ರಾಷ್ಟ್ರೀಯ ಕ್ರೀಡಾ ದಿನಾಚರಣೆ ಧ್ಯಾನ್ ಚಂದ್ ದೇಶದ ಹೆಮ್ಮೆಯ ಪುತ್ರ

ರಾಷ್ಟ್ರೀಯ ಕ್ರೀಡಾ  ದಿನಾಚರಣೆ ಧ್ಯಾನ್ ಚಂದ್ ದೇಶದ ಹೆಮ್ಮೆಯ ಪುತ್ರ

– ಕೆ. ಎಂ ಇಸ್ಮಾಯಿಲ್ ಕಂಡಕರೆ

ಅಮರೇಶ ಗೌತಮ್ ಮರಸೂರು, ಆನೇಕಲ್ಮೇಜರ್ ಧ್ಯಾನ್ ಚಂದ್‌ರ ಜನ್ಮದಿನವಾದ ಆಗಸ್ಟ್ 29ನ್ನು ರಾಷ್ಟ್ರೀಯ ಕ್ರೀಡಾ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಧ್ಯಾನ್ ಚಂದ್ ಅಪ್ಪಟ ದೇಶಭಕ್ತ, ಅಪ್ರತಿಮ ಹಾಕಿ ಆಟಗಾರ, ಸ್ವಾತಂತ್ರ್ಯ ಬರುವುದಕ್ಕಿಂತ ಮುಂಚೆಯೇ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಮೂರು ಬಾರಿ ಅಂದರೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್‌ಗಳನ್ನು ತಂದು ಕೊಟ್ಟ ದೇಶದ ಹೆಮ್ಮೆಯ ಪುತ್ರ.

ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಧ್ಯಾನ್‌ಚಂದ್, ಕುಸ್ತಿಯಲ್ಲಿ ಯಾವಾಗಲೂ ಮಗ್ನರಾಗಿರುತ್ತಿದ್ದರು. ಆದರೆ ಅವರನ್ನು ಒಬ್ಬ ಪ್ರಸಿದ್ಧ ಕ್ರೀಡಾಪಟು ಅಂತ ಮಾಡಿದ್ದು ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿ.1922ರಲ್ಲಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿಯೇ ಭಾರತೀಯ ಸೈನ್ಯಕ್ಕೆ ಸೇರಿದ್ದಾರೆ.ಆ ಸಂದರ್ಭದಲ್ಲಿ ಭಾರತೀಯ ಸೈನ್ಯಗಳ ವಿವಿಧ ರೆಜಿಮೇಂಟ್‌ಗಳ ನಡುವೆ ಹಾಕಿಯ ಸ್ನೇಹಪರವಾದ ಟೂರ್ನಿಗಳನ್ನು ಪ್ರತೀ ವರ್ಷ ಆಯೋಜಿಸುತ್ತಿದ್ದರು. ಆಗ ಪಂಜಾಬ್‌ನ ಹದಿನಾಲ್ಕನೇ ರೆಜಿಮೇಂಟ್‌ನ ಪರವಾಗಿ ಆಡುತ್ತಿದ್ದ ಇವರ ಆಟದ ಸೊಬಗು, ನಿಖರತೆ, ವೈಶಿಷ್ಟ್ಯತೆ, ಹಾಗೂ ಶ್ರದ್ದೆಯನ್ನು ಕಂಡು 1926ರಲ್ಲಿ ಭಾರತೀಯ ಹಾಕಿ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ.1928ರಲ್ಲಿ ನೆದರ್‌ಲ್ಯಾಂಡ್‌ನ ಅಮ್‌ಸ್ಟರ್‌ಡಮ್‌ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್, 1932ರಲ್ಲಿ ಅಮೆರಿಕದ ಲಾಸ್ ಎಂಜಲೀಸ್ ಮತ್ತು 1936ರಲ್ಲಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಒಲಿಂಪಿಕ್ಸ್, ಹೀಗೆ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಗೋಲ್ಡ್ ಮೆಡಲ್‌ಗಳನ್ನು ತಂದು ಕೊಟ್ಟರು.

