ಸಾಮ-ದಾನ-ಭೇದ-ದಂಡಗಳ ಪ್ರತಿರೂಪ ಶ್ರೀ ಕೃಷ್ಣ

ಸಾಮ-ದಾನ-ಭೇದ-ದಂಡಗಳ ಪ್ರತಿರೂಪ ಶ್ರೀ ಕೃಷ್ಣ


ಡಾ.ಡಿ.ಸಿ.ರಾಮಚಂದ್ರ

ಕೃಷ್ಣ ಈ ಶಬ್ದ ದಿವ್ಯವಾದದ್ದು. ಶ್ರೀಕೃಷ್ಣ ಎಂದರೆ ಅತ್ಯುನ್ನತ ಆನಂದ ಎಂದರ್ಥ. ಪರಮಾನಂದದ ಉತ್ತುಂಗ ಶಿಖರ ಎಂದು ಬಿಡಿಸಿ ಹೇಳಬಹುದು. ಶ್ರೀಕೃಷ್ಣನ ಹೆಸರು ಲೋಕಪ್ರಿಯ. ರಾತ್ರಿ ಮಲಗುವ ಮುನ್ನ, ಬೆಳಿಗ್ಗೆ ಎದ್ದಕೂಡಲೇ ಕೃಷ್ಣ ಕೃಷ್ಣ ಎಂದುಕೊಳ್ಳುತ್ತಾ ಅವನ ಹತ್ತಾರು ಚಿತ್ರಗಳನ್ನು ಕಣ್ತುಂಬಿಕೊಳ್ಳುವ ಭಕ್ತರಿದ್ದಾರೆ.
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮನಂ ಸೃಜಾಮ್ಯಹಮ್ ||

“ಅಸತ್ಯ, ಅಧರ್ಮ, ಅನ್ಯಾಯ ಹೆಚ್ಚಿದಾಗಲೆಲ್ಲ ಮತ್ತೆ ಸತ್ಯ, ಧರ್ಮ, ನ್ಯಾಯಗಳನ್ನು ನೆಲೆಗೊಳಿಸಿ, ಮನುಕುಲ ಸಂರಕ್ಷಿಸಲು ಕಾಲಕಾಲಕ್ಕೆ ನಾನು ಅವತರಿಸುತ್ತೇನೆ” ಎಂದು ಶ್ರೀಕೃಷ್ಣ ಹೇಳಿದ ಮಾತು ಇಂದು ಬಹುಪಾಲು ಸೂಕ್ತ. ಜನಪ್ರತಿನಿಧಿಗಳು ಹಗರಣ ಹುಟ್ಟು ಹಾಕಿ, ಸ್ವಾರ್ಥ-ಲಾಭ-ಸ್ವಜನಪಕ್ಷಪಾತದಲ್ಲಿ ತೊಡಗಿರುವಾಗ ಪ್ರಜೆಗಳ ಬದುಕು ದುರ್ಭರವಾಗಿರುವಾಗ ಕೃಷ್ಣ ಅವತರಿಸಿ ಬರುವನೇ ಎಂದುಕೊಳ್ಳುವಂತಾದರೆ ಅದು ಅಸಹಜವೇನಲ್ಲ. ಧರ್ಮಾತ್ಮರನ್ನು ಧರ್ಮವು ಸದಾ ರಕ್ಷಿಸುತ್ತದೆ.

ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುಭೂರ್ಮಾ ತೇ ಸಂಗೋಸ್ತ್ವಕರ್ಮಣಿ ||

ಯುದ್ಧ ನಿನ್ನ ಕರ್ತವ್ಯ. ನಿನ್ನ ಕೆಲಸ ನೀನು ಮಾಡು. ಫಲ-ಅಫಲಗಳನ್ನು ಯೋಚಿಸದಿರು ಎಂದು ಹುರಿದುಂಬಿಸಿದವ ರುಕ್ಮಿಣೀರಮಣ ಶ್ರೀಕೃಷ್ಣ.
ವಸುದೇವ- ದೇವಕೀ ಪುತ್ರ, ಯಶೋದಾ ನಂದನ, ಬಾಲಕೃಷ್ಣ, ಗೋಪಿ- ರಾಧಾಕೃಷ್ಣ, ತುಂಟ ಕೃಷ್ಣ, ಪಾಂಡವ ಪ್ರಿಯ, ಸಾರಥಿ ಕೃಷ್ಣ, ಸಂಧಾನಕಾರ, ಗೀತಾಚಾರ್ಯ ಹೀಗೆ ಕೃಷ್ಣನ ಪಾತ್ರಗಳು ಹಲವಾರು. ಒಂದೊಂದು ಪಾತ್ರದಲ್ಲೂ ಹಿತೋಪದೇಶ ಮಾಡುವ ಈ ಮಹಾನುಭಾವ ನಮಗೆ ಪ್ರತ್ಯಕ್ಷವಾಗಿ ಕಾಣುತ್ತಿಲ್ಲ ಎಂಬುದೇ ಆತಂಕದ ವಿಷಯ.

ಸಮುದ್ರಕ್ಕೆ ಸಮುದ್ರವೇ ಸಾಟಿ. ಸೂರ್ಯನಿಗೆ ಸೂರ್ಯ ಸಮ ಎಂಬ ಹಾಗೆ ಕೃಷ್ಣನಿಗೆ ಸಾಟಿಯಾದವ ಕೃಷ್ಣನೇ ಹೌದು. ನೂರಾರು ವಿಧದಲ್ಲಿ ಕೃಷ್ಣ ಬಲು ವಿಶಿಷ್ಟ ಶಕ್ತಿ ಮತ್ತು ವ್ಯಕ್ತಿ. ನೆಚ್ಚಿಕೊಂಡವರನ್ನು ಬೆಳಕಿನಲ್ಲಿ ಮುಂದೆ ಕರೆದೊಯ್ದ ಮಾರ್ಗದರ್ಶಿ.

ಬಾಲ್ಯದಲ್ಲಿ ಸಹಜ ತುಂಟಾಟದಿಂದ ಕೃಷ್ಣ ಎಲ್ಲರನ್ನೂ ರಂಜಿಸಿದ್ದುಂಟು. ಹಸುಗಳಿರುವ ಮನೆಹೊಕ್ಕು ಹಾಲು ಕುಡಿದು, ಬೆಣ್ಣೆ ತಿಂದು ತೇಗಿದ ಕುಮಾರ. ಗೋಪಿಕಾ ಸ್ತ್ರೀಯರನ್ನು ಕೊಳಲ ದನಿಯಿಂದ ಮರುಳು ಮಾಡಿದ ರಸಿಕ. ಅವನ ಬಟ್ಟೆ ಕದ್ದು ಕಾಡಿದ ತುಂಟ. ತಾಯಿಗೆ ಬಾಯಿಯಲ್ಲಿ ಬ್ರಹ್ಮಾಂಡ ತೋರಿದ ಪವಾಡ ಪುರುಷ. ಕಾಳಿಂಗ ಮರ್ದನ ಮಾಡಿ, ಪೂತನಿಯನ್ನು ಕೊಂದು, ಮಾವ ಕಂಸನನ್ನು ಯಮಸದನಕ್ಕೆ ಅಟ್ಟಿದ ತಂತ್ರಗಾರ. ಆನೆಯ ಮದವಿಳಿಸಿ, ಧೇನುಕಾಸುರ –ಚಾಣೂರ ಮುಂತಾದ ರಾಕ್ಷಸೀ ಪ್ರವೃತ್ತಿಗಳನ್ನು ಮೆಟ್ಟಿ ದೇವಕಿ- ಯಶೋದೆಯರಿಗೆ ಪರಮಾನಂದ ಉಂಟುಮಾಡಿದ ವರಪುತ್ರ. ಧಾರಾಕಾರ ಮಳೆಯಲ್ಲಿ ಗೋವರ್ಧನ ಗಿರಿಯನ್ನು ಎತ್ತಿಹಿಡಿದು, ಹಸುಗಳು- ಗೋಕುಲದ ಜನರನ್ನು ಸಂರಕ್ಷಿಸಿದ ಜಗದ್ರಕ್ಷಕ. ಗುರು ಸಾಂದೀಪನಿಯ ಮಗನನ್ನು ಸಮುದ್ರದಾಳದಿಂದ ಹೊರತಂದು ಗುರುದಕ್ಷಿಣೆಯನ್ನಿತ್ತ ನೆಚ್ಚಿನ ಶಿಷ್ಯ. ಬಾಲ್ಯ ಸ್ನೇಹಿತ ಸುಧಾಮನು ತಂದಿದ್ದ ಅವಲಕ್ಕಿ ತಿಂದು, ಅವನ ದಾರಿದ್ರ್ಯ ದೂರ ಮಾಡಿ ಸಿರಿವಂತನನ್ನಾಗಿಸಿದ ನೆಚ್ಚಿನ ಗೆಳೆಯ.

ಬರಿ ಮಾನವರು ಮಾತ್ರವಲ್ಲ, ಹಸು, ನವಿಲು, ಪಕ್ಷಿಗಳಿಗೂ ಕೃಷ್ಣನೆಂದರೆ ಅವ್ಯಾಜ ಪ್ರೀತಿ. ಅವನ ಕೊಳಲಿನ ಕರೆಗೆ ಮೋಹಗೊಂಡವರು ಗೋಪಿಕೆಯರು ಮಾತ್ರವಲ್ಲ, ದನ-ಕರುಗಳು ಕಿವಿ ನಿಮಿರಿಸಿ ಕೇಳುತ್ತಿದ್ದುದು ಸುಸ್ಪಷ್ಟ.

ಕೃಷ್ಣನ ವಿರುದ್ಧ ಬೆಣ್ಣೆ ಕದ್ದ, ಸೀರೆ ಕದ್ದ ಎಂಬ ಉಡಾಫೆ ಮಾತುಗಳಿದ್ದರೂ ಕಳ್ಳತನ ಅವನ ಉದ್ದೇಶವಲ್ಲ. ಏಳೆಂಟು ವರ್ಷದ ಮುಗ್ಧ ಮಗುವಿನ ತುಂಟತನ ಅವನದು. ಈ ವಯಸ್ಸಿನಲ್ಲಿ ಮಕ್ಕಳು ತುಂಟಾಟಕ್ಕಾಗಿ ಮಾಡಿರಲು ಸಾಕು. ನಮ್ಮನ್ನು ನಾವು ಸಂಪೂರ್ಣ ಸಮರ್ಪಿಸಿಕೊಂಡಗಲೇ ಕೃಷ್ಣಕೃಪೆ ಸಾಧ್ಯ ಎಂಬ ಮಾತು ಇಲ್ಲಿ ನಿತ್ಯಸತ್ಯ. ಕೃಷ್ಣಾ, ನಾನು ಆಪತ್ತಿನಲ್ಲಿದ್ದೇನೆ, ನನ್ನ ಮಾನ, ಸ್ವಾಭಿಮಾನ ಕಾಯುವುದು ನಿನಗೇ ಬಿಟ್ಟದ್ದು ಎಂದು ಎರಡೂ ಕೈಗಳನ್ನೆತ್ತಿ ನಮಸ್ಕರಿಸಿದಾಗಲೇ ದ್ರೌಪದಿಗೆ ಅಕ್ಷಯ ವಸ್ತ್ರವನ್ನಿತ್ತ ಹಿರಿಮೆ ಇವನದಲ್ಲವೇ?
ಗೋಪಿಕಾ ಸ್ತ್ರೀಯರು ಕೃಷ್ಣನಿಗಾಗಿ ಕಾದರು, ಅವನೊಡನೆ ವೃಂದಾವನದದಲ್ಲಿ ಹೆಜ್ಜೆ ಹಾಕಿ ನಲಿದರು. ಮೇಲ್ನೋಟಕ್ಕೆ ಕಾಮವೆನಿಸಿದರೂ ಇದು ಅಂತರಂಗದಲ್ಲಿನ ಭಕ್ತಿಯ ಪರಾಕಾಷ್ಠೆ. ಕೆಲವರಂತೂ ಅವನಿಗಾಗಿ ಕೆನೆಮೊಸರು, ಬೆಣ್ಣೆಯನ್ನಿರಿಸಿ ಕಾಯ್ದು ಕುಳಿತಿರುತ್ತಿದ್ದರೆಂಬುದು ವಿಶೇಷ. ಮಹಾಭಾರತದ ಮೇರು ಪುರುಷ ಶ್ರೀಕೃಷ್ಣ ನಮ್ಮೆದುರು ಕಾಣುತ್ತಿಲ್ಲವಾದರೂ ಅವನ ಗುಣವಿಶೇಷಗಳು ಇಂದಿಗೂ ಅನುಭವಕ್ಕೆ ಬರುವಂತಹವು. ದೀನದಲಿತರನ್ನು ಸಾಕಿ, ಸಲುಹಿ ಅವರಿಗೆ ನ್ಯಾಯ ಒದಗಿಸುವ ಸಂಘ-ಸಂಸ್ಥೆಗಳು ಉಂಟು. ಪರಸ್ಪರ ವ್ಯಾಜ್ಯ ತಲೆದೋರಿದಾಗ ಅವುಗಳನ್ನು ರಾಜಿ ಮೂಲಕ ಪರಿಹರಿಸುವ ಮಠ ಮಂದಿರಗಳು ಉಂಟು. ಅನ್ನದಾನ, ವಿದ್ಯಾದಾನ, ವಸ್ತ್ರದಾನ ಮಾಡಿ ಜ್ಞಾನ ಅರಳಿಸುವ ಮಹಾನುಭಾವರು ನಮ್ಮ ಎದುರು ಇದ್ದಾರೆ ಎಂಬುದು ಹೆಮ್ಮೆಯ ಸಂಗತಿ.
ಕಲಿಯುಗ ಕಾಲು ಹಾಕಿರಲಿಲ್ಲ. ಅದು ದ್ವಾಪರ ಯುಗ. ಶ್ರೀಕೃಷ್ಣ ಎಂಬ ಮಹಾಪುರುಷ ವಸುದೇವ- ದೇವಕಿಯರಿಗೆ ಮಗನಾಗಿ ಹುಟ್ಟಿದ. ಸೋದರ ಮಾವ ಕಂಸನ ಆಕ್ರೋಶಕ್ಕೆ ಸಿಲುಕದೆ, ಉಳಿದು-ಬೆಳೆದು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ, ಸತ್ಯ-ಧರ್ಮ-ನ್ಯಾಯಗಳನ್ನು ಎತ್ತಿಹಿಡಿದ ಮಹಾನುಭಾವ ಆತ. ಕುರುವಂಶದ ದಾಯಾದಿ ಕಲಹದಲ್ಲಿ ಪಾಂಡವರ ಪರವಾಗಿ ನಿಂತು, ಕುರುಕ್ಷೇತ್ರ ಯುದ್ಧ ತಪ್ಪಿಸುವಲ್ಲಿ ಶಕ್ತಿಮೀರಿ ಶ್ರಮಿಸಿದ್ದು ಸರ್ವವಿದಿತ. ಸಾಮ, ದಾನ, ಭೇದ, ದಂಡ –ಈ ಚತುರೋಪಾಯಗಳನ್ನು ಕಾಲಕಾಲಕ್ಕೆ ಬಳಸಿ ವೈರ ಮರೆತು ಮೈತ್ರಿಗೆ ಹಾತೊರೆದ ಈತ ಅನಿವಾರ್ಯವೆನಿಸಿದರೆ ಸಂಘರ್ಷಕ್ಕೂ ಹುರಿದುಂಬಿಸಿದ್ದು ಸ್ಫಟಿಕದಷ್ಟು ನಿಚ್ಚಳ. ಸೋದರರು ಹೊಡೆದಾಡಬಾರದು, ಅಮಾಯಕ ಜನರು ಸಾಯಬಾರದು, ರಕ್ತದ ಓಕುಳಿ ಹಾಗೂ ಕಣ್ಣೀರು ತಪ್ಪಿಸಬೇಕು ಎಂಬುದು ಕೃಷ್ಣನ ಕಳಕಳಿಯಾಗಿತ್ತು ಎಂಬುದು ನಿಸ್ಸಂದೇಹ.
ಸುಮಾರು 5114 ವರ್ಷಗಳ ಹಿಂದೆ ಕಲಿಯುಗ ಪ್ರಾರಂಭವಾಯಿತಲ್ಲ. ಅದಕ್ಕೂ ಹಿಂದೆ ಹಸ್ತಿನಾಪುರದಲ್ಲಿ ಕುರುವಂಶದ ರಾಜರು ಆಳುತ್ತಿದ್ದರು. ಪಾಂಡುರಾಜ-ಮಾದ್ರಿಯರನ್ನು ಕಳೆದುಕೊಂಡು ಕುಂತೀದೇವಿ ಐವರು ಪುತ್ರರೊಂದಿಗೆ ಬಂದಾಗ ಧೃತರಾಷ್ಟ್ರನ ವ್ಯಾಮೋಹದಿಂದಾಗಿ ಪಾಂಡವರೈವರಿಗೆ ನ್ಯಾಯವಾಗಿ ದಕ್ಕಬೇಕಿದ್ದ ರಾಜ್ಯ, ಸಂಪತ್ತು ದೊರೆಯಲಿಲ್ಲ. ಅಂದಿನಿಂದಲೇ
ಆರಂಭವಾದದ್ದು ಪಾಂಡು ಪುತ್ರರ ಮತ್ತು ಧೃತರಾಷ್ಟ್ರ ಪುತ್ರರ ವೈರ-ಮತ್ಸರ. ಪಾಂಡು ಪುತ್ರರು ಹಠ ಸ್ವಭಾವದವರಲ್ಲ. ಧೃತರಾಷ್ಟ್ರ-ಗಾಂಧಾರಿಯ ಮಕ್ಕಳದ್ದೇ ಅಟ್ಟಹಾಸ. ಧರ್ಮರಾಜ-ಭೀಮ-ಅರ್ಜುನ-ನಕುಲ-ಸಹದೇವರನ್ನು ದೂರ ಇರಿಸುವುದೇ ಅವರ ಕಾಯಕ. ಅರಗಿನ ಮನೆಯಲ್ಲಿ ಸುಟ್ಟು ಹಾಕುವ, ಸಮುದ್ರದಲ್ಲಿ ಭೀಮನನ್ನು ಮುಳುಗಿಸುವ ಹೇಯ ಕೃತ್ಯದಲ್ಲಿ ದುರ್ಯೋಧನ ಮತ್ತು ಅವನ ಮಾವ ಶಕುನಿ ಹೇಸಲಿಲ್ಲ. ಹೇಗೋ ಪಾರಾಗಿ ಉಳಿದ ಕುಂತಿ ಮತ್ತು ಅವಳ ಐವರು ಪುತ್ರರ ಹಿತರಕ್ಷಣೆಗೆ ನಿಂತ ಮಹಾನ್ ವ್ಯಕ್ತಿ ಶ್ರೀಕೃಷ್ಣ. ಪಾಂಡವರ ತಾಯಿ ಕುಂತಿ ಕೃಷ್ಣನ ಸೋದರತ್ತೆ. ತಂದೆ ವಸುದೇವನ ತಂಗಿ. ಪಾಂಡವರ ರಕ್ಷಣೆಗೆ ಕೃಷ್ಣ ನೆಲೆನಿಂತದ್ದು ಪ್ರೀತಿ-ವಾತ್ಸಲ್ಯದ ಪ್ರತೀಕ. ಆನ್ಯಾಯ ಪರಿಹರಿಸುವ ಸಂಕಲ್ಪ.


