ಕಾಯುವಿಕೆ ತಡೆಗೆ ರಿಯಲ್‌ ಟೈಮ್‌ ಸಾರಿಗೆ

ಕಾಯುವಿಕೆ ತಡೆಗೆ ರಿಯಲ್‌ ಟೈಮ್‌ ಸಾರಿಗೆ

ಬೆಂಗಳೂರು: ಬಸ್‌ ಯಾವಾಗ ಬರುತ್ತೆ? ಬಿಎಂಟಿಸಿಯ ಪ್ರಮುಖ ನಿಲ್ದಾಣಗಳು, ಮೊಬೈಲ್‌ ಆ್ಯಪ್‌, ವೆಬ್‌ಸೈಟ್‌ ಮೂಲಕ ಬಸ್‌ ಆಗಮನ ಮತ್ತು ನಿರ್ಗಮನ ಸಮಯದ ಮಾಹಿತಿ ನೀಡುವ ವ್ಯವಸ್ಥೆ ಇದ್ದರೂ ಪ್ರಯಾಣಿಕರು ಈ ಪ್ರಶ್ನೆ ಕೇಳುವುದನ್ನು ಮಾತ್ರ ಬಿಟ್ಟಿಲ್ಲ.

ಕಾರಣ, ನಿಲ್ದಾಣ, ಜಾಲತಾಣಗಳಲ್ಲಿ ತಿಳಿಸಿದ ಸಮಯಕ್ಕೆ ಸರಿಯಾಗಿ ಬಸ್‌ ಬಂದದ್ದೇ ಇಲ್ಲ! ಪ್ರಯಾಣಿಕರನ್ನು ಈ ಕಿರಿಕಿರಿಯಿಂದ ಮುಕ್ತಗೊಳಿಸಿ, “ರಿಯಲ್‌ ಟೈಮ್‌’ ಸಾರಿಗೆ ಸೇವೆ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮುಂದಾಗಿದೆ. ಬಸ್‌ಗಳ ಸಮಯ ಏರುಪೇರಾಗಲು ಕಾರಣ ಸಂಚಾರದಟ್ಟಣೆ. ಹೀಗಾಗಿ ಆಯಾ ಭಾಗಗಳ ಸಂಚಾರ ದಟ್ಟಣೆಗೆ ಅನುಗುಣವಾಗಿ ಆರಂಭದಲ್ಲಿ ಒಂದು ಸಾವಿರ ಶೆಡ್ನೂಲ್‌ಗ‌ಳನ್ನು (ಅನುಸೂಚಿ) ಪರಿಷ್ಕರಿಸಲು ಉದ್ದೇಶಿಸಿರುವ ಬಿಎಂಟಿಸಿ, ಈಗಾಗಲೇ ಪ್ರಾಯೋಗಿಕವಾಗಿ 175 ಪ್ರಮುಖ ಶೆಡ್ನೂಲ್‌ಗ‌ಳನ್ನು ಮರು ಸಂಯೋಜನೆ ಮಾಡಿದೆ. ಈ ಪ್ರಯೋಗ ಫ‌ಲ ನೀಡಿದ್ದು, ಶೇ.95ರಷ್ಟು ಬಸ್‌ಗಳು ನಿರೀಕ್ಷಿತ ಸಮಯಕ್ಕೆ ಆಗಮಿಸುತ್ತಿವೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನುರಾಜ್‌ ತಿಳಿಸಿದರು.

3 ಸಾವಿರ ಬಸ್‌ ಶೆಡ್ನೂಲ್‌ ಪರಿಷ್ಕರಣೆ: ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಿಂದ ಕಾಡುಗೋಡಿ ತಲುಪಲು ಬಿಎಂಟಿಸಿ ಬಸ್‌ಗೆ ನಿಗದಿಪಡಿಸಿರುವ ಸಮಯ 45 ನಿಮಿಷ. ಆದರೆ, ಆ ಮಾರ್ಗದ ಸಂಚಾರದಟ್ಟಣೆ ಮತ್ತು ಕಿರಿದಾದ ಹಾದಿ ಕ್ರಮಿಸಲು ವಾಸ್ತವವಾಗಿ ಕನಿಷ್ಠ ಎರಡೂವರೆ ತಾಸು ಬೇಕಾಗುತ್ತದೆ. ಇಂತಹ ಸುಮಾರು ಮೂರು ಸಾವಿರ
ಪ್ರಮುಖ ಶೆಡ್ನೂಲ್‌ಗ‌ಳನ್ನು ಗುರುತಿಸಿ, ವೇಳಾಪಟ್ಟಿ ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಆ ಪೈಕಿ ಮೊದಲ ಹಂತದಲ್ಲಿ ಸಾವಿರ ಶೆಡ್ನೂಲ್‌ಗ‌ಳನ್ನು ಕೈಗೆತ್ತಿಕೊಂಡಿದ್ದು, ಎರಡು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಬುಧವಾರ ಸಂಸ್ಥೆ ಸಾಧನೆಗಳ ಕುರಿತು ಪ್ರಾತ್ಯಕ್ಷಿಕೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚತುರ ಸಾರಿಗೆ ವ್ಯವಸ್ಥೆ (ಐಟಿಎಸ್‌) ನೆರವಿನಿಂದ “ಪೀಕ್‌ ಅವರ್‌’ ಮತ್ತು ಉಳಿದ ಅವಧಿಯಲ್ಲಿ ಬಸ್‌ಗಳು ಮಾರ್ಗ ಕ್ರಮಿಸಲು ತೆಗೆದುಕೊಳ್ಳುತ್ತಿರುವ ಸಮಯವನ್ನು ವಿಶ್ಲೇಷಣೆ ಮಾಡಿ, ಶೆಡ್ನೂಲ್‌ಗ‌ಳ ವೇಳೆಯನ್ನು ಪರಿಷ್ಕರಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಬಸ್‌ಗಳ ಆಗಮನ-ನಿರ್ಗಮನದ ನಿಖರ ಮಾಹಿತಿ ದೊರೆಯಲಿದ್ದು, ವಿನಾಕಾರಣ ಕಾಯುವುದು ತಪ್ಪಲಿದೆ. ಜತೆಗೆ ಸಮಯ ಪಾಲನೆ ಮಾಡಲು ಚಾಲಕರಿಗೂ ಅನುಕೂಲವಾಗುತ್ತದೆ ಎಂದರು.

ವೋಲ್ವೊ ಬಸ್ಸುಗಳ ಆದಾಯ ಶೇ.17ರಷ್ಟು ವೃದ್ಧಿ ವೋಲ್ವೊ ಬಸ್‌ಗಳ ಕಾರ್ಯಾಚರಣೆ ನಷ್ಟದಲ್ಲಿದ್ದರೂ, ಇತ್ತೀಚಿನ ದಿನಗಳಲ್ಲಿ ಈ ಬಸ್‌ಗಳಿಂದ ಬರುವ ಆದಾಯದಲ್ಲಿ ಶೇ.17ರಷ್ಟು ಏರಿಕೆ ಕಂಡುಬಂದಿದೆ. ವೋಲ್ವೊ ಬಸ್‌ಗಳ ಪ್ರತಿ ಕಿ.ಮೀ ಆದಾಯ ಕಳೆದ ವರ್ಷ 58.29 ರೂ. ಇತ್ತು. ಮೇ ಅಂತ್ಯಕ್ಕೆ ಅದು 65.33 ರೂ. ಆಗಿದೆ. ಆದರೆ, ಕಾರ್ಯಾಚರಣೆ ವೆಚ್ಚ ಪ್ರತಿ ಕಿ.ಮೀ.ಗೆ 79 ರೂ. ಇದೆ. ಬಸ್‌ಗಳ ನಿರ್ವಹಣೆ ವ್ಯವಸ್ಥೆ ಉತ್ತಮಗೊಳಿಸಿರುವುದು ಆದಾಯ ಏರಿಕೆಗೆ ಪ್ರಮುಖ ಕಾರಣ ಎಂದು ವಿ. ಪೊನ್ನುರಾಜ್‌ ತಿಳಿಸಿದರು. ವೋಲ್ವೊ ಬಸ್‌ಗಳು ಮಾತ್ರ ನಷ್ಟದಲ್ಲಿ ಓಡುತ್ತಿಲ್ಲ. ಸಾಮಾನ್ಯ ಬಸ್‌ಗಳೂ ಇದೇ ಹಾದಿಯಲ್ಲಿವೆ. ಸಾಮಾನ್ಯ ಬಸ್‌ಗಳ ಪ್ರತಿ ಕಿ.ಮೀ ಆದಾಯ ಪ್ರಮಾಣ 50.08 ರೂ. ಇದೆ. ಆದರೆ, ಕಾರ್ಯಾಚರಣೆ ವೆಚ್ಚ 56.28 ರೂ. ಇದೆ. ಒಟ್ಟಾರೆ 2018-19ರಲ್ಲಿ ಬಿಎಂಟಿಸಿ 217 ಕೋಟಿ ರೂ. ನಷ್ಟದಲ್ಲಿದೆ. ಕಳೆದ ವರ್ಷ ನಷ್ಟದ ಬಾಬ್ತು 260 ಕೋಟಿ ರೂ. ಇತ್ತು. ಈ ವರ್ಷ 1,299 ಬಸ್‌ಗಳನ್ನು ಗುಜರಿಗೆ ಹಾಕಲು ಗುರುತಿಸಿದ್ದು, ಈ ಪೈಕಿ ಈಗಾಗಲೇ 200 ಬಸ್‌ಗಳನ್ನು ಗುಜರಿಗೆ ಹಾಕಲಾಗಿದೆ ಎಂದು ವಿವರಿಸಿದರು.

