ನಿರಂತರ ಮಳೆಗೆ ಮಲೆನಾಡು ತತ್ತರ

ನಿರಂತರ ಮಳೆಗೆ ಮಲೆನಾಡು ತತ್ತರ

ಬೆಂಗಳೂರು: ನಿರಂತರ ಮಳೆಯಬ್ಬರಕ್ಕೆ ಮಲೆನಾಡುತತ್ತರಿಸಿದೆ. ಕರಾವಳಿ ಕೆಲವಡೆ ಮಳೆ ಮುಂದುವರಿದಿದೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆ ಸಕಲೇಶಪುರ, ತೀರ್ಥಹಳ್ಳಿ, ಉತ್ತರ ಕನ್ನಡ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಗೋಡೆ ಕುಸಿದು ಸಾಗರ ಹಾಗೂ ಬೀದರ್‌ನಲ್ಲಿ ಮಹಿಳೆ ಹಾಗೂ ಬಾಲಕಿ ಮೃತಪಟ್ಟಿದ್ದಾರೆ.

ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ಬೀದರ್‌ ತಾಲೂಕಿನ ಕಮಲಾಪುರದಲ್ಲಿ ಮನೆ ಗೋಡೆ ಕುಸಿದು ಭಾಗ್ಯಶ್ರೀ ದತ್ತಾತ್ರೇಯ ಕುಸನೂರೆ(8) ಎಂಬ ಬಾಲಕಿ ಸಾವನ್ನಪ್ಪಿದ್ದಾಳೆ. ತಾಯಿ ಸವಿತಾಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಶಿವಮೊಗ್ಗ ಜಿಲ್ಲೆ ಸಾಗರದ ಹೊರವಲಯದ ಬೆಳಲಮಕ್ಕಿಯಲ್ಲಿ ಕಾಪೌಂಡ್‌ ಗೋಡೆ ಕುಸಿದು ಕಲ್ಲಮ್ಮ ಬಿನ್‌ ಫಕೀರಪ್ಪ (65) ಎಂಬ ವೃದೆಟಛಿ ಗುರುವಾರ ಸಾವನ್ನಪ್ಪಿದ್ದಾರೆ. ಕಲ್ಲಮ್ಮ ಅವರು ಮನೆ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪಕ್ಕದ ಮನೆಯ ಕಾಂಪೌಂಡ್‌ ಗೋಡೆ ಕುಸಿದಿದೆ.

ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮರಗಳು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡಚಣೆಯುಂಟಾಗಿದೆ. ರಸ್ತೆಯಲ್ಲಿ ಗುಡ್ಡ ಕುಸಿದಿದ್ದರಿಂದಾಗಿ 10ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು. ಲೋಕೋಪಯೋಗಿ ಇಲಾಖೆ ಸಿಬ್ಬಂದಿ, ಸ್ಥಳೀಯರ ಸಹಕಾರದಿಂದ ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಕನ್ನಹಡ್ಲು ಗ್ರಾಮದಲ್ಲೂ ಗುಡ್ಡ ಕುಸಿದು ಹಿರೇಬೈಲು ಬಾಳೆಹೊಳೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಮುಂದುವರಿದ ಹುಡುಕಾಟ: ಮಂಗಳವಾರ ರಾತ್ರಿ ಬೈಕ್‌ನಲ್ಲಿ ಹೋಗುವಾಗ ಕೊಪ್ಪ ತಾಲೂಕಿನ ಬಸ್ತಿಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಲೋಕೇಶ್‌ ಅವರ ಹುಡುಕಾಟ ಗುರುವಾರವೂ ಮುಂದುವರಿದಿದೆ. ಗುರುವಾರ ಬೆಳಗ್ಗೆಯಿಂದಲೇ ಎನ್‌ಡಿಆರ್‌ಎಫ್‌ನ 30 ಜನರ ತಂಡ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರ ಸಹಕಾರದೊಂದಿಗೆ ಹುಡುಕಾಟ ಆರಂಭಿಸಿದೆ. ಗುರುವಾರ ಸಂಜೆಯವರೆಗೂ ಲೋಕೇಶ್‌ ಪತ್ತೆಯಾಗಿರಲಿಲ್ಲ.

5ನೇ ಬಾರಿಗೆ ಮುಳುಗಿದ ಹೆಬ್ಟಾಳೆ ಸೇತುವೆ:
ಮೂಡಿಗೆರೆ ತಾಲೂಕಿನ ಹೆಬ್ಟಾಳೆ ಸೇತುವೆ 1 ತಿಂಗಳಲ್ಲಿ 5ನೇ ಬಾರಿ ಮುಳುಗಿದೆ. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಈ ಸೇತುವೆ ಬುಧವಾರ ರಾತ್ರಿ ಒಮ್ಮೆ ಮುಳುಗಿತ್ತು.