ಕೃಷ್ಣಾ, ನನ್ನ ಮಕ್ಕಳೈವರ ಭಾರ ನಿನ್ನದು ಎಂಬ ಕುಂತಿದೇವಿಯ ಮಾತಿಗೆ, ಹೌದು, ಅವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ನನ್ನದು ಎಂದು. ಕೃಷ್ಣನ ಈ ಮಾತು ಕುಂತಿಗೆ ಸಮಾಧಾನ ತಂದಿತ್ತು. ಅರ್ಧರಾಜ್ಯ ಕೊಡುವುದು ಒತ್ತಟ್ಟಿಗೆ ಇರಲಿ, ಐದು ಗ್ರಾಮಗಳನ್ನು ಕೊಡು ಎಂಬ ಮಾತಿಗೆ ದುರ್ಯೋಧನ ಮಣಿಯದೆ ಇದ್ದಾಗ, ಸರಿಯಾಗಿ ಅರ್ಧಪಾಲು ಪಾಂಡವರಿಗೆ ಕೊಡಿಸುವಲ್ಲಿ ಕೃಷ್ಣ ಎಲ್ಲ ಪ್ರಯತ್ನ ಮಾಡಿದ್ದು ಸುಳ್ಳಲ್ಲ.
ಈ ಮಧ್ಯೆ ಪಗಡೆಯಾಟದಲ್ಲಿ ಸೋತ ಪಾಂಡವರೈವರ ಪತ್ನಿ ದ್ರೌಪದಿಯ ವಸ್ರ್ತಾಪಹರಣ ಪ್ರಸಂಗದಲ್ಲಿ ಅವಳಿಗೆ ಅಕ್ಷಯಾಂಬರವನ್ನಿತ್ತು ಸಲುಹಿದ ಕೀರ್ತಿ ಕೃಷ್ಣನಿಗೆ ಸಲ್ಲುತ್ತದೆ. ಅದಕ್ಕೂ ಮುನ್ನ ರಾಜಸೂಯ ಯಾಗದಲ್ಲಿ ಕೈಗೆ ಗಾಯವಾದಾಗ, ಕೃಷ್ಣನಿಗೆ ದ್ರೌಪದಿ ತನ್ನ ಪೀತಾಂಬರದ ಒಂದು ಭಾಗವನ್ನು ಹರಿದು ಅವನ ಕೈಗೆ ಕಟ್ಟಿದ್ದಳು. ಆ ವಸ್ತ್ರವನ್ನು ದಯಪಾಲಿಸಿದ ಅಣ್ಣ ಉದಾರಿ ಶ್ರೀಕೃಷ್ಣ.
ಎರಡನೇ ಸಲ ಪಗಡೆಯಾಟದಲ್ಲಿ ಸೋತು ಪಾಂಡವರು ದ್ರೌಪದಿ ಜೊತೆ ವನವಾಸಕ್ಕೆ ತೆರಳಿದಾಗ ಕೃಷ್ಣ ಮಮ್ಮಲ ಮರುಗಿದ. ಕಾಲಕಾಲಕ್ಕೆ ಕಾಡಿಗೆ ತೆರಳಿ, ಅವರಿಗೆ ಮಾರ್ಗದರ್ಶನ ಮಾಡಿದ. ವನವಾಸ-ಅಜ್ಞಾತವಾಸ ಯಶಸ್ವಿಯಾಗಿ ಮುಗಿಸಿಕೊಂಡು ಬಂದ ಪಾಂಡವರಿಗೆ ರಾಜ್ಯ ಕೊಡುವುದಿಲ್ಲ. ಸೂಜಿ ಮೊನೆಯಷ್ಟು ಮಣ್ಣೂ ಕೊಡುವುದಿಲ್ಲ ಎಂಬ ದುರ್ಯೋಧನ, ದುಶ್ಯಾಸನ, ಶಕುನಿ, ಕರ್ಣರ ನುಡಿ ಕರ್ಣಕಠೋರ. ವಿದುರ-ಭೀಷ್ಮಾಚಾರ್ಯ-ದ್ರೋಣರ ಮಾತನ್ನೂ ಈ ಚಾಂಡಾಲ ಚೌಕಡಿಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಪುತ್ರವ್ಯಾಮೋಹದಿಂದ ಕುರುಡ ಧೃತರಾಷ್ಟ್ರ ತೋರಿದ್ದು ಅಸಹಾಯಕತೆ. ಪಾಂಡವರಿಗೆ ಪಾಲು ಕೊಡಿಸುವಲ್ಲಿ ಕೃಷ್ಣ ಮಾಡಿದ ರಾಯಭಾರ, ರಾಜಿಯತ್ನ ಕೌರವರ ಹಠದಿಂದ ಯಶಸ್ವಿಯಾಗಲಿಲ್ಲ. ಯುದ್ಧಮಾಡಿ, ರಾಜ್ಯ ಗೆಲ್ಲಿ ಎಂಬುದು ಕೌರವರ ಉದ್ಧಟತನದ ಮಾತು. ಯುದ್ಧ ಅನಿವಾರ್ಯವಾದಾಗ ಕೃಷ್ಣ ಅರ್ಜುನನ ಸಾರಥಿಯಾಗಿ ಸಲಹಿದ್ದು ಈಗ ಇತಿಹಾಸ.