ಇಂದಿನಿಂದ ಪಾಸು ವಿತರಣೆ ಕೊನೆಗೂ ನಗರ ವ್ಯಾಪ್ತಿಯ ವಿದ್ಯಾರ್ಥಿಗಳ ರಿಯಾಯ್ತಿ ದರದ ಪಾಸುಗಳ ವಿತರಣೆಗೆ ಮುಹೂರ್ತ ನಿಗದಿಯಾಗಿದ್ದು, ಗುರುವಾರದಿಂದ ಪಾಸು ವಿತರಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ. 20 ಸಾವಿರ ಸ್ಮಾರ್ಟ್‌ಕಾರ್ಡ್‌ ಮಾದರಿ ಬಸ್‌ ಪಾಸ್‌ಗಳು ಸಿದ್ಧವಾಗಿವೆ. ಪಾಸುಗಳು ಅಂಚೆ ಮೂಲಕವೇ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಲಿದ್ದು, ಹಣ ಪಾವತಿಸಿ ಪಾಸು ಪಡೆಯಬಹುದು ಎಂದು ಪೊನ್ನುರಾಜ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರತಿ ವರ್ಷ ನಾಲ್ಕು ಲಕ್ಷ ವಿದ್ಯಾರ್ಥಿಗಳ ಪಾಸು ವಿತರಣೆಯಾಗಲಿದ್ದು, ಈ ಪೈಕಿ ಜುಲೈ ಅಂತ್ಯಕ್ಕೆ 1.20 ಲಕ್ಷ ಪಾಸುಗಳನ್ನು ವಿತರಿಸಲಾಗುತ್ತದೆ. ಇದರಲ್ಲಿ ಈವರೆಗೆ 50 ಸಾವಿರ ವಿದ್ಯಾರ್ಥಿಗಳು ಪಾಸಿಗಾಗಿ ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, 20 ಸಾವಿರ ವಿದ್ಯಾರ್ಥಿಗಳಿಗೆ ಗುರುವಾರದಿಂದ ಪಾಸು ವಿತರಿಸಲಾಗುವುದು.

ಪಾಸ್‌ ಪಡೆಯುವುದು ತುಂಬಾ ಸುಲಭ ಬಿಎಂಟಿಸಿ ವೆಬ್‌ಸೈಟ್‌ “mybmtc.com’ ಅಥವಾ ಇ-ಗವರ್ನನ್ಸ್‌ ಆ್ಯಪ್‌ನಲ್ಲಿ “161′ ಡಯಲ್‌ ಮಾಡುವ ಮೂಲಕ ಮೊಬೈಲ್‌ನಲ್ಲೇ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದು. ನಿಗಮದ ವೆಬ್‌ಸೈಟ್‌ ಪರದೆ ಮೇಲೆ ಸ್ಟುಡೆಂಟ್‌ ಪಾಸ್‌ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ, ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ (ಎನ್‌ರೋಲ್‌ಮೆಂಟ್‌ ಸಂಖ್ಯೆ) ಮತ್ತು ಹೆಸರು ನಮೂದಿಸಬೇಕು. ನಂತರ ಸಂಪೂರ್ಣ ಮಾಹಿತಿ ಬರುತ್ತದೆ. ಅಲ್ಲಿ ಪೋಷಕರ ಮೊಬೈಲ್‌ ಸಂಖ್ಯೆ ನೀಡಿದರೆ, ಆ ಸಂಖ್ಯೆಗೆ ಅರ್ಜಿ ಸಲ್ಲಿಕೆಯಾದ ಬಗ್ಗೆ ಸಂದೇಶ ಬರುತ್ತದೆ. ವಾರದಲ್ಲಿ ಆ ವಿದ್ಯಾರ್ಥಿಗೆ ಪಾಸು ಕೂಡ ಬರುತ್ತದೆ. ಪ್ರಸ್ತುತ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಈ ಸೇವೆ ಲಭ್ಯವಿದೆ.

ತಾಜಾ ಸುದ್ದಿಗಳು