ಬಿಗ್‍ಬಾಸ್ ಸ್ಪರ್ಧಿ, ನಟಿ ಜಯಶ್ರೀಗೆ ಮಾವನಿಂದಲೇ ಕಿರುಕುಳ

ಬಿಗ್‍ಬಾಸ್ ಸ್ಪರ್ಧಿ, ನಟಿ ಜಯಶ್ರೀಗೆ ಮಾವನಿಂದಲೇ ಕಿರುಕುಳ

ಬೆಂಗಳೂರು: ಬಿಗ್‍ಬಾಸ್ ರಿಯಾಲಿಟಿ ಶೋ ಸ್ಪರ್ಧಿ, ನಟಿ ಜಯಶ್ರೀ ರಾಮಯ್ಯಗೆ ಸ್ವಂತ ಸೋದರಮಾವನೇ ಕಿರುಕುಳ ನೀಡಿದ ಘಟನೆ ನಡೆದಿದ್ದು, ನಡುರಾತ್ರಿ ಎಂಬುದನ್ನೂ ಲೆಕ್ಕಿಸದೆ ಮನೆಯಿಂದ ಹೊರಹಾಕಿ ಅಮಾನವೀಯತೆ ಮೆರೆದಿದ್ದಾರೆ.

ನಟಿ ಜಯಶ್ರೀ ಅವರು ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟಿ ಜಯಶ್ರೀಯನ್ನ ಮನೆಯಿಂದ ಹೊರ ಹಾಕಿದ ಸೋದರಮಾವ ಗಿರೀಶ್ ಹಾಗೂ ಜಯಶ್ರೀ ನಡುವೆ ಕೆಲವು ವರ್ಷಗಳಿಂದ ಆಸ್ತಿ ವಿಚಾರವಾಗಿ ಮಾತುಕತೆ ನಡೆಯುತ್ತಿತ್ತು. ಹನುಮಂತನಗರದಲ್ಲಿ ತನ್ನ ತಾಯಿ ಜೊತೆ ವಾಸವಾಗಿದ್ದ ಜಯಶ್ರೀ ಜೊತೆಗೆ ಇದೇ ವಿಚಾರವಾಗಿ ಮಾತನಾಡಲು ನಿನ್ನೆ ಗಿರೀಶ್ ಮನೆಗೆ ತೆರಳಿದ್ದರು. ತಾಯಿಯೊಡನೆ ಮನೆಗೆ ಬಂದ ಜಯಶ್ರೀ ಜೊತೆ ಗಲಾಟೆ ಮಾಡಿದ ಗಿರೀಶ್ ನಡುರಾತ್ರಿ ಮನೆಯಿಂದ ಬೀದಿಗೆ ತಳ್ಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಜಯಶ್ರೀ ಅವರು, ಸೋದರಮಾವ ತಮ್ಮನ್ನು ಬೀದಿಗೆ ತಳ್ಳಿದ್ದೂ ಅಲ್ಲದೆ ತನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಸದ್ಯ ತಾವು ಅಶೋಕನಗರದಲ್ಲಿರುವ ಅಜ್ಜಿಯ ಮನೆಯಲ್ಲಿ ಆಶ್ರಯ ಪಡೆದಿದ್ದೇವೆ. ಆಸ್ತಿ ವಿಚಾರವಾಗಿಯೇ ಅವರು ಜಗಳ ಮಾಡುತ್ತಿದ್ದು, ಚಿಕ್ಕಂದಿನಿಂದಲೇ ಅವರು ದೌರ್ಜನ್ಯ ನಡೆಸುತ್ತಿದ್ದರು. ಅವರಿಗೆ ಮದುವೆಯಾಗಿದ್ದು, ಪತ್ನಿ ಕೂಡ ಅವರ ಹಿಂಸೆ ಸಹಿಸಲಾಗದೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.

ನಟಿ ಜಯಶ್ರೀಗೆ ಕಿರುಕುಳ ನೀಡಿರುವ ಆರೋಪವನ್ನು ತಳ್ಳಿಹಾಕಿರುವ ಮಾವ ಗಿರೀಶ್, ಆಕೆಗೆ ಸ್ವಾತಂತ್ರ ನೀಡುತ್ತಿಲ್ಲ ಎಂಬ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಜಯಶ್ರೀ ಯಾವಾಗ ಅಂದ್ರೆ ಅವಾಗ ಹೊರಗಡೆ ಹೋಗುತ್ತಿದ್ದಳು. ಅದನ್ನು ಪ್ರಶ್ನೆ ಮಾಡಿದ್ದಕ್ಕೆ ಈ ರೀತಿ ಕೇಸ್ ದಾಖಲಿಸಿದ್ದಾಳೆ. ಜಯಶ್ರೀಗೆ ಕೊಡಬೇಕಾದ ಆಸ್ತಿ ಎಲ್ಲ ಕೊಟ್ಟಿದ್ದೇವೆ. ನಮ್ಮ ನಡುವೆ ಆಸ್ತಿ ವಿಚಾರಕ್ಕೆ ಯಾವುದೇ ಜಗಳ-ಮಾತುಕತೆ ನಡೆದಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಳು