ಸುರಂಗದೊಳಗೆ ಅರಮನೆಯಂಥ ಗುಹೆ

ಸುರಂಗದೊಳಗೆ ಅರಮನೆಯಂಥ ಗುಹೆ

ಮೆರಿಕಾದ ವರ್ಜೀನಿಯಾ ದೇಶದ ಪೂರ್ವಭಾಗದಲ್ಲಿ ಇರುವ ಲುರೈ ಗುಹೆಗಳನ್ನು ನೋಡಿ ಆನಂದಿಸಲು ಎರಡು ಕಣ್ಣುಗಳು ಸಾಲದು. ಈ ಮನಮೋಹಕ ಗುಹೆ ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದರ ಅಸ್ತಿತ್ವದ ಕುರಿತು ಹೊರಜಗತ್ತಿಗೆ ತಿಳಿದುಬಂದಿದ್ದು 1878ರಲ್ಲಿ.

ಲುರೈ ಗುಹೆಗಳನ್ನು ನೋಡಲು ಸುರಂಗ ಮಾರ್ಗದಲ್ಲಿ ತೆರಳಬೇಕು. ಈ ಮಾರ್ಗದಲ್ಲಿ ತೆರಳುವಾಗ ಭೂಮಿಯ ಅಡಿ ನಡೆಯಬೇಕಾಗುತ್ತದೆ. ಈ ಗುಹೆಗಳು ಸುಮಾರು 2.4 ಕಿ.ಮೀ ವಿಸ್ತಾರದಲ್ಲಿ ವ್ಯಾಪಿಸಿಕೊಂಡಿದೆ. ಈ ಅತ್ಯಾಕರ್ಷಕ ಗುಹೆಗಳ ಕೆಲವು ಭಾಗಗಳಲ್ಲಿ ನೀರಿನಿಂದ ಕೊರೆಯಲ್ಪಟ್ಟ ಕಲ್ಲುಗಳಿದ್ದು, ಅವುಗಳಿಂದ ನೀರು ಜಿನುಗುತ್ತದೆ. ಇದರಿಂದಾಗಿ ಸಣ್ಣ ತೊರೆಯೇ ಅಲ್ಲಿ ಹರಿಯುತ್ತದೆ.
ಈ ಗುಹೆ ಕಮರ್ಷಿಯಲ್‌ ಗುಹೆ ಎಂದೇ ಹೆಸರುವಾಸಿ. ಏಕೆಂದರೆ ಸರ್ಕಾರವೇ ಈ ಗುಹೆಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳು ಮಾತ್ರವಲ್ಲದೆ, ಅನೇಕ ಸವಲತ್ತುಗಳನ್ನು ಒದಗಿಸಿದೆ. ಗುಹೆ ಎಂದಾಕ್ಷಣ ತಲೆ ತಗ್ಗಿಸಿಕೊಂಡು ಹೋಗಬೆಕು, ತುಂಬಾ ಇಕ್ಕಟ್ಟಿನ ಜಾಗ ಎಂದೆಲ್ಲಾ ತಿಳಿಯಬೇಡಿ. ಒಳಹೊಕ್ಕರೆ ಅದರ ವಿಸ್ತಾರವನ್ನು ಕಂಡು ಎಂಥವರೂ ಬೆರಗಾಗುತ್ತಾರೆ. ದೊಡ್ಡ ಅರಮನೆಯಷ್ಟು ದೊಡ್ಡದಿದೆ ಈ ಗುಹೆ.
ಲುರೈನ ಇನ್ನೊಂದು ವಿಶಿಷ್ಟತೆಯೆಂದರೆ ಅದರೊಳಗಿನ ಚೂಪು ಕಲ್ಲುಗಳ ಚಿತ್ರ ವಿಚಿತ್ರ ವಿನ್ಯಾಸಗಳು!

ಗುಹೆಯೊಳಗೆ ಸಂಗೀತ ವಾದ್ಯ!
ಗುಹೆಯೊಳಗೆ ಸಂಗೀತ ವಾದ್ಯವೊಂದನ್ನು ಇರಿಸಿದ್ದಾರೆ. ಅದರಲ್ಲಿರುವ ಒತ್ತುಗುಂಡಿಯನ್ನು ಒತ್ತಿದಾಗ ಥರ ಥರದ ಸಂಗೀತ ನಾದ ಹೊಮ್ಮುತ್ತದೆ. ಗುಹೆಯೊಳಗೆ ಶಬ್ದತರಂಗಗಳು ಗೋಡೆಗಳಿಗೆಲ್ಲಾ ಬಡಿದು, ಪ್ರತಿಧ್ವನಿಸುತ್ತಾ, ಒಂದದ್ಭುತ ಸಂಗೀತ ಲೋಕವೇ ಅಲ್ಲಿ ಸೃಷ್ಟಿಯಾಗುತ್ತದೆ.

ಪುರುಷೋತ್ತಮ್‌

ತಾಜಾ ಸುದ್ದಿಗಳು