಿರಿಯರಿಗೆ ವಿಶ್ರಾಂತಿ:

ಸರಣಿ ಗೆದ್ದಿರುವ ಟೀಂ ಇಂಡಿಯಾ ಅನುಭವಿ ಆಟಗಾರರಾದ ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಿತ್ತು. ಅವರ ಸ್ಥಾನದಲ್ಲಿ ಕ್ರಮವಾಗಿ ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿಗೆ ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಳು