ಎಂದಿಗೂ ಬತ್ತದ “ತಣ್ಣೀರು’!

ಎಂದಿಗೂ ಬತ್ತದ “ತಣ್ಣೀರು’!

ಚಿತ್ರದುರ್ಗ ಕೋಟೆ ಎಂದಾಕ್ಷಣ ನೆನಪಾಗುವುದು ಏಳು ಸುತ್ತಿನ ಕೋಟೆ, ಮದಕರಿ ನಾಯಕರು ಹಾಗೂ ಒನಕೆ ಓಬವ್ವ ಮತ್ತು ಶತ್ರುಗಳು ತೂರಿಬರಲು ನೆರವಾದ. ಒನಕೆ ಓಬವ್ವನ ಕಿಂಡಿಯ ಪಕ್ಕದಲ್ಲೇ ಇರುವ ವಿಸ್ಮಯ ಮೂಡಿಸುವ ಸಣ್ಣದಾದ ಜಲಮೂಲದ ಬಗ್ಗೆ ಎಷ್ಟೋ ಜನರಿಗೆ ತಿಳಿದಿರಲಿಕ್ಕಿಲ್ಲ. ಅದುವೇ “ತಣ್ಣೀರು ದೋಣಿ’. ಹೈದರಾಲಿಯ ಸೈನಿಕರು ಕೋಟೆಯೊಳಗೆ ತೂರಿ ಬರುವಾಗ ಓಬವ್ವ ನೀರು ತರಲೆಂದು ಇದೇ ತಣ್ಣೀರು ದೋಣಿಗೆ ಬಂದಿದ್ದಳೆಂಬುದು ಪ್ರತೀತಿ. ಈ ತಣ್ಣೀರು ದೋಣಿಯ ವೈಶಿಷ್ಟ್ಯವೆಂದರೆ ಇಷ್ಟು ವರ್ಷಗಳಲ್ಲಿ ಒಮ್ಮೆಯೂ ಇದರ ಜಲಮೂಲ ಬತ್ತಿಲ್ಲ. ಮೇಲುದುರ್ಗದಲ್ಲಿ ಬಿದ್ದ ಮಳೆ ನೀರು ಝರಿಯಾಗಿ ಹರಿದು ಗೋಪಾಲಸ್ವಾಮಿ ಹೊಂಡಕ್ಕೆ ಬರುತ್ತದೆ. ಅಲ್ಲಿಂದ ಅಕ್ಕ-ತಂಗಿಯರ ಹೊಂಡಕ್ಕೆ ಹರಿದು ಮುಂದೆ ಗುಪ್ತಗಾಮಿನಿಯಾಗಿ ಹರಿಯುವ ನೀರು ಮುಂದೆ ಇದೇ ತಣ್ಣೀರು ದೋಣಿಯ ಮೂಲಕ ಹರಿದು ಒನಕೆ ಓಬವ್ವನ ಕಿಂಡಿಯ ಮೂಲಕ ಸಾಗಿ ನಗರವನ್ನು ಸೇರುತ್ತದೆ. ನೂರಾರು ವರ್ಷಗಳಿಂದ ಎಷ್ಟೇ ಭೀಕರ ಬರಗಾಲ ಬಂದರೂ ಒಮ್ಮೆಯೂ ಈ ಜಲಮೂಲ ಬತ್ತಿಲ್ಲವೆನ್ನುವುದು ಅಚ್ಚರಿಯ ವಿಷಯವೇ ಸರಿ. ದೋಣಿಯಲ್ಲಿನ ನೀರು ತಿಳಿಯಾಗಿದ್ದು ಎಂಥವರಿಗೂ ಕುಡಿಯದೇ ಇರಲು ಮನಸಾಗದೇ ಇರದು. ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿಯುವ ನೀರು, ಬೇಸಿಗೆಯಲ್ಲಿ ಮಾತ್ರ ಕಡಿಮೆ. ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಈ ಜಲಮೂಲವು ಇಲ್ಲಿನ ಒಂದು ಆಕರ್ಷಣೆ. ಮುಂದೆ ಚಿತ್ರದುರ್ಗಕ್ಕೆ ಹೋದಾಗ ಕೋಟೆಯ ಜೊತೆಗೆ “ತಣ್ಣೀರು ದೋಣಿ’ಯನ್ನು ನೋಡಲು ಮರೆಯದಿರಿ.

ತಾಜಾ ಸುದ್ದಿಗಳು