ಮಳೆ ಕಡಿಮೆಯಾದ ನಂತರ ನದಿ ನೀರು ಕಡಿಮೆಯಾಗಿ ಸೇತುವೆ ತೆರವುಗೊಂಡಿತ್ತು. ಕೆಲ ಸಮಯದ ನಂತರ ಪುನಃ ಭಾರೀ ಮಳೆಯಾಗಿದ್ದರಿಂದ ಗುರುವಾರ ಬೆಳಗ್ಗೆ ಮತ್ತೆ ಮುಳುಗಿದೆ. ಗುರುವಾರ ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ ಹಾಗೂ ಕೊಪ್ಪ ತಾಲೂಕುಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.

ತೀವ್ರ ಕಡಲು ಕೊರೆತ: ಕರಾವಳಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಕೆಲವೆಡೆ ಕಡಲು ಕೊರೆತ ತೀವ್ರಗೊಂಡಿದೆ. ಉದ್ಯಾವರ ಗ್ರಾಪಂ ವ್ಯಾಪ್ತಿಯ ಕನಕೋಡ ಪಡುಕರೆ ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಹೆಜಮಾಡಿ, ಕಾಪುವಿನಿಂದ ಮಲ್ಪೆ ಸಂಪರ್ಕದ ಏಕೈಕ ರಸ್ತೆ ಕಡಿದು ಹೋಗುವ ಭೀತಿಯಲ್ಲಿದೆ. ಕಡಲ್ಕೊರೆತ ಬಾಧಿಸದಂತೆ ಇರಿಸಲಾಗಿದ್ದ ಬೃಹತ್‌ ಗಾತ್ರದ ಕಲ್ಲುಗಳು ಅಲೆಗಳ ಆರ್ಭಟವನ್ನು ತಡೆಯಲು ವಿಫ‌ಲವಾಗಿವೆ. ಕಳೆದ ಎರಡು ದಿನಗಳಿಂದ ಬೃಹತ್‌ ಗಾತ್ರದ ಕಲ್ಲುಗಳನ್ನು ಅಲೆಗಳು ಕಡಲಾಳಕ್ಕೆ ಎಳೆದೊಯ್ಯುತ್ತಿವೆ.

ನೀರಿನಲ್ಲೇ ಮುಳುಗಿ ಮೃತದೇಹ ಸಾಗಿಸಿದರು!
ಮಳೆಯ ರಭಸಕ್ಕೆ ಸೇತುವೆ ಕುಸಿದ ಪರಿಣಾಮ ಶವಸಂಸ್ಕಾರಕ್ಕೆ ಮೃತದೇಹವನ್ನು ನೀರಿನಲ್ಲಿಯೇ ಸಾಗಿಸಿದ ಘಟನೆ ಅಂಕೋಲಾದ ಕೇಣಿ ಗಾಂವಕರ ವಾಡಾದಲ್ಲಿ ಗುರುವಾರ ನಡೆದಿದೆ.

ಅಂಕೋಲಾ ತಾಲೂಕಿನ ಕೇಣಿ ಗ್ರಾಮದಲ್ಲಿ ಬೆಳಗ್ಗೆ 80 ವರ್ಷದ ಸುಶೀಲಾ ಎನ್ನುವ ವೃದೆಟಛಿ ಮೃತಪಟ್ಟಿದ್ದರು. ರುದ್ರ ಭೂಮಿಗೆ ಸಾಗುವ ಕಾಲು ಸೇತುವೆ ಮಳೆ ನೀರಿಗೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಮೃತದೇಹವನ್ನು ನೀರಿನಲ್ಲೇ ನಡೆದು ಸಾಗಿಸಲಾಯಿತು. ಇದಲ್ಲದೇ ಶವವನ್ನು ಸುಡಲು ಕಟ್ಟಿಗೆಯನ್ನು ಸಂಬಂಧಿಗಳು ನೀರಿನಲ್ಲಿ ಮುಳುಗಿಕೊಂಡೇ ಸಾಗಿಸಿದರು. ರುದ್ರ ಭೂಮಿಗೆ ಸಾಗಲು ವರ್ಷದ ಹಿಂದೆ ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಮಳೆ ನೀರಿಗೆ ಕಾಲು ಸೇತುವೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ನಿರ್ಮಾಣವಾಯಿತು.

ತಾಜಾ ಸುದ್ದಿಗಳು