ಭೀಷ್ಮ-ದ್ರೋಣರು ನನ್ನ ಗುರುಗಳು, ಉಳಿದಂತೆ ಬಂಧು-ಬಾಂಧವರು ಯುದ್ಧಭೂಮಿಯಲ್ಲಿ ನಿಂತಿದ್ದಾರೆ. ಅವರನ್ನು ನಾನು ಕೊಲ್ಲಲಾರೆ. ಆದ್ದರಿಂದ ಯುದ್ಧ ಮಾಡಲಾರೆ ಎಂದು ಧನುರ್ವಿದ್ಯಾ ಪಾರಂಗತ ಅರ್ಜುನನ ಮನವೊಲಿಸಿ ಯುದ್ಧಕ್ಕೆ ಅಣಿ ಮಾಡಿದವನು ಶ್ರೀಕೃಷ್ಣ. ಯುದ್ಧದಲ್ಲಿ ನನ್ನವರು, ತನ್ನವರು ಎಂಬುದಿಲ್ಲ.
ಹದಿನೆಂಟು ದಿನಗಳ ಈ ಮಹಾಭಾರತ ಯುದ್ಧದಲ್ಲಿ ಕೌರವರ ಹನ್ನೊಂದು ಅಕ್ಷೋಹಿಣಿ ಸೈನ್ಯ, ಪಾಂಡವರ ಏಳು ಅಕ್ಷೋಹಿಣಿ ಸೈನ್ಯ ನಾಶವಾದದ್ದು ದುರದೃಷ್ಟ. ಭೀಷ್ಮ-ದ್ರೋಣ-ಕರ್ಣನ ಅವಸಾನದೊಂದಿಗೆ ದುರ್ಯೋಧನ-ದುಶ್ಯಾಸನರ ಸಾವಿನೊಂದಿಗೆ ಪಾಂಡವರಿಗೆ ಒಲಿದವಳು ವಿಜಯಲಕ್ಷ್ಮಿ ಪ್ರತಿಜ್ಞೆ ಮಾಡಿದ್ದಂತೆ ದುಶ್ಯಾಸನನ ರಕ್ತವನ್ನು ಹಚ್ಚಿ ದ್ರೌಪದಿ ಮತ್ತೆ ಮುಡಿ ಕಟ್ಟಿದವನು ಬಲಭೀಮ. ಈ ಯುದ್ಧದಲ್ಲಿ ಅರ್ಜುನನ ಪರಾಕ್ರಮ ಅಸಾಧಾರಣ. ಅಭಿಮನ್ಯು, ಉಪಪಾಂಡವರನ್ನು ಕಳೆದುಕೊಂಡಾಗ ಪಾಂಡವರಿಗೆ, ದ್ರೌಪದಿ-ಸುಭದ್ರೆಗೆ ಆಗುವ ಸಂಕಟ ಅಂತಿಂಥದ್ದಲ್ಲ. ಅಂತೂ ಧರ್ಮ ಯುದ್ಧದಲ್ಲಿ ಪಾಂಡವರನ್ನು ಜಯಿಸಿ, ಧರ್ಮರಾಜನನ್ನು ರಾಜನನ್ನಾಗಿ ಮಾಡಿ ಸಿಂಹಾಸನದಲ್ಲಿ ಕುಳ್ಳಿರಿಸಿ, ಶ್ರೀಕೃಷ್ಣನು ಕುಂತಿಗೆ ನೀಡಿದ ವಚನವನ್ನು ಪರಿಪಾಲಿಸಿದ. ಪಾಂಡವರ ಹಿತಾಸಕ್ತಿ ರಕ್ಷಣೆ ನನ್ನ ಕೆಲಸ ಎಂದು ಆತ ಆಶ್ವಾಸನೆ ನೀಡಿದ್ದ.
