ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

ಆಡಿಯೋ ಜೊತೆಗೆ ರಿಲೀಸ್ ಆಯ್ತು ಮುನಿರತ್ನ ಕುರುಕ್ಷೇತ್ರ ಟ್ರೈಲರ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಸೇರಿದಂತೆ ಪ್ರೇಕ್ಷಕರೆಲ್ಲ ಕುರುಕ್ಷೇತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಗಾಗಿ ಬಹು ದಿನಗಳಿಂದ ಕಾದು ಕೂತಿದ್ದರು. ಈ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋದಾಗೆಲ್ಲ ಆವರಿಸಿಕೊಳ್ಳುತ್ತಿದ್ದ ನಿರಾಸೆಯೂ, ದಿನ ಕಳೆಯುತ್ತಲೇ ನಿರೀಕ್ಷೆಯಾಗಿ ಪುಟಿದೇಳುತ್ತಿದ್ದದ್ದು ಕುರುಕ್ಷೇತ್ರದತ್ತ ಎಂಥಾ ಕ್ರೇಜ್ ಇದೆ ಎಂಬುದರ ಸ್ಪಷ್ಟ ಸೂಚನೆ ಎಂದರೂ ತಪ್ಪೇನಿಲ್ಲ. ಆದರೀಗ ಅಂಥಾ ನಿರೀಕ್ಷೆಗಳೆಲ್ಲ ತಣಿದಿವೆ. ಆಡಿಯೋ ಜೊತೆಗೆ ಕುರುಕ್ಷೇತ್ರದ ಕನ್ನಡಿಯಂತಿರೋ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ.

ಮುನಿರತ್ನ ನಿರ್ಮಾಣದಲ್ಲಿ ಮೂಡಿ ಬಂದಿರೋ ಮಹತ್ವಾಕಾಂಕ್ಷೆಯ ಚಿತ್ರ ಮುನಿರತ್ನ ಕುರುಕ್ಷೇತ್ರ. ಇದೀಗ ಕೋರಮಂಗಲದ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಅದ್ಧೂರಿ ಸಮಾರಂಭದ ಮೂಲಕ ಪ್ರೇಕ್ಷಕರಿಗೆ ಬೋನಸ್ ಎಂಬಂತೆ ಟ್ರೈಲರ್ ಕೂಡಾ ಬಿಡುಗಡೆಯಾಗಿದೆ. ಕುರುಕ್ಷೇತ್ರದ ಬಗ್ಗೆ ಯಾವ ಮಟ್ಟಕ್ಕೆ ಕ್ರೇಜ್ ಇದೆ ಎಂಬುದಕ್ಕೆ ಈ ಟ್ರೈಲರ್ ಬಿಡುಗಡೆಯಾಗಿ ಕ್ಷಣಾರ್ಧದಲ್ಲಿಯೇ ಯೂಟ್ಯೂಬ್‍ನಲ್ಲಿ ಸಿಕ್ಕ ವೀಕ್ಷಣೆಯೇ ಸಾಕ್ಷಿ. 24 ಗಂಟೆ ಕಳೆಯುವ ಮುನ್ನವೇ ಈ ಟ್ರೈಲರ್ ವೀಕ್ಷಣೆ 10 ಲಕ್ಷದ ಗಡಿಯತ್ತ ದಾಪುಗಾಲಿಟ್ಟಿದ್ದು, ಆ ಸಂಖ್ಯೆ ವೇಗವಾಗಿ ಏರಿಕೊಳ್ಳುತ್ತಲೇ ಇದೆ.

ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲಿಯೂ ತಯಾರಾಗಿರೋ ಕುರುಕ್ಷೇತ್ರದ ಬಿಡುಗಡೆಗೀಗ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಿನಲ್ಲಿ ಬಿಡುಗಡೆಯಾಗಿರೋ ಈ ಟ್ರೈಲರ್ ದರ್ಶನ್ ದುಯೋರ್ಧನನಾಗಿ ಗದೆ ಹಿಡಿದು ಅಬ್ಬರಿಸೋದೂ ಸೇರಿದಂತೆ ಒಂದಷ್ಟು ಪಾತ್ರಗಳ ಖದರಿನ ಝಲಕ್‍ಗಳನ್ನು ಅನಾವರಣಗೊಳಿಸಿದೆ. ಇದನ್ನು ಕಂಡು ಪ್ರೇಕ್ಷಕರೂ ಕೂಡಾ ಖುಷಿಗೊಂಡಿದ್ದಾರೆ. ಈ ಮೂಲಕ ಆಡಿಯೋ ಬಿಡುಗಡೆಯ ಘಳಿಗೆಯಲ್ಲಿಯೇ ಟ್ರೈಲರ್ ಮೂಲಕವೂ ಕುರುಕ್ಷೇತ್ರ ಭಾರೀ ಸದ್ದು ಶುರುವಿಟ್ಟಿದೆ.

ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಐವತ್ತನೇ ಚಿತ್ರ. ಈ ಕಾರಣದಿಂದಲೇ ದರ್ಶನ್ ಅಭಿಮಾನಿಗಳೂ ಈ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಗಮನವನ್ನೂ ತನ್ನತ್ತ ಸೆಳೆದುಕೊಂಡಿರೋ ಕುರುಕ್ಷೇತ್ರ ನಿರ್ಮಾಪಕ ಮುನಿರತ್ನ ತೆಗೆದುಕೊಂಡಿರೋ ದೊಡ್ಡ ಮಟ್ಟದ ಚಾಲೆಂಜ್. ಅದನ್ನವರು ಅಷ್ಟೇ ಶ್ರದ್ಧೆಯಿಂದಲೂ ರೂಪಿಸಿದ್ದಾರೆ. ಅಷ್ಟೇ ದೊಡ್ಡ ತಾರಾಗಣವನ್ನೂ ಕುರುಕ್ಷೇತ್ರ ಹೊಂದಿದೆ. ಅಂಬರೀಷ್, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿ ಕುಮಾರ್, ಅರ್ಜುನ್ ಸರ್ಜಾ, ಸೋನು ಸೂದ್, ಭಾರತಿ ವಿಷ್ಣುವರ್ಧನ್, ಸ್ನೇಹಾ, ಹರಿಪ್ರಿಯಾ, ಮೇಘನಾ ರಾಜ್, ನಿಖಿಲ್ ಸೇರಿದಂತೆ ಬಹುದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

ತಾಜಾ ಸುದ್ದಿಗಳು