1936ರಲ್ಲಿ ನಡೆದ ಬರ್ಲಿನ್ ಒಲಿಂಪಿಕ್‌ನಲ್ಲಿ ಹಾಕಿಯಲ್ಲಿ ಭಾರತ ಮತ್ತು ಜರ್ಮನಿ ಫೈನಲ್ ಗೆ ಬಂದಾಗ ಆಟವನ್ನು ಖುದ್ದು ನೋಡಲು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಬಂದಿದ್ದರು. ಧ್ಯಾನ್ ಚಂದ್‌ರ ಆಟವನ್ನು ನೋಡಿದ ಹಿಟ್ಲರ್, ‘‘ಧ್ಯಾನ್ ಚಂದ್‌ರಕೈಯಲ್ಲಿ ಇರುವುದು ಹಾಕಿ ದಂಡವೋ, ಅಥವಾ ಮಂತ್ರ ದಂಡವೋ?’’ ಎಂದು ಉದ್ಗರಿಸುತ್ತಾರೆ. ಆ ಪಂದ್ಯವನ್ನು ಭಾರತ 81 ಗೋಲುಗಳಿಂದ ಜಯಗಳಿಸುತ್ತದೆ. ಪಂದ್ಯ ಮುಗಿದ ನಂತರ ಹಿಟ್ಲರ್ ಖುದ್ದಾಗಿ ಧ್ಯಾನ್ ಚಂದ್‌ರನ್ನು ಭೇಟಿ ಮಾಡಿ ‘‘ನೀನು ನನ್ನ ದೇಶದ ಪರವಾಗಿ ಆಡುವುದಾದರೆ ನಿನಗೆ ಸಕಲ ಸವಲತ್ತುಗಳನ್ನು ಬಳುವಳಿಯಾಗಿ ನೋಡುತ್ತೇನೆ’’ ಎಂದಾಗ ಧ್ಯಾನ್ ಚಂದ್‌ರು ನಮ್ರತೆಯಿಂದ ತಿರಸ್ಕರಿಸಿ ‘‘ನಾನು ಭಾರತೀಯನಾಗಿರುವುದಕ್ಕೆ ಹೆಮ್ಮೆ ಇದೆ’’ ಎಂದುದೇಶಪ್ರೇಮವನ್ನು ಸಾರುತ್ತಾರೆ.1926 ರಿಂದ 1948ರ ವರಗೆ ಭಾರತೀಯ ತಂಡದಲ್ಲಿ ಪಾರ್ವರ್ಡ್ ಆಟಗಾರನಾಗಿ, ನಾಯಕನಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 400ಕ್ಕೂ ಹೆಚ್ಚಿನ ಗೋಲುಗಳನ್ನು ಗಳಿಸಿದ್ದ ಧ್ಯಾನ್‌ಚಂದ್ ತಮ್ಮ 42ನೆ ವಯಸ್ಸಿನಲ್ಲಿ (1948ರಲ್ಲಿ) ಭಾರತೀಯ ಹಾಕಿ ತಂಡದಿಂದ ನಿವೃತ್ತಿಯನ್ನು ಪಡೆಯುತ್ತಾರೆ. ಧ್ಯಾನ್‌ಚಂದ್ ಹಾಕಿಯ ದಂತಕಥೆ ಆಗಿದ್ದಾರೆ. ಆಗಿನ ಕಾಲದಲ್ಲಿ ಪುಟ್ಬಾಲ್‌ನಲ್ಲಿ ಪೀಲೆ, ಕ್ರಿಕೆಟ್‌ನಲ್ಲಿ ಡೊನಾಲ್ಡ್ ಬ್ರಾಡ್ಮನ್‌ರವರ ಸಾಧನೆಗೆ ಸಮನಾದ ಸಾಧನೆ ಇವರದು. ಧ್ಯಾನ್ ಚಂದ್‌ರಿಗೆ ಭಾರತದಲ್ಲಿ ಒಂದು ಪುತ್ಥಳಿ ಇರುವುದು ಒಂದು ವಿಶೇಷವಲ್ಲ. ಆದರೆ ಅವರ ಪುತ್ಥಳಿಯನ್ನು ಮೊದಲ ಸ್ಥಾಪಿಸಿದ್ದು ಆಸ್ಟ್ರೀಯಾ ದೇಶದ ವಿಯನ್ನಾದಲ್ಲಿ ಎಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಖ್ಯಾತಿ ಎಷ್ಟು ಇತ್ತು ಎಂದುತಿಳಿಯುತ್ತದೆ. ಧ್ಯಾನ್ ಚಂದ್‌ರು ಭಾರತದ ಹಾಕಿಗೆ ಅಪೂರ್ವ ಕೊಡುಗೆ ನೀಡಿದ್ದರೂ ಅವರ ಜೀವಿತದ ಕೊನೆಯ ದಿನಗಳು ಸುಖಕರವಾಗಿರಲ್ಲಿಲ್ಲ. ಆರ್ಥಿಕವಾಗಿ ಸೊರಗದ್ದರು. ಕ್ಯಾನ್ಸರ್ ಪೀಡಿತರಾಗಿದ್ದ ಇವರಿಗೆ ದಿಲ್ಲಿಯ ಏಮ್ಸ್‌ನಲ್ಲಿ ಉತ್ತಮ ಚಿಕಿತ್ಸೆ ದೊರಕದೆ, ಸರಕಾರದ ನೆರವು ಕೂಡಾ ದೊರಕದೆ ಅವರನ್ನು ಜನರಲ್ ವಾರ್ಡ್‌ಗೆ ದಬ್ಬಿ ಕೆಟ್ಟದಾಗಿ ನೋಡಿಕೊಳ್ಳಲಾಯಿತು. ಕೊನೆಗೆ ದಿನಾಂಕ ಡಿಸೆಂಬರ್ 03, 1979ರಲ್ಲಿ ನಿಧನರಾಗುತ್ತಾರೆ.ಕ್ರೀಡಾ ರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿರುವ ಇವರನ್ನು ಇಡೀ ವಿಶ್ವವೇ ಈಗ ಸ್ಮರಿಸುತ್ತಿದೆ. ಲಂಡನ್ನಿನ ಹಾಕಿ ಕ್ರೀಡಾಂಗಣಕ್ಕೆ ಇವರ ಹೆಸರನ್ನು ಇಡಲಾಗಿದೆ. ಇತ್ತೀಚೆಗೆ ಬ್ರಿಟಿಷ್ ಸಂಸತ್ತು ಧ್ಯಾನ್‌ಚಂದ್‌ರಿಗೆ ಗೌರವವನ್ನು ಸೂಚಿಸಿದ್ದಾರೆ.ಭಾರತ ಸರಕಾರ 1956ರಲ್ಲಿ ಇವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿದ್ದಾರೆ.
ದಿಲ್ಲಿಯಲ್ಲಿ ಇವರ ಹೆಸರಿನಲ್ಲಿ ರಾಷ್ಟ್ರೀಯಕ್ರೀಡಾಂಗಣವನ್ನು ನಿರ್ಮಿಸಿದ್ದಾರೆ. ಗೌರವಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಇವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಘೋಷಿಸಿ, ಅಂದು ರಾಷ್ಟ್ರಪತಿಯವರಿಂದ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ರಾಜೀವ್ ಗಾಂಧೀ ಖೇಲ್ ರತ್ನ ಪ್ರಶಸ್ತಿ, ಅರ್ಜುನ ಪ್ರಶಸ್ತಿ, ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿ, ಧ್ಯಾನ್ ಚಂದ್ ಪ್ರಶಸ್ತಿಯನ್ನು ರಾಷ್ಟ್ರಪತಿಭವನದಲ್ಲಿ ನೀಡಿದರೆ ನಮ್ಮ ರಾಜ್ಯದಲ್ಲಿ ರಾಜ್ಯಪಾಲರು ರಾಜ್ಯ ಮಟ್ಟದಲ್ಲಿ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. ಭಾರತರತ್ನ ಪ್ರಶಸ್ತಿಯನ್ನು ಕ್ರೀಡಾಕ್ಷೇತ್ರಕ್ಕೂ ಕೊಡ ಬಹುದು ಎಂಬ ಕಾನೂನನ್ನು ಕೆಲ ವರ್ಷಗಳ ಹಿಂದೆ ಜಾರಿ ಮಾಡಿದ್ದಾರೆ. ಕ್ರಿಕೆಟ್ ಆಟಗಾರ ಸಚಿನ್ ತೆಂಡುಲ್ಕರ್ ರವರಗೆ ಭಾರತರತ್ನ ನೀಡಲಾಗಿದೆ ಆದರೆ ಧ್ಯಾನ್ ಚಂದ್ ರಿಗೆ ಮರಣೋತ್ತರವಾಗಿಯಾದರೂ ಭಾರತ ರತ್ನ ಸಿಗಲಿ ಎಂದು ಹಾರೈಸೋಣ.

ತಾಜಾ ಸುದ್ದಿಗಳು