ಬಾಲ್ಯದಲ್ಲಾಗಲಿ, ಯೌವ್ವನದಲ್ಲಾಗಲಿ ಶ್ರೀಕೃಷ್ಣನ ರೂಪ ಮನಮೋಹಕ. ಹಲವಾÀರು ದೃಷ್ಟಿಯಲ್ಲಿ ಈತ ಮಾನವನೂ ಹೌದು. ದೇವನೂ ಹೌದು ದೈವೀ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕೃಷ್ಣನ ನಾಲ್ಕು ಕೈಗಳಲ್ಲೂ ಒಂದೊಂದು ಸಾಮಗ್ರಿ. ಇವೆಲ್ಲ ಸಾಮ-ದಾನ-ಬೇದ-ದಂಡಗಳ ಪ್ರತಿರೂಪ. ಯುದ್ಧ ತಪ್ಪಿಸಲು ರಾಯಭಾರ ನಡೆಸಿದಾಗ ಸಾಮೋಪಾಯ ಮೊದಲು ಬಳಸಿದ. ಕಮಲ-ಇದರ ಸಂಕೇತ. ಎರಡನೆಯದು ದಾನೋಪಯ. ಶಂಖ ಇದರ ಸಂಕೇತ. ದುರ್ಯೋಧನ ನೀನೇ ಬಹುಪಾಲು ರಾಜ್ಯ ಇಟ್ಟುಕೋ. ಪಾಂಡವರಿಗೆ ಐದು ಗ್ರಾಮಕೊಟ್ಟುಬಿಡು ಎಂಬಮಾತು ದುರ್ಯೋಧನ ಕೇಳಲಿಲ್ಲ. ಮೂರನೆಯದು ಭೇದೋಪಾಯ . ಗದೆ ಇದರ ಸಂಕೇತ. ಕರ್ಣನನ್ನು ಬರಮಾಡಿಕೊಂಡು, ನೀನು ಕುಂತಿಯ ಹಿರಿಯ ಮಗ, ಪಾಂಡವರ ಬಳಿ ಬಂದುಬಿಡು. ರಾಜ್ಯ ನೀನೇ ಆಳು. ತಾಯಿಯ ಮನಸ್ಸು ನೋಯಿಸಿ ಕೊಲ್ಲದಿರು ಎಂಬ ಕೃಷ್ಣನ ಮಾತಿಗೆ ಬೆಲೆ ಕೊಡಲಿಲ್ಲ ಕರ್ಣ. ಮಾತೃವಾತ್ಸಲ್ಯ ಬಂಧು ಪ್ರೇಮಕ್ಕಿಂತ ಸ್ವಾಮಿ ನಿಷ್ಠೆಯೇ ಅವನಿಗೆ ಮಿಗಿಲಾಯಿತು. ಕೊನೆಗೆ ಉಳಿದದ್ದು ದಂಡೋಪಾಯ. ಅನಿವಾರ್ಯವಾಗಿ ಯುದ್ಧಕ್ಕೆ ಅಣಿಯಾಗಬೇಕಾಯಿತು. ಕುರುಕ್ಷೇತ್ರ ರಣರಂಗದಲ್ಲಿ ಪಾಂಚಜನ್ಯ ಶಂಖನಾದ ಮಾಡಿದ್ದಲ್ಲದೆ, ಭೀಷ್ಮನ ಮೇಲೆ ಸುದರ್ಶನ ಚಕ್ರ ಪ್ರಯೋಗವನ್ನೂ ಮಾಡಿದ ಶ್ರೀಕೃಷ್ಣ.
ಒಟ್ಟಾರೆ ಹಿಂಸಾಚಾರದ-ರಕ್ತದೋಕುಳಿಯ ಸಮರ ಬೇಡ ಎಂಬ ಅವನ ಹಂಬಲ ಫಲಿಸಲಿಲ್ಲ. ನೂರೊಂದು ಮಕ್ಕಳನ್ನು ಕಳೆದುಕೊಂಡ ಗಾಂಧಾರಿಯ ಕರುಳು ಕಿವುಚಿದಂತಾಯ್ತು. ಪಾಂಡವರ ರಕ್ಷಣೆಗೆ ನಿಂತು ನನ್ನ ಮಕ್ಕಳ ಸಾವಿಗೆ ಕಾರಣೀಭೂತನಾದ ಕೃಷ್ಣನ ಮೇಲೆ ಅವಳ ರೊಚ್ಚಿಗೆ ಮಿತಿ ಎಂಬುದಿಲ್ಲ. ಕೃಷ್ಣಾ, ನಿನ್ನ ಯಾದವ ವಂಶ ನಿರ್ನಾಮವಾಗಲಿ ಎಂಬ ಶಾಪ ನೀಡಿ, ಕುಂತಿ-ವಿದುರ-ಧೃತರಾಷ್ಟ್ರನ ಜೊತೆಗೂಡಿ ಕಾಡಿಗೆ ತೆರಳಿದಳು ಗಾÀಂಧಾರ ಮನೆತನದ ಗಾಂಧಾರಿ.
