ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಕಾಫಿಗೆ ಬಂತು ಕೊಳೆರೋಗ ಭೀತಿ !

ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ಕಾಫಿಗೆ ಬಂತು ಕೊಳೆರೋಗ ಭೀತಿ !

ಕಾಫಿಯಲ್ಲಿ ಕಂಡು ಬರುವ ಅಕಾಲಿಕ ಕಾಫಿ ಉದುರುವಿಕೆ, ಕೊಳೆ ರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯನ್ನು ತಡೆಗಟ್ಟಲು ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸರಿಸಬೇಕು ಎಂದು ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ. ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಸಾಕಷ್ಟು ಕಾಫಿ ಬೆಳೆ ನಾಶವಾಗಿದೆ. ಅದರ ಜತೆಗೆ ಕಾಫಿಗೆ ಕೊಳೆ ರೋಗವು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇರುವ ಕಾಫಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಕಷ್ಟಪಡುತ್ತಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಕಾಫಿ ಬೆಳೆಯುವ ಎಲ್ಲಾ ಪ್ರದೇಶಗಳಲ್ಲಿ ಉತ್ತಮವಾದ ಹೂಮಳೆ, ಹಿಮ್ಮಳೆ ಹಾಗೂ ಸಮೃದ್ದವಾದ ನೈರುತ್ಯ ಮುಂಗಾರು ಮಳೆಯಿಂದಾಗಿ ಎಲ್ಲೆಡೆಯು ಉತ್ತಮ ಕಾಫಿ ಬೆಳೆ ಕಂಡುಬಂದಿದೆ.

ಆದರೆ, ಕಳೆದ ಒಂದು ತಿಂಗಳಿಂದ ಕರ್ನಾಟಕದ ಚಿಕ್ಕಮಗಳೂರು, ಕೊಡಗು, ಸಕಲೇಶಪುರ ವಲಯಗಳಲ್ಲಿ, ಕೇರಳದ ಮಲೆನಾಡು ವಲಯದಲ್ಲಿ ಎಡಬಿಡದೆ ಸುರಿಯುತ್ತಿದ್ದು, 10 ವರ್ಷಗಳ ಸರಾಸರಿ ಮಳೆಗೆ ಹೋಲಿಸಿದರೆ ಆಗಸ್ಟ್ ಮೊದಲೆನೇ ವಾರದವರೆಗೆ ಶೇಕಡ 33 ರಿಂದ 63 ರಷ್ಟು ಹೆಚ್ಚಾಗಿದೆ. ಈ ಮಳೆಯಿಂದ ಕಡಿಮೆ ತಾಪಮಾನ ಉಂಟಾಗಿ, ಮಣ್ಣಿನಲ್ಲಿನ ತೇವಾಂಶ , ವಾತಾವರಣದಲ್ಲಿನ ಆದ್ರತೆ ಹೆಚ್ಚಾಗಿ ದೀರ್ಘಕಾಲದವರೆಗೆ ಎಲೆಗಳ ಮೇಲೆ ತೇವಾಂಶ ಉಳಿದಿರುವುದು ಕಂಡುಬಂದಿರುತ್ತದೆ.

ಈ ವಾತಾವರಣವು ಇನ್ನೂ ಮುಂದುವರೆಯುವ ಲಕ್ಷಣವಿದೆ. ಈ ವ್ಯತಿರಿಕ್ತ ವಾತಾವರಣದಿಂದ ಅಕಾಲಿಕ ಕಾಫಿ ಉದುರುವಿಕೆ, ಕೊಳೆ ರೋಗ ಮತ್ತು ಕಾಫಿ ತೊಟ್ಟು ಕೊಳೆಯುವಿಕೆಯು ಅರೇಬಿಕಾ ಮತ್ತು ರೋಬಸ್ಟಾ ಕಾಫಿಯಲ್ಲಿ ಕಂಡುಬಂದಿರುತ್ತದೆ.ಆದ್ದರಿಂದ ಕಾಫಿ ಬೆಳೆಗಾರರು ಕೆಳಗಿನ ಮುಂಜಾಗ್ರತ ಕ್ರಮಗಳನ್ನು ಅನುಸರಿಸಬೇಕಾಗಿದೆ. ಕಾಫಿ ಗಿಡಗಳ ಕೆಳಗೆ ಬಿದ್ದಿರುವ ದರಗುಗಳನ್ನು ನಾಲ್ಕು ಕಾಫಿ ಗಿಡಗಳ ಮಧ್ಯದಲ್ಲಿ ರಾಶಿಮಾಡಿ ಗಾಳಿಯಾಡುವಂತೆ ಅನುಕೂಲ ಮಾಡುವುದು, ಚರಂಡಿ ಹಾಗೂ ತೊಟ್ಟಿಲು ಗುಂಡಿಗಳನ್ನು ಸೋಸಿ ಹೆಚ್ಚುವರಿ ನೀರನ್ನು ಬಸಿದು ಹೋಗುವಂತೆ ಮಾಡುವುದು. ಕೊಳೆ ರೋಗಕ್ಕೆ ತುತ್ತಾದ ತಾಕಿನಲ್ಲಿ ರುವ ಎಲೆಗಳು, ಕಾಯಿಗಳನ್ನು ತೆಗೆದು ನಾಶ ಪಡಿಸುವುದು ಅಥವಾ ಮಣ್ಣಿನಲ್ಲಿ ಹೂಳುವುದು. ರೋಗ ಪೀಡಿತ ಎಲೆಗಳು ಮತ್ತು ಕಾಯಿಗಳನ್ನು ತೆಗೆದ ನಂತರ, ಪ್ರತೀ ಬ್ಯಾರೆಲ್ ಗೆ (200ಲೀಟರ್) 120ಗ್ರಾಂ ಕಾಬ್9ನ್ ಡೈಜಿಮ್ 50ಡಬ್ಲ್ಯೂಪಿ ಯನ್ನು ಯಾವುದಾದರು ಅಂಟು ದ್ರಾವಣ ಜೊತೆಗೆ, ಮಳೆ ಬಿಡುವಿನ ಸಮಯದಲ್ಲಿ ಸಿಂಪಡಿಸುವುದು. ಗಿಡಗಳ ಬೇರಿನ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು, ಪ್ರತೀ ಎಕರೆಗೆ ಒಂದು ಚೀಲ (50ಕೆಜಿ) ಯೂರಿಯಾವನ್ನು ಮಳೆ ಬಿಡುವಿನ ಸಮಯದಲ್ಲಿ ಹಾಕುವುದು ಎಂದು ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಳು