ಅಮ್ಮನಿಗೆ ಆಶ್ಚರ್ಯ ಕಾದಿತ್ತು!

ಅಮ್ಮನಿಗೆ ಆಶ್ಚರ್ಯ ಕಾದಿತ್ತು!

“ನೇಹಾಗೆ ಬುದ್ಧಿ ಬರೋದು ಯಾವಾಗ ?’ಎಂದು ಬೇಸರ ಮತ್ತು ಸಿಟ್ಟಿನಿಂದ ಗೊಣಗುತ್ತಿದ್ದಳು ಅಮ್ಮ. ಎಂಟನೇ ತರಗತಿಯಲ್ಲಿ ಓದುತ್ತಿದ್ದ ನೇಹಾಳ ರೂಮಿನಲ್ಲಿ ದೊಡ್ಡ ಯುದ್ಧವೇ ನಡೆದಂತೆ ಕಾಣುತ್ತಿತ್ತು. ಹಾಸಿಗೆ ಮೇಲೆ ಹರಡಿದ್ದ ಬೆಡ್‌ಶೀಟ್‌, ಮುದ್ದೆಯಾಗಿ ನೆಲದ ಮೇಲೆ ಬಿದ್ದಿದ್ದ ಒದ್ದೆ ಟವೆಲ್‌, ಮೂಲೆಯಲ್ಲಿ ಗಲೀಜಾದ ಸಾಕ್ಸ್‌, ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿದ ಟೀಶರ್ಟ್‌- ಪ್ಯಾಂಟು- ಕರ್ಚಿàಪು… ಒಳಗೆ ಕಾಲಿಡಲು ಜಾಗವೇ ಇಲ್ಲದ ಇರಲಿಲ್ಲ. ದಿನವೂ ಅಮ್ಮ ಅಪ್ಪ ಈ ಕುರಿತು ಎಷ್ಟು ಹೇಳಿದರೂ ನೇಹಾಳದ್ದು “ನಂಗೆ ಟೈಮಿಲ್ಲ’ ಅಂತ ಒಂದೇ ರಾಗ. ಮಗಳ ಮೇಲೆ ಸಿಟ್ಟು ಬಂದು ಅಮ್ಮ ಕೂಗಾಡಿದರೂ ಪ್ರಯೋಜನವಿರಲಿಲ್ಲ. ಕಡೆಗೂ ಅಮ್ಮನೇ ಸೋಲುತ್ತಿದ್ದರು. ಮಗಳ ಕೋಣೆಯ ಅವ್ಯವಸ್ಥೆ ನೋಡಲಾಗದೆ ತಾನೇ ಒಪ್ಪ ಮಾಡಿಡುತ್ತಿದ್ದರು. ನೇಹಾ ಶಾಲೆ ಮುಗಿಸಿ ಸಂಜೆ ಹಿಂತಿರುಗಿ ಬರುವಷ್ಟರಲ್ಲಿ ಅವಳ ಕೋಣೆ ಸ್ವತ್ಛಗೊಂಡಿರುತ್ತಿದ್ದವು. ಆದರೆ ರಾತ್ರಿಯಾಗುವಷ್ಟರಲ್ಲಿ ಮತ್ತೆ ಗಲೀಜು ಮಾಡಿಬಿಡುತ್ತಿದ್ದಳು. ಎಲ್ಲೆಂದರಲ್ಲಿ ಬಟ್ಟೆ ಹರಡಿ ಬಿಡುತ್ತಿದ್ದಳು.

ಒಮ್ಮೆ ಕೆಲಸದ ನಿಮಿತ್ತ ಅಮ್ಮ, ಎರಡು ದಿನ ಬೇರೆ ಊರಿಗೆ ಹೋಗಬೇಕಾಗಿತ್ತು. ವಾರಾಂತ್ಯವಾದ್ದರಿಂದ ನೇಹಾ ಮತ್ತು ಅಪ್ಪ ಇಬ್ಬರಿಗೂ ರಜೆ. ತಿಂಡಿ ಊಟ ಆಯ್ತು; ಟಿ.ವಿ ನೋಡಿದ್ದಾಯ್ತು. ಯಥಾಪ್ರಕಾರ ನೇಹಾ ಬಟ್ಟೆಗಳನ್ನು ಕಂಡಕಂಡಲ್ಲಿ ಬಿಸಾಡಿದಳು. ರಾತ್ರಿ ನೇಹಾಳಿಗೆ ಹಾಸಿಗೆಯಲ್ಲಿ ಮಲಗಲು ಜಾಗವೇ ಇರಲಿಲ್ಲ. ಹೇಗೋ ಅಲ್ಲಲ್ಲೇ ಸರಿಸಿ ಬಟ್ಟೆಗಳ ನಡುವೆಯೇ ಜಾಗ ಮಾಡಿಕೊಂಡು ಮಲಗಿದಳು ನೇಹಾ. ನಿದ್ದೆ ಬರಲಿಲ್ಲ. ಸ್ವಲ್ಪ ಹೊತ್ತಿಗೆ ಎಲ್ಲಿಂದಲೋ ಏನೋ ಪಿಸು ಪಿಸು ಮಾತು ಕೇಳಿಸಿತು. “ಈ ಹುಡುಗಿ ನೇಹಾ ಇದ್ದಾಳಲ್ಲ… ಅವಳು ಮಹಾ ಸೋಮಾರಿ. ಕೆಟ್ಟ ಹುಡುಗಿ !’. ನೇಹಾಳಿಗೆ ಎದ್ದು ಲೈಟ್‌ ಆನ್‌ ಮಾಡಲು ಭಯವಾಯಿತು. ಮಲಗಿದ್ದಲ್ಲಿಂದಲೇ ಆ ಮಾತುಗಳನ್ನು ಕೇಳತೊಡಗಿದಳು. “ನನಗೆ ಈ ಹುಡುಗಿ ಜೊತೆ ಇದ್ದು ಸಾಕಾಗಿ ಹೋಗಿದೆ. ಯಾವಾಗಲೂ ಮುದುರಿ ಮುದುರಿ ನಮ್ಮನ್ನು ಬಿಸಾಡುತ್ತಾಳೆ. ಅಂಗಡಿಯಿಂದ ಕೊಂಡು ತಂದ ಹೊಸತರಲ್ಲಿ ಮಾತ್ರ ತುಂಬಾ ಪ್ರೀತಿ. ಅಮೇಲೆ ನಿಕೃಷ್ಟವಾಗಿ ಕಾಣುತ್ತಾಳೆ!’ ಎಂದು ಸಿಟ್ಟಿನಿಂದ ಹೇಳಿತು ನೇಹಾಳ ಪಿಂಕ್‌ ಫ್ರಾಕು. ಅಲ್ಲೇ ಇದ್ದ ಯೂನಿಫಾರ್ಮ್ “ಹೊಸತರಲ್ಲಾದರೂ ನಿಮ್ಮ ಮೇಲೆ ಪ್ರೀತಿ ತೋರುತ್ತಾಳೆ. ಆದರೆ ನನ್ನ ಮೇಲೆ ಮಾತ್ರ ಯಾವತ್ತೂ ಪ್ರೀತಿ ತೋರಿದ್ದೇ ಇಲ್ಲ.’ ಎಂದು ಬೇಸರ ವ್ಯಕ್ತಪಡಿಸಿತು. ಮೂಲೆಯಲ್ಲಿದ್ದ ಸಾಕ್ಸ್‌ “ನೇಹಾಳ ಅಮ್ಮ ನನ್ನನ್ನು ಒಗೆಯುತ್ತಿರುವುದಕ್ಕೆ ಇಷ್ಟು ಚೆನ್ನಾಗಿದ್ದೇನೆ. ಇಲ್ಲದೇ ಹೋಗಿದ್ದರೆ ಅವಳ ಗೆಳತಿಯರೆಲ್ಲಾ ಮೂಗು ಮುಚ್ಚಿಕೊಳ್ಳಬೇಕಾಗಿತ್ತು.’ ಎಂದಿತು. ಕಪಾಟಿನಲ್ಲಿದ್ದ ಎಲ್ಲಾ ಬಟ್ಟೆಗಳೂ ಹೊರಬಂದು ಅಸಹನೆ ತೋಡಿಕೊಂಡವು. ಇದನ್ನೆಲ್ಲಾ ಮಲಗಿದ್ದಲ್ಲಿಂದಲೇ ಕೇಳುತ್ತಿದ್ದ ನೇಹಾಳಿಗೆ ತುಂಬಾ ಬೇಜಾರಾಯಿತು. ತನ್ನ ನಿರ್ಲಕ್ಷದಿಂದಾಗಿ ಕೆಟ್ಟ ಹುಡುಗಿ ಎನ್ನಿಸಿಕೊಳ್ಳಬೇಕಾಗಿ ಬಂದಿದೆ ಎಂಬ ಸತ್ಯ ಅವಳಿಗರಿವಾಯಿತು.
ಮಾರನೇ ದಿನ ಬೆಳಗ್ಗೆ ನೇಹಾ ಶಾಲೆಗೆ ಹೋದ ನಂತರ, ಅಮ್ಮ ಕೆಲಸ ಮುಗಿಸಿ ಮನೆಗೆ ವಾಪಸ್ಸಾದರು. ಬಂದ ಕೂಡಲೆ ಮೊದಲು ನೇಹಾಳ ರೂಮ್‌ ಕ್ಲೀನ್‌ ಮಾಡಲು ಒಳ ಹೊಕ್ಕರು. ಅವರಿಗೆ ಆಶ್ಚರ್ಯ ಕಾದಿತ್ತು. ಬಟ್ಟೆಗಳೆಲ್ಲವೂ ಕಪಾಟಿನಲ್ಲಿ ನೀಟಾಗಿ ಜೋಡಿಸಲ್ಪಟ್ಟಿದ್ದವು. ಹಾಸಿಗೆ ಮೇಲೆ ಬೆಡ್‌ಶೀಟ್‌ ಹೊರತಾಗಿ ಯಾವುದೇ ಬಟ್ಟೆ ಇರಲಿಲ್ಲ. ನೆಲದ ಮೇಲೆ ಒಂದೇ ಒಂದು ಕಸ ಇರಲಿಲ್ಲ. ಇದು ನೇಹಾಳ ರೂಮೇ ಎಂದು ಅಮ್ಮನಿಗೆ ಅನುಮಾನ ಬರುವಷ್ಟು ರೂಮ್‌ ಶುಚಿಯಾಗಿತ್ತು. ಅವಳ ಅಪ್ಪನನ್ನು ಕೇಳಿದಾಗ ಎಲ್ಲ ಕೆಲಸವನ್ನೂ ನೇಹಾಳೇ ಮಾಡಿದ್ದಾಳೆ ಎಂದರು. ಅಮ್ಮನಿಗೆ ನಂಬಲೇ ಸಾಧ್ಯವಾಗಲಿಲ್ಲ. ಸಂಜೆ ಶಾಲೆಯಿಂದ ನೇಹಾ ವಾಪಸ್ಸಾದಾಗ ಅಮ್ಮ ಅವಳಿಷ್ಟದ ಚಿತ್ರಾನ್ನ ತಯಾರಿಸಿ ಕಾಯುತ್ತಿದ್ದರು. ನೇಹಾಳನ್ನು ಕಂಡ ಕೂಡಲೆ ತಬ್ಬಿ ಮುದ್ದುಗರೆದರು.
ಡಾ. ಕೆ.ಎಸ್‌.ಚೈತ್ರಾ

ತಾಜಾ ಸುದ್ದಿಗಳು