ಹಾಸನಕ್ಕೆ ಮಹಾನಗರಪಾಲಿಕೆ ಯೋಗ

ಹಾಸನಕ್ಕೆ ಮಹಾನಗರಪಾಲಿಕೆ ಯೋಗ

ಹಾಸನ: ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಬೇಕು ಎನ್ನುವ ಸಚಿವ ಎಚ್.ಡಿ.ರೇವಣ್ಣ ಅವರ ಕನಸು ನನಸಾಗುವ ಕಾಲ ಸಮೀಪಿಸಿದ್ದು, ಈ ಸಂಬಂಧ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆ ಜಂಟಿಯಾಗಿ ಪ್ರಸ್ತಾವನೆ ಸಿದ್ಧಪಡಿಸಿವೆ.

ನಗರದ ಎಂಟು ಕಿ.ಮೀ. ಸುತ್ತಳತೆ ವ್ಯಾಪ್ತಿಯ 11 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡ ಮಹಾನಗರ ಪಾಲಿಕೆ ಸ್ಥಾಪನೆ ಸಂಬಂಧ ನಗರಸಭೆಯಿಂದ ಶೀಘ್ರದಲ್ಲೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಕೆಯಾಗಲಿದ್ದು, ನಂತರ ಸರ್ಕಾರದ ಒಪ್ಪಿಗೆಯಷ್ಟೆ ಬಾಕಿ ಉಳಿಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ 2007ರಲ್ಲಿಯೇ ಇಂತಹ ಪ್ರಯತ್ನ ಆರಂಭಿಸುವ ಸೂಚನೆ ನೀಡಿದ್ದರು. ಅದಕ್ಕೆ ತಕ್ಕಂತೆ ನಗರಕ್ಕೆ ಹೊರ ವರ್ತುಲ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧೀನ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೆ ಸಿಕ್ಕಿತ್ತು. ಆದರೆ ಅಷ್ಟರಲ್ಲಿಯೇ ಸರ್ಕಾರ ಬದಲಾದ್ದರಿಂದ 12 ವರ್ಷಗಳಿಂದ ಆ ವಿಷಯ ನನೆಗುದಿಗೆ ಬಿದ್ದಿತ್ತು.

ಈಗ ಮತ್ತೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಚ್.ಡಿ.ರೇವಣ್ಣ, ಹಾಸನ ನಗರವನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಬೇಕಾದ ಕ್ರಮಕೈಗೊಳ್ಳುತ್ತಿದ್ದು, ಪ್ರಥಮ ಹಂತವಾಗಿ ಹುಡಾ ಹಾಗೂ ನಗರಸಭೆಯಿಂದ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಹುಡಾ ಸಮೀಕ್ಷೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿದೆ. ಮಹಾನಗರ ಪಾಲಿಕೆ ಸ್ಥಾಪನೆಗೆ ಅಗತ್ಯವಾದ ಜನಸಂಖ್ಯೆಯ ಲೆಕ್ಕ ಸರಿದೂಗಿಸಲು 11 ಗ್ರಾಪಂಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲು ಯೋಜಿಸಲಾಗಿದೆ. ಇದರಿಂದ ಜನಸಂಖ್ಯೆ 3 ಲಕ್ಷ ದಾಟಲಿದ್ದು, ಎಲ್ಲ ನಿಯಮಗಳೂ ಪಾಲನೆಯಾದಂತಾಗಲಿದೆ.