ಕುಂತಿಯ ಹಾಗೆಯೇ ಮಹಾನ್ ಸಾಧ್ವಿ ಗಾಂಧಾರಿ. ಅವಳ ಶಾಪ ಹೇಗೆ ಸುಳ್ಳಾದೀತು? ಕೃಷ್ಣನೂ ಯುದ್ಧ-ಸಾವು-ನೋವುಗಳಿಂದ ತತ್ತರಿಸಿದ. ಅಣ್ಣ ಬಲರಾಮನನ್ನು ಕಳೆದುಕೊಂಡಿದ್ದ ಆತ, “ನಾನೂ ನಿರ್ಯಾಣಕ್ಕೆ ತಯಾರು” ಎಂದು ಗಿಡದ ಕೆಳಗೆ ಕುಳಿತುಕೊಂಡ. ಬೇಟೆಗಾರ ಹೂಡಿದ ಬಾಣ ಇವನ ಕಾಲಿಗೆ ತಗುಲಿದ್ದೇ ನೆಪವಾಗಿ ಶ್ರೀಕೃಷ್ಣ ತನ್ನ ಅವತಾರ ಮುಗಿಸಿದ. ಕೊನೆಗಾಲದಲ್ಲಿ ಅರ್ಜುನನ್ನೂ ನೋಡಲು ಸಾಧ್ಯವಾಗಲಿಲ್ಲ.

ಒಂದು ನೂರ ಇಪ್ಪತ್ತೈದು ವರ್ಷ ಬಾಳಿ ಬದುಕಿದ ಶ್ರೀಕೃಷ್ಣ ದೇವರು ಎಂಬುವುದಕ್ಕಿಂತ ಮಹಾನ್ ಮಾನವ ಎಂಬುದು ಸೂಕ್ತವಾದೀತು. ದೇವರೇ ಆಗಿದ್ದಲ್ಲಿ ಪಾಂಡವರು ಪಗಡೆಯಾಟದಲ್ಲಿ ಸೋಲುವುದನ್ನು ತಪ್ಪಿಸಬಹುದಿತ್ತು. ದ್ರೌಪದಿ ಮಾನಭಂಗದ ಪ್ರಸಂಗ ತಪ್ಪಿಸಲು ಸಾಧ್ಯವಿತ್ತು. ಯುದ್ಧವನ್ನೂ ತಪ್ಪಿಸಬಹುದಿತ್ತು. ಅವನದ್ದು ವರ್ಣರಂಜಿತ ವ್ಯಕ್ತಿತ್ವ. ಮಹಾನ್ ರಸಿಕ. ಯುಕ್ತಿಗಾರ, ತಂತ್ರಗಾರ, ಇಷ್ಟೆಲ್ಲಾ ಆದರೂ ದೂರ್ವಾಸರ ಶಾಪದಂತೆ ಯಾದವರು ಮದ್ಯ ಕುಡಿದು ಹೊಡೆದಾಡಿ, ಬಡಿದಾಡಿ, ತಮ್ಮ ವಂಶ ನಾಶವಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ವಸುದೇವಸುತಂ ದೇವಂ ಕಂಸಚಾಣೂರ ಮರ್ದನಂ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||
ವಸುದೇವರ ಮಗನಾದ, ಸದಾ ದೇವಕಿಗೆ ಪರಮಾನಂದವನ್ನು ಕೊಡುವ,
ಕಂಸ ಚಾಣೂರರನ್ನು ನಾಶ ಮಾಡಿದ, ಜಗತ್ತಿನ ಗುರುವಾದ ಕೃಷ್ಣನಿಗೆ ನಮಿಸುವೆನು.

ಯಾದವ ಕುಲದವರು ತಮ್ಮ ತಮ್ಮಲ್ಲಿ ಹೊಡೆದಾಡಿ-ಮದ್ಯಪಾನ ಮಾಡಿ ಮಣ್ಣುಪಾಲಾದ, ಹಾಗೆಯೇ ಕಲಿಯುಗದಲ್ಲಿ ಕೆಲ ರಾಜಕಾರಣಿಗಳು ಪರಸ್ಪರ ಪ್ರತಿಷ್ಟೆಗೆ ಅಂಟಿಕೊಂಡು, ಅಪರೂಪಕ್ಕೆ ಕೈಗೆ ಬಂದಿದ್ದ ಅಧಿಕಾರದ ಚುಕ್ಕಾಣಿ ಕಳೆದುಕೊಡ ನಿದರ್ಶನ ನಮ್ಮೆದುರು ಇದೆ.
ಶ್ರೀಕೃಷ್ಣನ ಮಾನವೀಯ ತತ್ವಾದರ್ಶ ಅಳವಡಿಸಿಕೊಡು ಪರಸ್ಪರ ಒಳಿತು-ಅಭಿವೃದ್ಧಿಗೆ ಶ್ರಮಿಸುತ್ತ ಕುಟುಂಬದ, ಸಮಾಜದ, ರಾಜ್ಯದ, ರಾಷ್ಟ್ರದ ತನ್ಮೂಲಕ ಜಗತ್ತಿನ ಶ್ರೇಯಸ್ಸಿಗೆ ಮುಂದಾಗುವ ಮನಸ್ಸು ನಮ್ಮದಾದರೆ ಸಾಕು. ಅಂತಹ ಸಮೃದ್ಧಿಯನ್ನು ಶ್ರೀಕೃಷ್ಣ ಮನುಕುಲಕ್ಕೆ ಕೊಡಬೇಕು.

ತಾಜಾ ಸುದ್ದಿಗಳು