ಪಾಲಿಕೆ ವ್ಯಾಪ್ತಿಗೆ ಸೇರಲಿರುವ 36 ಗ್ರಾಮಗಳು: ರಾಜ್ಯದ 2ನೇ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಕೀರ್ತಿ ಹೊಂದಿರುವ ನಗರದ ಭಾಗವೇ ಆಗಿರುವ ಸತ್ಯಮಂಗಳ ಗ್ರಾಪಂ ವ್ಯಾಪ್ತಿಯ ವಿದ್ಯಾನಗರ, ವಿವೇಕನಗರ, ಸತ್ಯಮಂಗಲ ಗ್ರಾಮ, ರಾಘವೇಂದ್ರ ಕಾಲನಿ, ಹರಹಳ್ಳಿ ಗ್ರಾಪಂ ವ್ಯಾಪ್ತಿಯ ಹರಳಹಳ್ಳಿ, ಚಿಕ್ಕಹೊನ್ನೇನಹಳ್ಳಿ, ಜಯನಗರ ಬಡಾವಣೆ, ತೇಜೂರು ಗ್ರಾಪಂ ವ್ಯಾಪ್ತಿಯ ತೇಜೂರು, ತಮ್ಲಾಪುರ, ಚಿಕ್ಕಕೊಂಡಗೊಳ, ಮಾವಿನಹಳ್ಳಿ, ಬಿ.ಕಾಟೀಹಳ್ಳಿ ಗ್ರಾಪಂ ವ್ಯಾಪ್ತಿಯ ಬಿ.ಕಾಟೀಹಳ್ಳಿ, ದೊಡ್ಡಪುರ, ಸಂಕೇನಹಳ್ಳಿ, ಬೂವನಹಳ್ಳಿ ಗ್ರಾಪಂ ವ್ಯಾಪ್ತಿ ಬೂವನಹಳ್ಳಿ, ಗವೇನಹಳ್ಳಿ, ಬುಸ್ತೇನಹಳ್ಳಿ, ಮಣಚನಹಳ್ಳಿ ಗ್ರಾಪಂ ವ್ಯಾಪ್ತಿಯ ವಿಜಯನಗರ ಬಡಾವಣೆ 1ಮತ್ತು 2ನೇ ಹಂತ, ಮಣಚನಹಳ್ಳಿ, ಗುಡ್ಡೇನಹಳ್ಳಿ, ಗುಡ್ಡೇನಹಳ್ಳಿ ಕೊಪ್ಪಲು, ಹಂದಿನಕೆರೆ, ಕಂದಲಿ ಗ್ರಾಪಂ ವ್ಯಾಪ್ತಿಯ ಚಿಕ್ಕಮಂಡಿಗನಹಳ್ಳಿ, ದೇವರಾಯಪಟ್ಟಣ, ಕಂದಲಿ, ಈಚಲಹಳ್ಳಿ, ಎತ್ತಿನಕಟ್ಟೆ. ತಟ್ಟೆಕೆರೆ ಪಂಚಾಯಿತಿ ವ್ಯಾಪ್ತಿಯ ಬಿಟ್ಟಗೌಡನಹಳ್ಳಿ, ತಟ್ಟೇಕೆರೆ, ನಾರಿಹಳ್ಳಿ, ನಾರಿಹಳ್ಳಿ ಕೊಪ್ಪಲು, ಹುಲ್ಲೇನಹಳ್ಳಿ, ದೊಡ್ಡಗೇಣಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೇಕರವಳ್ಳಿ, ಕೆಂಚಟ್ಟನಹಳ್ಳಿ, ಕಸ್ತೂರವಳ್ಳಿ, ಗೆಂಡೆಕಟ್ಟೆ ಕಾವಲು, ಸಮುದ್ರವಳ್ಳಿ. ಹನುಮಂತಪುರ ಗ್ರಾಪಂ ವ್ಯಾಪ್ತಿಯ ಹನುಮಂತಪುರ, ಸಂಕಲಾಪುರ, ಕೊಕ್ಕನಘಟ್ಟ, ನಾಗನಹಳ್ಳಿ, ಹೂವಿನಹಳ್ಳಿ ಕಾವಲು ಗ್ರಾಪಂ ವ್ಯಾಪ್ತಿಯ ಹೂವಿನಹಳ್ಳಿ, ಹೂವಿನಹಳ್ಳಿ ಕಾವಲು, ಉದ್ದೂರು, ಮ್ಯಾಕ್ಸ್‌ವರ್ತ್ ವಸತಿ ಬಡಾವಣೆ.

ಗ್ರಾಮಗಳನ್ನು ಬೆಸೆಯುವ ಹೊರ ವರ್ತುಲ ರಸ್ತೆ: ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡಿಸಲು ಉದ್ದೇಶಿಸಿರುವ ಗ್ರಾಮಗಳನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಹೊರ ವರ್ತುಲ ರಸ್ತೆ ಬೆಸೆಯಲಿದೆ. ನಗರದ ಕೇಂದ್ರದಿಂದ 8 ಕಿಮೀ. ಸುತ್ತಳತೆಯಲ್ಲಿ ಈ ರಸ್ತೆ ನಿರ್ಮಾಣವಾದರೆ ಅದರ ಇಕ್ಕೆಲೆಗಳಲ್ಲಿ ಬಡಾವಣೆಗಳ ಬೆಳವಣಿಗೆಯೂ ವೇಗ ಪಡೆದುಕೊಳ್ಳಲಿದೆ.

ಈಗಾಗಲೇ ನಿವೇಶನ ಹಂಚಿಕೆಯಾಗಿರುವ ಎಸ್.ಎಂ.ಕೃಷ್ಣ ಬಡಾವಣೆ ಮಾತ್ರವಲ್ಲದೆ ಉದ್ದೂರು, ತೇಜೂರು, ಸತ್ಯಮಂಗಲ ವ್ಯಾಪ್ತಿಯಲ್ಲಿ ಹಲವು ಖಾಸಗಿ ಡೆವಲಪರ್‌ಗಳು ವಸತಿ ಬಡಾವಣೆಗಳನ್ನು ನಿರ್ಮಿಸಿದ್ದು, ಮಹಾನಗರ ಪಾಲಿಕೆ ಸ್ಥಾಪನೆಯಾದರೆ ಅಲ್ಲಿನ ನಿವಾಸಿಗಳ ಸಂಖ್ಯೆಯೂ ಹೆಚ್ಚಲಿದೆ. ಏರ್‌ಪೋರ್ಟ್ ನಿರ್ಮಾಣವಾದರೆ ಬೂವನಹಳ್ಳಿ ಸುತ್ತಮುತ್ತನ ಆರ್ಥಿಕ ಚಟುವಟಿಕೆಗಳು ಗರಿಗೆದರಲಿದ್ದು, ಅಲ್ಲಿನ ಬೆಳವಣಿಗೆ ಮಹಾನಗರ ಪಾಲಿಕೆ ಸ್ಥಾಪನೆಗೆ ಪೂರಕವಾಗಲಿವೆ ಎನ್ನುವ ಲೆಕ್ಕಾಚಾರ ನಡೆದಿದೆ.

ಸಂಪುಟ ಸಭೆಯಲ್ಲಿ ಒಪ್ಪಿಗೆ ಸಾಧ್ಯತೆ: ರಾಜ್ಯ ಸರ್ಕಾರದಲ್ಲಿ ತಮಗೆ ಬೇಕಾದ ಕೆಲಸವನ್ನು ತಟ್ಟನೆ ಮಾಡಿಸಿಕೊಳ್ಳಬಲ್ಲ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ, ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಗೆ ಮುಂದಿನ ಸಚಿವ ಸಂಪುಟದಲ್ಲಿಯೇ ಒಪ್ಪಿಗೆ ಕೊಡಿಸುವ ಉತ್ಸಾಹದಲ್ಲಿದ್ದಾರೆ ಎನ್ನಲಾಗಿದೆ. ಹಾಗಾದ ಪಕ್ಷದಲ್ಲಿ ಶೀಘ್ರವೇ ಹಾಸನ ಮಹಾನಗರ ಪಾಲಿಕೆಯಾಗಲಿದೆ.

ಹಾಸನ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಸಂಬಂಧ ಪ್ರಸ್ತಾವನೆ ಸಿದ್ಧವಾಗಿದೆ. ಅದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಅವರ ಅವಗಾಹನೆಗೆ ತಂದು ಅವರು ಪರಿಶೀಲಿಸಿದ ನಂತರ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು.
ಬಿ.ಎ.ಪರಮೇಶ್ ನಗರಸಭೆ ಆಯುಕ್ತ

ತಾಜಾ ಸುದ್ದಿಗಳು